*ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲು* / *ಸಿಜೆಐ ಪೀಠದ ಎದುರು ಇಷ್ಟರಲ್ಲೇ ವಿಚಾರಣೆಗೆ*
ಹೊಸದಿಲ್ಲಿ: ಕರ್ನಾಟಕದಲ್ಲಿ ನಡೆದಿದೆ ಎನ್ನಲಾದ ಹನಿ ಟ್ರ್ಯಾಪಿಂಗ್ ದೇಶಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದ್ದು ಈ ಪ್ರಕರಣದ ತನಿಖೆಗೆ ಆಗ್ರಹಿಸಿ ಸರ್ವೋಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಾಗಿದೆ.
ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಳ್ಳಲು ಸುಪ್ರೀಂಕೋರ್ಟ್ ಸಮ್ಮತಿಸಿದೆ. ಪ್ರಸಕ್ತ ಈ ಪ್ರಕರಣದಲ್ಲಿ ನ್ಯಾಯಮೂರ್ತಿ ಹೆಸರೂ ಕೂಡ ಇರುವುದನ್ನು ಅರ್ಜಿದಾರರು ಉಲ್ಲೇಖಿಸಿದ್ದಾರೆ.
ಕರ್ನಾಟಕದ ಹಿರಿಯ ಸಚಿವರು ಮತ್ತು ಶಾಸಕರು, ರಾಜಕೀಯ ಮುಖಂಡರು ಮತ್ತು ನ್ಯಾಯಮೂರ್ತಿಗಳು ಸೇರಿದಂತೆ 48 ಜನರನ್ನು ಸಿಲುಕಿಸಿರುವ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಯನ್ನು ಭಾರತದ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ನೇತೃತ್ವದ ಪೀಠದೆದುರು ತರಲಾಗಿದ್ದು, ಈ ವಿಷಯ ಇಂದು ಅಥವಾ ನಾಳೆ ಕೈಗೆತ್ತಿಕೊಳ್ಳುವ ಸಾಧ್ಯತೆಯಿದೆ.
ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರು ವಿಧಾನಸಭೆ ಅಧಿವೇಶನದಲ್ಲಿ ಹನಿಟ್ರ್ಯಾಪ್ನಲ್ಲಿ ತಮ್ಮನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಬಹಿರಂಗಪಡಿಸಿದ ನಂತರ ವಿವಾದ ಹೊಸ ತಿರುವು ಪಡೆದುಕೊಂಡಿದೆ.
ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಸೇರಿದಂತೆ ರಾಜಕೀಯ ಪಕ್ಷಗಳಲ್ಲಿ 48 ನಾಯಕರು ಇದೇ ರೀತಿಯ ಮಧು ಬಲೆಗೆ ಬಲಿಯಾಗಿದ್ದಾರೆ ಎಂದ ರಾಜಣ್ಣ ಈ ಬಲೆಯನ್ನು ರಾಜಕೀಯ ಪ್ರೇರಿತ ವ್ಯಕ್ತಿಗಳು ವೈಯಕ್ತಿಕ ಮತ್ತು ರಾಜಕೀಯ ಲಾಭಕ್ಕಾಗಿ ತಮ್ಮ ಗುರಿಗಳನ್ನು ಸಾಧಿಸಿಕೊಳ್ಳಲು ಹೆಣೆದಿದ್ದಾರೆಂದೂ ಹೇಳಿದ್ದರು.
ಈ ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆ ಅಥವಾ ಸಿಬಿಐ ತನಿಖೆಗೆ ಬಿಜೆಪಿ ನಾಯಕರು ಒತ್ತಾಯಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಗಿಯಾಗಿರುವ ಯಾರನ್ನೂ ರಕ್ಷಿಸುವುದಿಲ್ಲ ಎಂದು ಭರವಸೆ ನೀಡಿದ್ದಾರಲ್ಲದೇ ಕಾಂಗ್ರೆಸ್ ಹೈಕಮಾಂಡ್ ಕೂಡ ಗಂಭೀರವಾಗಿ ಪರಿಗಣಿಸಿದ್ಧು ಈಗಾಗಲೇ ವರದಿಯನ್ನು ಸಹ ಪಡೆದಿದೆ.
ಈ ಪ್ರಕರಣದಲ್ಲಿ ಆಡಳಿತ ಮತ್ತು ವಿಪಕ್ಷ ಎರಡೂ ನಾಯಕರು ಇದ್ದಾರೆನ್ನ ಲಾಗುತ್ತಿದೆ. ಇನ್ನೊಂದೆಡೆ ಸಚಿವ ರಾಜಣ್ಣ ಹನಿ ಟ್ರಾಪ್ ಬಗೆಗೆ ಸೂಕ್ತ ಸಮಯದಲ್ಲಿ ದೂರು ನೀಡುವುದಾಗಿ ಹೇಳಿದ್ದಾರೆ.