*ಉತ್ತರ ಕನ್ನಡ ಕದನ ತೀವ್ರ ಕುತೂಹಲ / ಹಿಂದುಳಿದವರಲ್ಲಿ ಹುಳಿ ಹಿಂಡಿದ ಹವ್ಯಕರ ಹಾಡು*
ಶಿರಸಿ : ಕಾರವಾರ ಜಿಲ್ಲೆ ಹಾಗೂ ಬೆಳಗಾವಿ ಜಿಲ್ಲೆಯ ಕಿತ್ತೂರ ,ಖಾನಾಪುರಗಳನ್ನೊಳಗೊಂಡ ಉತ್ತರ ಕನ್ನಡ ಲೋಕಸಭಾ ಕ್ಷೇತ್ರ ಪ್ರತಿ ಬಾರಿಯೂ ಬಿಜೆಪಿಗೆ ರಹದಾರಿಯಾಗಿತ್ತು. ಆದರೆ ಈ ಬಾರಿ ಹಿಂದೂ ಫೈರ್ಬ್ರಾಂಡ್ ಸಂಸದ ಅನಂತಕುಮಾರ ಹೆಗಡೆಗೆ ಟಿಕೆಟ್ ನಿರಾಕರಿಸಿರುವುದರಿಂದ ಹೊರಳು ದಾರಿಯಲ್ಲಿದ್ದು ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಖಾನಾಪುರದ ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ ನಡುವಣ ಕದನ ಭಾರಿ ಕುತೂಹಲ ಕೆರಳಿಸಿದೆ.
ಕಾಗೇರಿಗೆ ಟಿಕೆಟ್ ಘೋಷಣೆಯಾದ ದಿನದಂದು ಭಾವನಾತ್ಮಕ ಪತ್ರವೊಂದನ್ನು ಪೋಸ್ಟ ಮಾಡಿದ ಅನಂತ ಕುಮಾರ ಹೆಗಡೆ ಪಕ್ಷದ ಹಿರಿಯ ನಾಯಕರಿಗೂ ಕ್ಯಾರೆ ಎಂದಿಲ್ಲವಾಗಿದ್ದು ಇಂದು ಸ್ವತಃ ಶಿರಸಿಯಂಗಳಕ್ಕೆ ಸ್ವತಃ ಪ್ರಧಾನಿ ನರೇಂದ್ರ ಮೋದಿಯೇ ಬಂದು ಬೂಸ್ಟರ್ ಡೋಸ್ ಕೊಡುವ ಯತ್ನ ಮಾಡಿದರು ಅದರಲ್ಲೂ ಭಾಗಿಯಾಗದೇ ಡೋಂಟ ಕೇರ್ ಎಂದಿದ್ದು ಈ ಬಾರಿ ಉತ್ತರ ಕನ್ನಡದಲ್ಲಿ ಕಮಲದ ಗೆಲುವು ಪ್ರಯಾಸಕರ ಎಂಬ ಸ್ಪಷ್ಟ ಸಂದೇಶ ಕಮಲದ ಹೆಡ್ ಕ್ವಾರ್ಟರ್ಸಗೂ ತಲುಪಿದೆ.
ಮಾಜಿ ಕೇಂದ್ರ ಸಚಿವೆ ಮಾರ್ಗರೇಟ ಆಳ್ವಾ ಸೋಲಿನ ನಂತರ ಹಿಂದುತ್ವದ ಅಲೆಯಲ್ಲಿ ದಡ ಸೇರುತ್ತಲೆ ಬಂದ ಅನಂತ ಕುಮಾರ ಹೆಗಡೆ ಈ ಬಾರಿ ಟಿಕೆಟ್ ಸಿಕ್ಕರೂ ಯಾವುದೇ ಪ್ರಯಾಸವಿಲ್ಲದೇ ಗೆಲ್ಲುತಿದ್ದರು. 400ರಲೆಕ್ಕಾಚಾರದಲ್ಲಿ ಉತ್ತರ ಕನ್ನಡ ಪ್ಲಸ್ ಆಗುತ್ತಿತ್ತು. ಆದರೀಗ ಕ್ಷೇತ್ರ ಬ್ರಾಹ್ಮಣ ವರ್ಸಸ್ ಹಿಂದುಳಿದವರ ಕದನವಾಗಿ ಮಾರ್ಪಟ್ಟಿದೆ. ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಜಿಲ್ಲಾ ರಾಜಕಾರಣದಲ್ಲಿ ಭೀಷ್ಮನ ಸ್ಥಾನದಲ್ಲಿರುವ ಆರ್.ವಿ.ದೇಶಪಾಂಡೆ ಇವರಿಗೂ ಡಾ.ಅಂಜಲಿ ಗೆಲುವು ನಿರ್ಣಾಯಕವಾಗಿದೆ. ಹೀಗಿರುವಾಗಲೇ ’ಹವ್ಯಕರು ಯೋಚಿಸಿ ಮತ ಹಾಕವು, ಬ್ರಾಹ್ಮಣರೆಲ್ಲಾ ಬಿಜೆಪಿ ಆರಿಸಿ ತರವು’ ಎಂಬ ಹವ್ಯಕ ಭಾಷೆಯ ಹಾಡೊಂದು ಹಿಂದುಳಿದವರ ಸಮುದಾಯದಲ್ಲಿ ದೊಡ್ಡ ಮಟ್ಟದ ಹುಳಿ ಹಿಂಡಿದೆ.
ರವಿವಾರ ಶಿರಸಿಯಲ್ಲಿ ಅಬ್ಬರಿಸಿ ಬೊಬ್ಬಿರಿದು ಅದೇ ತುಷ್ಟೀಕರಣ, ಹುಬ್ಬಳ್ಳಿ ನೇಹಾ ಹಿರೇಮಠ ಹತ್ಯೆ ಪ್ರಸ್ತಾಪಿಸಿ ಕಾಗೇರಿ ಗೆಲ್ಲಿಸುವ ಜವಾಬ್ದಾರಿ ನಿಮ್ಮದು ಎಂದು ಪ್ರಧಾನಿ ಮೋದಿ ಮನವಿ ಮಾಡಿ ಅಲ್ಪ ಮಟ್ಟಿಗೆ ಟಾನಿಕ್ ನೀಡಿದ್ದಾರೆ ನಿಜ. ಆದರೆ ಅನಂತ ಕುಮಾರ ಹೆಗಡೆ ಮೋದಿ ಬಂದರೂ ಲೆಕ್ಕಕ್ಕಿಲ್ಲ ಎಂಬಂತೆ ಮುಖ ತೋರಿಸಿಲ್ಲವಾಗಿದೆ. ಇದು ಕಾಗೇರಿ – ಹೆಗಡೆ ನಡುವಿನ ಆಂತರಿಕ ಸಮರ ಮುಂದುವರಿಯಲಿದೆ ಎಂಬ ಸ್ಪಷ್ಟ ಮುನ್ಸೂಚನೆ ಆಗಿದೆ. ಮತದಾನಕ್ಕೆ ಇನ್ನು 7-8ದಿನಗಳಿದ್ದು ಯಾವ ಯಾವ ಘಟ್ಟಗಳಲ್ಲಿ ಯಾವ ಯಾವ ತಿರುವು ಕಾಣುತ್ತದೆ ಕಾದು ನೋಡಬೇಕಾಗಿದೆ.