*ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ* / *ರಾಜ್ಯದ 7 ಕ್ಷೇತ್ರಕ್ಕೆ ಹುರಿಯಾಳು ಪ್ರಕಟ*/ *ಮುಂದುವರಿದ ‘ಪೇಡೆ’ಕುತೂಹಲ*
ಹುಬ್ಬಳ್ಳಿ : ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸಹ ಮುಂದಿನ ಲೋಕಸಭೆ ಚುನಾವಣೆಗೆ ೩೯ ಅಭ್ಯರ್ಥಿಗಳ ಮೊದಲ ಪಟ್ಟಿ ಇಂದು ಬಿಡುಗಡೆ ಮಾಡಿದ್ದು ರಾಜ್ಯದ ಏಳು ಕ್ಷೇತ್ರಗಳ ಹುರಿಯಾಳನ್ನು ಪ್ರಕಟಿಸಿದೆ.
ತುಮಕೂರಿನಿಂದ ಮುದ್ದಹನುಮೇಗೌಡ, ಶಿವಮೊಗ್ಗದಿಂದ ಚಿತ್ರ ನಟ ಶಿವರಾಜಕುಮಾರ ಪತ್ನಿ ಗೀತಾ ಶಿವರಾಜಕುಮಾರ, ವಿಜಯಪುರದಿಂದ ರಾಜು ಅಲಗೂರ,ಬೆಂಗಳೂರು ಗ್ರಾಮಾಂತರದಿಂದ ಹಾಲಿ ಸಂಸದ ಡಿ.ಕೆ.ಸುರೇಶ, ಹಾಸನದಿಂದ ಶ್ರೇಯಸ್ ಪಟೇಲ, ಮಂಡ್ಯದಿಂದ ವೆಂಕಟರಮಣೇಗೌಡ ( ಸ್ಟಾರ ಚಂದ್ರು ಕೈ ಹುರಿಯಾಳಾಗಿದ್ದಾರೆ.
ನೆರೆಯ ಹಾವೇರಿ ಕ್ಷೇತ್ರದಿಂದ ನಿರೀಕ್ಷೆಯಂತೆಯೇ ಮಾಜಿ ಶಾಸಕ ಲಕ್ಷ್ಮೇಶ್ವರದ ಜಿ.ಎಸ್.ಗಡ್ಡದೇವರಮಠ ಪುತ್ರ ಆನಂದಸ್ವಾಮಿ ಗಡ್ಡದೇವರಮಠ ಕಾಂಗ್ರೆಸ್ ಅಧಿಕೃತ ಅಭ್ಯರ್ಥಿಯಾಗಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಮತ್ತು ಪರಿಷತ್ ಸದಸ್ಯ ಸಲೀಮ್ ಅಹ್ಮದ, ಮಾಜಿ ಸಂಸದ ಮಂಜುನಾಥ ಕುನ್ನೂರ ಅಲ್ಲದೇ ಮಾಜಿ ಶಾಸಕ ಡಿ.ಆರ್.ಪಾಟೀಲ ಹೆಸರು ಕೇಳಿ ಬಂದಿತ್ತಾದರೂ ಅಂತಿಮವಾಗಿ ಗಡ್ಡದೇವರಮಠಗೆ ಮಣೆ ಹಾಕಿದೆ.
ರಾಹುಲ್ ಗಾಂಧಿ ಮತ್ತೆ ವಯನಾಡಿನಿಂದ ಕಣಕ್ಕಿಳಿಯಲಿದ್ದು ತಿರುವನಂತಪುರದಿಂದ ಶಶಿ ತರೂರ ಸ್ಪರ್ಧಿಸಲಿದ್ದಾರೆ.
ಬಿಜೆಪಿ ರಾಜ್ಯದ ಒಂದೂ ಕ್ಷೇತ್ರಕ್ಕೆ ಮೊದಲ ಪಟ್ಟಿಯಲ್ಲಿ ಅಭ್ಯರ್ಥಿ ಪ್ರಕಟಿಸಿಲ್ಲವಾದರೂ ಕಾಂಗ್ರೆಸ್ ಬಿಜೆಪಿಗಿಂತ ಮೊದಲೆ ಪ್ರಕಟಿಸಿದೆ.
ಗದಗ ಮತ್ತು ಹಾವೇರಿ ಜಿಲ್ಲೆಗಳ ಕ್ಷೇತ್ರಗಳನ್ನೊಳಗೊಂಡ ಹಾವೇರಿ ಕ್ಷೇತ್ರದಲ್ಲಿ ಈ ಬಾರಿ ಶಿಗ್ಗಾಂವ, ಶಿರಹಟ್ಟಿ ಹೊರತು ಪಡಿಸಿ ಬಹುತೇಕ ಕಾಂಗ್ರೆಸ್ ಶಾಸಕರೇ ಇದ್ದು ಅನುಕೂಲಕರವಾಗಿ ಪರಿಣಮಿಸಲಿದೆ.
ಹಾವೇರಿಯಿಂದ ಬಿಜೆಪಿಯಿಂದ ಮಾಜಿ ಸಿಎಂಗಳಾದ ಬಸವರಾಜ ಬೊಮ್ಮಾಯಿ, ಜಗದೀಶ ಶೆಟ್ಟರ್, ಡಾ.ಮಹೇಶ ನಾಲವಾಡ ಅಲ್ಲದೇ ಈಶ್ವರಪ್ಪ ಪುತ್ರ ಕೆ.ಇ.ಕಾಂತೇಶ ಹೆಸರು ಇದೆಯಾದರೂ ಬಹುತೇಕ ಗಡ್ಡದೇವರಮಠಗೆ ಎದುರಾಳಿಯಾಗಿ ಬಸವರಾಜ ಬೊಮ್ಮಾಯಿ ಅಂತಿಮಗೊಳ್ಳುವ ಸಾಧ್ಯತೆ ದಟ್ಟವಾಗಿದೆ. ಈಗಾಗಲೇ ಬೊಮ್ಮಾಯಿ ವರಿಷ್ಠರಿಗೆ ಸ್ಪರ್ಧೆಗೆ ಸಮ್ಮತಿಸಿದ್ದಾರೆನ್ನಲಾಗಿದೆ. ಕಳೆದ ಎರಡು ತಿಂಗಳಿಂದ ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡಿದ್ದ ಡಾ. ಮಹೇಶ ನಾಲವಾಡ ಅವರಿಗೆ ಮತ್ತೆ ಅದೃಷ್ಟ ಕೈ ಕೊಡುವ ಸಾಧ್ಯತೆಗಳಿವೆಯಲ್ಲದೇ ಮಾಜಿ ಡಿಸಿಎಂ ಈಶ್ವರಪ್ಪ ಪುತ್ರ ಕಾಂತೇಶಗೂ ವರಿಷ್ಠರು ಮಣೆ ಹಾಕುವ ಸಾಧ್ಯತೆಗಳಿಲ್ಲ. ಇನ್ನೊರ್ವ ಮಾಜಿ ಸಿಎಂ ಶೆಟ್ಟರ್ ಹೆಸರು ಇದೆಯಾದರೂ ಬೊಮ್ಮಾಯಿ ನಿರಾಕರಿಸಿದಲ್ಲಿ ಮಾತ್ರ ಪರಿಗಣನೆಗೆ ಬರುತ್ತಿತ್ತು ಎನ್ನಲಾಗಿದೆ.
ಇನ್ನೊಂದೆಡೆ ಧಾರವಾಡ ಕ್ಷೇತ್ರದಲ್ಲಿ ಪ್ರಹ್ಲಾದ ಜೋಶಿಯವರೇ ಕಣಕ್ಕಿಳಿಯುವರೋ ಇಲ್ಲವೇ ಶೆಟ್ಟರ್ಗೆ ಮಣೆ ಹಾಕುವರೋ ಎಂಬುದು ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದ್ದು ಹಾಲಿ ಸಂಸದರಿಗೆ ದೊರೆವ ಸಾಧ್ಯತೆ ದಟ್ಟವಾಗಿದೆ. ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು ವರಿಷ್ಠರು ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ ಆದರೆ ಊಹಾಪೋಹಗಳಿಗೆ ಉತ್ತರಿಸುವುದಿಲ್ಲ ಎಂದಿದ್ದಾರೆ. . ಕಾಂಗ್ರೆಸ್ನಿಂದ ಲೋಹಿತ್ ನಾಯ್ಕರ ಅಥವಾ ಮೋಹನ ಲಿಂಬಿಕಾಯಿ ಇಬ್ಬರಲ್ಲಿ ಒಬ್ಬರಿಗೆ ಟಿಕೆಟ್ ಎನ್ನಲಾಗುತ್ತಿದೆ.