ಹುಬ್ಬಳ್ಳಿ : ನಾಟಕ ಹವ್ಯಾಸದಿಂದ ಇಂದು ಕಿರುತೆರೆ, ಸಿನಿಮಾಗಳಲ್ಲಿ ಹುಬ್ಬಳ್ಳಿಯ ಪ್ರತಿಭೆ ರಾಜ್ ನೀನಾಸಂ ಮಿಂಚುತ್ತಿದ್ದಾರೆ. ಡಿಪ್ಲೋಮಾ ಕಲಿತು ಧಾರವಾಡದಲ್ಲಿ 2010ರಲ್ಲಿ ನಾಟಕದ ತಂಡದಲ್ಲಿ ಕೆಲಸ ಮಾಡುತ್ತಿದ್ದರು. ನಂತರ 2012ರಲ್ಲಿ ನೀನಾಸಂ ಸೇರಿ ನಾಟಕದ ತರಬೇತಿ ಪಡೆದು ಅಲ್ಲಿಂದ ರಂಗಾಯಣದಲ್ಲಿ ಮಕ್ಕಳ ನಾಟಕ ಹಾಗೂ ಜೈಲು ಕೈದಿಗಳಿಗೆ ನಾಟಕಗಳ ನಿರ್ದೇಶನ ಮಾಡುತ್ತ ರಂಗಭೂಮಿ ಚಟುವಟಿಕೆಯಲ್ಲಿ ಸಕ್ರಿಯವಾಗಿಸಿಕೊಂಡವರು.
ಅಂದಹಾಗೆ ಇವರ ಪೂರ್ಣ ಹೆಸರು ಬಸವರಾಜ ಕವಡೆನ್ನವರ.ಆದರೆ ಕಿರುತೆರೆ ಹಾಗೂ ಸಿನಿಮಾಗಳಲ್ಲಿ ರಾಜ್ ನಿನಾಸಂ ಎಂದೇ ಪ್ರಸಿದ್ಧರಾಗಿದ್ದಾರೆ. ಇವರ ನಟನೆ ಕಂಡು ’ವಿರಾಟ’ ಸಿನಿಮಾದ ಪುಟ್ಟ ಪಾತ್ರಕ್ಕೆ ಕರೆ ಬಂದಿತು. ಅದರಂತೆ ಹಾಸ್ಯ ಧಾರಾವಾಹಿ ’ಪಾರ್ವತಿ ಪರಮೇಶ್ವರ’ದಲ್ಲಿ ಪಾತ್ರ ಮಾಡುತ್ತ ಪ್ರಸಿದ್ದರಾದರು. ನಂತರ ಗಿಣಿರಾಮ ಧಾರಾವಾಹಿಯಲ್ಲಿನ ಪಾತ್ರ ಗಮನಸೆಳೆಯಿತು. ಕೆಂಡಸಂಪಿಗೆ ಎಂಬ ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಅದು ಇದೀಗ 500 ಕಂತುಗಳನ್ನು ದಾಟಿದೆ. ಇತ್ತೀಚೆಗೆ ಬಿಡುಗಡೆಯಾದ ಶಾಖಾಹಾರಿ ಸಿನಿಮಾದಲ್ಲಿ ರಂಗಾಯಣ ರಘು ಅವರೊಂದಿಗೆ ಪಾತ್ರ ನಿರ್ವಹಿಸಿದ್ದು ಅದ್ಬುತ ಅನುಭವ ಎನ್ನುತ್ತಾರೆ ರಾಜ್ ನೀನಾಸಂ.
ಹೀಗೆ ಅವರು ದರ್ಶನ್,ಪ್ರಕಾಶ ಬೆಳವಾಡಿ,ಮೇಘನಾರಾಜ್, ಚೇತನ್ ಅಹಿಂಸಾ, ಆದಿತ್ಯ ಅವರೊಂದಿಗೆ ನಟಿಸಿದ ಹಿರಿಮೆ ಇವರದ್ದು. ರಂಗಭೂಮಿಯ ಹಿನ್ನೆಲೆ ಇರುವವರಿಗೆ ಸಿನಿಮಾ, ಸೀರಿಯಲ್ಗಳಲ್ಲಿ ನಟನೆ ಬಹಳ ಸರಳವಾಗುತ್ತದೆ. ನನಗೆ ಸೀರಿಯಲ್ ಗಳಿಂದಲೇ ಹೆಚ್ಚು ಜನಪ್ರೀಯತೆ ಸಿಕ್ಕಿದೆ ಎನ್ನುತ್ತಾರೆ ರಾಜ್.
ವಿರಾಟ, ನೂರೊಂದು ನೆನಪು, ಅಮೃತ ಅಪಾರ್ಟಮೆಂಟ್, ವಿಜಯಾನಂದ, ಕಾಂಗರು, ಶಾಖಾಹಾರಿ ಸಿನಿಮಾಗಳಲ್ಲಿ ನಟಿಸಿದ್ದು ’ನೆಲ್ಸನ್’ ಬಣ್ಣ ಹಚ್ಚುತ್ತಿದ್ದಾರೆ. ಕಿರುತೆರೆಯ ಪಾಂಡುರಂಗ ವಿಠಲ, ಪಾರ್ವತಿ ಪರಮೇಶ್ವರ, ಪದ್ಮಾವತಿ, ಧಾರವಾಡದಾಗೊಂದು ಲವ್ ಸ್ಟೋರಿ ಯಲ್ಲಿ ನಟಿಸಿದ್ದು ಇದೀಗ ಕೆಂಡಸಂಪಿಗೆಯಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ.
ಸಿನಿಮಾಗಳಲ್ಲಿ ಇನ್ನಷ್ಟು ಉತ್ತಮ ಅವಕಾಶ ಹಾಗೂ ಚಾಲೆಂಜಿಂಗ್ ಪಾತ್ರಗಳಲ್ಲಿ ಕಾಣಿಸಬೇಕೆಂಬ ಆಸೆ ಇದೆ ಎನ್ನುತ್ತಾರೆ ಹುಬ್ಬಳ್ಳಿಯ ರಾಜ್ ನೀನಾಸಂ ಅವರ ಗಟ್ಟಿಯಾದ ಧ್ವನಿ,ಪದಗಳ ಉಚ್ಚಾರಣೆ ಎಲ್ಲರ ಗಮನ ಸೆಳೆಯುತ್ತಿದೆ. ಉತ್ತರ ಕರ್ನಾಟಕದ ಈ ಪ್ರತಿಭೆಗೆ ಇನ್ನಷ್ಟು ಹೆಚ್ಚಿನ ಅವಕಾಶಗಳು ಸಿಗಲಿ. ಕಿರುತೆರೆಯಲ್ಲಿ ನಿರ್ದೇಶನ ಮಾಡುತ್ತಾ ಹೆಚ್ಚು ಜನಪ್ರಿಯ ಗಳಿಸಿದ ಪೃಥ್ವಿರಾಜ್ ಕುಲಕರ್ಣಿ ಸಹ ಇವರ ನಟನೆಗೆ ಬೆನ್ನು ತಟ್ಟಿದ್ದಾರೆ.