*ಜನಾಕ್ರೋಶ ಯಾತ್ರೆಯಲ್ಲಿ ಕೇಂದ್ರ ಸಚಿವ ಜೋಶಿ ಆಕ್ರೋಶ* *ಸಿಎಂ ತವರು ಜಿಲ್ಲೆಯಲ್ಲಿ ಕೇಸರಿ ಘರ್ಜನೆ*
ಮೈಸೂರು: ರಾಜ್ಯದಲ್ಲಿ ಜನನ-ಮರಣಕ್ಕೂ ಶುಲ್ಕ ಹೆಚ್ಚಿಸುತ್ತ ಜನರ ತಲೆ ಬೋಳಿಸುತ್ತಿರುವಂತಹ ಕಡುಭ್ರಷ್ಟ ಮತ್ತು ಕಳ್ಳ-ಮಳ್ಳರ ಕಾಂಗ್ರೆಸ್ ಸರ್ಕಾರವನ್ನು ಕಿತ್ತೆಸೆಯಬೇಕಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಕ್ರೋಶಭರಿತರಾಗಿ ನುಡಿದರು.
ರಾಜ್ಯ ಸರ್ಕಾರದ ಬೆಲೆ ಏರಿಕೆ ನೀತಿ ವಿರುದ್ಧ ಬಿಜೆಪಿ ರಾಜ್ಯಾದ್ಯಂತ ಕರೆ ನೀಡಿರುವ “ಜನಾಕ್ರೋಶ ಯಾತ್ರೆʼಗೆ ಸೋಮವಾರ ಸಂಜೆ ಮೈಸೂರಿನಲ್ಲಿ ಚಾಲನೆ ನೀಡಿದ ಸಚಿವರು, “ಮಾತು ಮಾತಿಗೂ 16 ಬಾರಿ ಬಜೆಟ್ ಮಂಡಿಸಿದ್ದೇನೆ ಎನ್ನುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ 48 ಅಗತ್ಯ ವಸ್ತುಗಳ ಬೆಲೆ ಹೆಚ್ಚಳ ಮಾಡಿ ಇತಿಹಾಸ ಸೃಷ್ಟಿಸಿದಂತಹ ಸಿಎಂ ಆಗಿದ್ದಾರೆʼ ಎಂದು ಚಾಟಿ ಬೀಸಿದರು.
ರಾಜ್ಯದಲ್ಲಿ ಕೇವಲ ₹5 ರೂ. ಇದ್ದ ಜನನ-ಮರಣ ಪ್ರಮಾಣ ಪತ್ರ ಶುಲ್ಕವನ್ನು ₹50 ರೂಪಾಯಿಗೆ ಹೆಚ್ಚಿಸಿ ಹುಟ್ಟು-ಸಾವಿನ ವಿಚಾರದಲ್ಲೂ ಜನರನ್ನು ಚಿಂತೆಗೀಡು ಮಾಡಿದೆ. ಹಾಲಿನ ದರ, ಆಲ್ಕೋಹಾಲಿನ ಬೆಲೆ, ಪೆಟ್ರೋಲ್-ಡಿಸೇಲ್ ಬೆಲೆ, ವಿದ್ಯುತ್ ದರ, ಆಸ್ತಿ ನೋಂದಣಿ ಶುಲ್ಕ, ಮುದ್ರಾಂಕ ಶುಲ್ಕ, ನೀರಿನ ಕರ, ಕಸ ವಿಲೇವಾರಿ ಶುಲ್ಕ, ಬಸ್ ಪ್ರಯಾಣ ದರ, ಮೆಟ್ರೋ ದರ, ಪಹಣಿ ಶುಲ್ಕ, ಆಸ್ಪತ್ರೆ ಬಿಲ್…ಒಂದೇ ಎರಡೇ ಇವರ ದರ್ಬಾರಿನಲ್ಲಿ “ಕರ-ಭಾರʼ ಏರಿಕೆ ಕಂಡಿರುವುದು ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
*₹70-75 ಸಾವಿರ ಕೋಟಿ ವಸೂಲಿ:* ರಾಜ್ಯದಲ್ಲಿ ಜನರಿಗೆ ಗ್ಯಾರೆಂಟಿಗಳ ಮಂಕುಬೂದಿ ಎರಚಿ ಅಧಿಕಾರಕ್ಕೆ ಬಂದ ಕಳ್ಳ-ಮಳ್ಳರ ಕಾಂಗ್ರೆಸ್ ಸರ್ಕಾರ, ಈಗ ಹೀಗೆ ತೆರಿಗೆ, ಶುಲ್ಕ, ಬೆಲೆ ಹೆಚ್ಚಳ ವಿಧಿಸಿ ಕನಿಷ್ಠ ₹70ರಿಂದ 75 ಸಾವಿರ ಕೋಟಿ ಹಣವನ್ನು ಜನರಿಂದಲೇ ಕಿತ್ತುಕೊಳ್ಳುತ್ತಿದೆ ಎಂದು ಸಚಿವ ಜೋಶಿ ಕಿಡಿ ಕಾರಿದರು.
ರಾಜ್ಯದಲ್ಲಿ ಯಾರಾದರೂ ಸತ್ತರೆ ₹5 ಲಕ್ಷ ಪರಿಹಾರ ಕೊಡುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಯನಾಡಿನಲ್ಲಿ ಆನೆ ಕಾಲ್ತುಳಿತದಿಂದ ಸತ್ತ ವ್ಯಕ್ತಿಗೆ ರಾಜ್ಯದಿಂದ ₹25 ಲಕ್ಷ ಪರಿಹಾರ ಕೊಟ್ಟಿದ್ದಾರೆ. ಇದನ್ನು ಪ್ರಶ್ನಿಸಿದರೆ ಅದು ನಮ್ಮ ರಾಜ್ಯಕ್ಕೆ ಸೇರಿದ ಆನೆ ಎಂಬ ಸಬೂಬು ನೀಡಿದ್ದಾರೆ. ಪ್ರಿಯಾಂಕಾ ವಾಧ್ರಾರನ್ನು ಮೆಚ್ಚಿಸಲು ಸಿಎಂ-ಡಿಸಿಎಂ ಈ ರೀತಿಯ ಕಳ್ಳ-ಮಳ್ಳ ಆಟವಾಡುತ್ತಿದ್ದಾರೆ ಎಂದು ಕುಟುಕಿದರು ಜೋಶಿ.
ಕಾಂಗ್ರೆಸ್ ಪಕ್ಷ ಬರೀ ಸುಳ್ಳು ಹೇಳುವ ಮೋಸಗಾರ ಪಕ್ಷ ಎನ್ನುವುದು ಈಗ ಮುಸಲ್ಮಾನರಿಗೂ ಅರಿವಾಗಿದೆ. ಕೇಂದ್ರ ಸರ್ಕಾರ ತ್ರಿವಳಿ ತಲಾಖ್ ತೆಗೆದಾಗ ಬೆಂಕಿ ಹತ್ತುತ್ತದೆ ಎಂದರು ಕಾಂಗ್ರೆಸ್ ನಾಯಕರು. ಜಮ್ಮು-ಕಾಶ್ಮೀರದಲ್ಲಿ ಆರ್ಟಿಕಲ್ 370 ಕಿತ್ತೊಗೆದರೆ ರಕ್ತದ ಓಕುಳಿ ಹರಿಯುತ್ತದೆ ಎಂದರು.
ವಕ್ಫ್ ವಿಚಾರದಲ್ಲಿ ಕಾಂಗ್ರೆಸ್, ಮುಸಲ್ಮಾನರನ್ನು ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿದೆ. ವಕ್ಫ್ ತಿದ್ದುಪಡಿ ಮಸೂದೆ ಜಾರಿಯಿಂದ ಯಾವುದೇ ದರ್ಗಾ, ಮಸೀದಿಗಳಿಗೂ ಧಕ್ಕೆ ತರುವುದಿಲ್ಲ. ಬದಲಾಗಿ ಸೆಕ್ಷನ್ ೪೦ ರದ್ದುಪಡಿಸಿದ್ದೇವೆ. ವಕ್ಫ್ ಆಸ್ತಿ ಕಬಳಿಕೆಯನ್ನು ತಡೆದಿದ್ದೇವೆ. ಬಡ ಮುಸಲ್ಮಾನರಿಗೂ ಸೌಲಭ್ಯ ಕಲ್ಪಿಸಬೇಕಿತ್ತು ಮತ್ತು ವಕ್ಫ್ ಆಡಳಿತದಲ್ಲಿ ಪಾರದರ್ಶಕತೆ ತರಬೇಕಿತ್ತು. ಇದಕ್ಕಾಗಿ ಈ ಐತಿಹಾಸಿಕ ಕ್ರಮ ಕೈಗೊಂಡಿದ್ದೇವೆ ಎಂದು ಸಚಿವ ಪ್ರಲ್ಹಾದ ಜೋಶಿ ಸ್ಪಷ್ಟಪಡಿಸಿದರು.
ಜನಾಕ್ರೋಶ ಯಾತ್ರೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಸಿಎಂ ಡಿ.ವಿ.ಸದಾನಂದಗೌಡ, ಪ್ರತಿಪಕ್ಷ ನಾಯಕ ಆರ್.ಅಶೋಕ್, ವಿಧಾನ ಪರಿಷತ್ ವಿಪಕ್ಷ ನಾಯಕ ಚಲವಾದಿ ನಾರಾಯಣಸ್ವಾಮಿ, ಮಾಜಿ ಡಿಸಿಎಂ ಗೋವಿಂದ ಕಾರಜೋಳ, ವಿಧಾನಸಭೆ ಪ್ರತಿಪಕ್ಷ ಉಪನಾಯಕ ಅರವಿಂದ ಬೆಲ್ಲದ, ಮಾಜಿ ಸಚಿವರಾದ ಶ್ರೀರಾಮುಲು, ಸಿಟಿ ರವಿ, ಸಂಸದ ಯದುವೀರ ಒಡೆಯರ್, ಮಾಜಿ ಸಂಸದ ಪ್ರತಾಪ್ ಸಿಂಹ ಹಾಗೂ ಶಾಸಕರು, ಪರಿಷತ್ ಸದಸ್ಯರು, ರಾಜ್ಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು.