ಧಾರವಾಡ : ಅಮಿತ್ ಶಾ ಅವರು ಸಂಸತ್ತಿನಲ್ಲಿ ನೀಡಿದ್ದ ಹೇಳಿಕೆಯನ್ನು ತಿರುಚಿ, ಸಮಾಜದಲ್ಲಿ ಗೊಂದಲ ಸೃಷ್ಟಿ ಮಾಡಿದ್ದು ಕಾಂಗ್ರೆಸ್ ಟೂಲ್ಕಿಟ್ನ ಒಂದು ಭಾಗ. ಇಂದಿನ ಹುಬ್ಬಳ್ಳಿ – ಧಾರವಾಡ ಬಂದ್ ಸಂಪೂರ್ಣವಾಗಿ ರಾಜಕೀಯ ಪ್ರೇರಿತ ಎಂದು ವಿಧಾನಸಭಾ ವಿರೋಧ ಪಕ್ಷದ ಉಪನಾಯಕ ಅರವಿಂದ್ ಬೆಲ್ಲದ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷವು ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ ಮಾಡಿರುವಷ್ಟು ಹಿಂಸೆ, ಅವಮಾನವನ್ನು ಬೇರೆ ಯಾರು ಮಾಡಿಲ್ಲ. ಅದನ್ನು ಸ್ವತಃ ಅಂಬೇಡ್ಕರ್ ಅವರೇ ಹೇಳಿಕೊಂಡಿದ್ದಾರೆ.
ಕಾಂಗ್ರೆಸ್ ಸುಡುವ ಮನೆ ಎಂಬುದಾಗಿ ಅವರೇ ಹೇಳಿದ್ದರೂ ಕೆಲವು ಸಂಘಟನೆಗಳು ಇದೇ ಕಾಂಗ್ರೆಸ್ ಜೊತೆ ಕೈ ಜೋಡಿಸಿರವುದು ವಿಪರ್ಯಾಸ. ಅಂಬೇಡ್ಕರರಿಗೆ ಕಾಂಗ್ರೆಸ್ ಪಕ್ಷ ಮಾಡಿರುವ ಅವಮಾನ ಈ ಸಂಘಟನೆಗಳಿಗೆ ಗೊತ್ತಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಬಾಬಾಸಾಹೇಬರಿಗೆ ಭಾರತರತ್ನ ಗೌರವ ನೀಡುವುದರಿಂದ ಹಿಡಿದು ಅವರ ಜೀವನದೊಂದಿಗೆ ನಂಟು ಹೊಂದಿದ್ದ ಪಂಚಕ್ಷೇತ್ರಗಳನ್ನ ಅಭಿವೃದ್ಧಿ ಪಡಿಸಿದ್ದೇ ಬಿಜೆಪಿ ಪಕ್ಷ.ಮೋದಿಜೀಯವರು ಸಂವಿಧಾನದ ಚಿರಸ್ಮರಣೆಗೆ ನವೆಂಬರ್ 26 ರಂದು ಸಂವಿಧಾನ ದಿನಾಚರಣೆ ಎಂದು ಘೋಷಿಸಿದ್ದಾರೆ. ಬಿಜೆಪಿ ಪಕ್ಷವು ಅಂಬೇಡ್ಕರ್ ಮತ್ತು ಸಂವಿಧಾನವನ್ನು ಸದಾ ಗೌರವಿಸುತ್ತಲೇ ಬಂದಿದೆ. ಈ ಕುರಿತು ನಾನು ಯಾವುದೇ ವೇದಿಕೆಯಲ್ಲೂ ಬಹಿರಂಗ ಚರ್ಚೆಗೆ ಸಿದ್ಧ ಎಂದು ಬೆಲ್ಲದ ಪ್ರಕಟಣೆಯಲ್ಲಿ ಹೇಳಿದ್ದಾರೆ.