*ನ ಭೂತೇ .. ಸಾಗರೋಪಾದಿಯಲ್ಲಿ ಹರಿದುಬಂದ ಕಾರ್ಯಕರ್ತರು/ ಕೇಸರಿಮಯವಾದ ವಿದ್ಯಾಕಾಶಿ / ಮಾಜಿ ಸಿಎಂಗಳಾದ ಬಿಎಸ್ವೈ,ಶೆಟ್ಟರ್ ಸಾಥ್*
ಹುಬ್ಬಳ್ಳಿ : ಪ್ರಧಾನಿ ಮೋದಿ ನಿಕಟವರ್ತಿ, ಕೇಂದ್ರ ಕ್ಯಾಬಿನೆಟ್ನ ಪ್ರಬಲ ಸಚಿವ ಪ್ರಹ್ಲಾದ ಜೋಶಿಯವರ ನಾಮಪತ್ರ ಸಲ್ಲಿಕೆಗೆ ಎಂಟು ವಿಧಾನಸಭಾ ಕ್ಷೇತ್ರಗಳಿಂದ ಜನಸಾಗರವೇ ಹರಿದು ಬಂದು ಅವರು ಐದನೇ ಗೆಲುವು ಶತಃಸಿದ್ದ ಎಂಬ ಸ್ಪಷ್ಟ ಸಂದೇಶವನ್ನು ವಿರೋಧಿ ಪಾಳೆಯಕ್ಕೆ ರವಾನಿಸುವಲ್ಲಿ ಯಶಸ್ವಿಯಾಗಿದೆ.
ನಾಮಪತ್ರ ಸಲ್ಲಿಕೆ ವೇಳೆ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಮಾಜಿ ಸಂಸದರಾದ ವಿಜಯ್ ಸಂಕೇಶ್ವರ್, ಪ್ರಭಾಕರ್ ಕೋರೆ, ಮಾಜಿ ಸಚಿವರಾದ ಭೈರತಿ ಬಸವರಾಜ್, ಸಿ.ಸಿ.ಪಾಟೀಲ್ ಮುಂತಾದವರು ಸಾಥ್ ನೀಡಿದ್ದಾರೆ.
ಈ ಸಂದರ್ಭದಲ್ಲಿ ಶಾಸಕರಾದ ಅರವಿಂದ ಬೆಲ್ಲದ, ಮಹೇಶ್ ಟೆಂಗಿನಕಾಯಿ, ಎಂ.ಆರ್. ಪಾಟೀಲ್, ವಿಧಾನ ಪರಿಷತ್ ಮಾಜಿ ಸದಸ್ಯರಾದ ನಾಗರಾಜ್ ಛಬ್ಬಿ, ಮಹಾಂತೇಶ್ ಕವಟಗಿಮಠ, ಶಂಕರ್ ಪಾಟೀಲ್ ಮುನೇನಕೊಪ್ಪ, ಸಿ.ಟಿ.ರವಿ, ಅಮೃತ್ ದೇಸಾಯಿ, ಸೀಮಾ ಮಸೂತಿ, ಕೆಎಲ್ಇ ಸಂಸ್ಥೆ ನಿರ್ದೇಶಕ ಶಂಕರಣ್ಣ ಮುನವಳ್ಳಿ, ಎಸ್ ಟಿ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತು, ಬಿಜೆಪಿ ಜಿಲ್ಲಾಧ್ಯಕ್ಷರಾದ ತಿಪ್ಪಣ್ಣ ಮಜ್ಜಗಿ, ನಿಂಗಪ್ಪ ಸುತಗಟ್ಟಿ,ಮಾಜಿ ಮೇಯರ್ ಈರೇಶ ಅಂಚಟಗೇರಿ ಮುಂತಾದವರು ಉಪಸ್ಥಿತರಿದ್ದರು.
ಕಳೆದ ಬಾರಿಗಿಂತ ಹೆಚ್ಚು ಅಂತರದ ಅಲ್ಲದೇ ದಾಖಲೆಯ 4 ಲಕ್ಷಗಳ ಅಂತರದ ಲೆಕ್ಕಾಚಾರ ಹೊಂದಿರುವ ಜೋಶಿಯವರಿಗೆ ದಿಂಗಾಲೇಶ್ವರ ಸ್ವಾಮೀಜಿ ಸ್ಪರ್ಧೆ ಅಲ್ಲದೇ ಅಹಿಂದ ಮತ ಬ್ಯಾಂಕ್ನ ಬಹುತೇಕ ಮತ ಸೆಳೆಯುವ ಸಾಮರ್ಥ್ಯ ಹೊಂದಿರುವ ವಿನೋದ ಅಸೂಟಿ ಕಣದಲ್ಲಿರುವುದು ಜೋಶಿಯವರ ಓಟಕ್ಕೆ ಬ್ರೇಕ್ ಹಾಕುತ್ತದೆ ಎಂಬ ಗುಸು ಗುಸುವಿಗೆ ಇಂದು ಸೇರಿದ ಕಾರ್ಯಕರ್ತರ ಪ್ರವಾಹ ಸುಳ್ಳಾಗಿಸಿದೆ ಎಂದರೆ ತಪ್ಪಾಗಲಾರದು.
ನಾಮಪತ್ರ ಸಲ್ಲಿಕೆ ಮೆರವಣಿಗೆಯಲ್ಲಿ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಸಾಗರೋಪಾದಿಯಂತೆ ಬಂದಿದ್ದರು. ಎಲ್ಲೆಡೆಯು ಕೇಸರಿ ಧ್ವಜ, ನಾಯಕರ ಕಟೌಟ್ಗಳ ಭರಾಟೆ ಬಿಜೆಪಿ ನಾಯಕರ ವಿಶ್ವಾಸ ಇಮ್ಮಡಿಗೊಳಿಸಿತಲ್ಲದೇ ವಿದ್ಯಾಕಾಶಿ ಕೇಸರಿಯಲ್ಲಿ ಕಂಗೊಳಿಸಿತಲ್ಲದೇ ಮೋದಿ, ಜೋಶಿ ಪರ ಘೋಷಣೆಗಳು ಮುಗಿಲು ಮುಟ್ಟಿದವು.
ದೇಶದ ಒಳಿತಿಗಾಗಿ ಎಲ್ಲರೂ ನರೇಂದ್ರ ಮೋದಿಯವರ ನಾಯಕತ್ವದ ಮೇಲೆ ನಂಬಿಕೆ ಇಟ್ಟು ಸಹಸ್ರ ಸಂಖ್ಯೆಯಲ್ಲಿ ಆಗಮಿಸಿ ಬೆಂಬಲ ನೀಡಿದ್ದಾರೆ. ಕಾರ್ಯಕರ್ತರ ಅತೀವ್ರ ಬೆಂಬಲ ಈ ಬಾರಿಯೂ ಬಿಜೆಪಿ ಗೆಲುವು ನಿಶ್ಚಿತ ಎಂಬ ಆತ್ಮವಿಶ್ವಾಸ ಮೂಡಿಸಿದೆ ಎಂದು ಸಚಿವ ಜೋಶಿ ಹೇಳಿದರಲ್ಲದೇ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಯಡಿಯೂರಪ್ಪ ಆಶೀರ್ವಾದದಿಂದ ಅತ್ಯಂತ ಹೆಚ್ಚಿನ ಲೀಡ್ ಪಡೆದೇ ಗೆಲುವು ಸಾಧಿಸುವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಸುಮಾರು 40ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಂಡ ರೋಡ್ ಶೋನಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ 2 ಲಕ್ಷಕ್ಕೂ ಅಧಿಕ ಮತಗಳ ಅಂತರದಲ್ಲಿ ಗೆಲುವು ಸಾಧಿಸುತ್ತಾರೆ . ಅವರು ಕಳೆದ ನಾಲ್ಕು ಅವಧಿಗಳಲ್ಲಿಯೂ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಅತ್ಯಂತ ಪರಿಶ್ರಮಿ ನಾಯಕ ಎಂದು ಬಣ್ಣಿಸಿದರು.
ಹುಬ್ಬಳ್ಳಿ-ಧಾರವಾಡ ಅವಳಿ ನಗರ ಸೇರಿದಂತೆ ಕ್ಷೇತ್ರದಾದ್ಯಂತ ಅದ್ಭುತ ಅಭಿವೃದ್ಧಿ ಕಾರ್ಯಗಳನ್ನು ಪ್ರಹ್ಲಾದ ಜೋಶಿ ಮಾಡಿದ್ದಾರೆ. ರೈಲ್ವೆ ಮಾರ್ಗ, ನಿಲ್ದಾಣ, ವಿಮನ್ಸ್ ನಿಲ್ದಾಣ ಹೀಗೆ ಅನೇಕ ಮಾದರಿ ಕಾರ್ಯಗಳನ್ನು ಮಾಡಿದ್ದಾರೆ ಎಂದರು.
ಬೆಳಿಗ್ಗೆ ಜೋಶೀಯವರು ದೇವಸ್ಥಾನ-ಮಠಗಳ ಭೇಟಿ ಬಳಿಕ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಅವರು ಪಕ್ಷದ ವರಿಷ್ಟರೊಂದಿಗೆ ಧಾರವಾಡದ ಶಿವಾಜಿ ವೃತ್ತದಲ್ಲಿ ಶಿವಾಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ತೆರೆದ ವಾಹನದಲ್ಲಿ ಅದ್ದೂರಿ ಮೆರವಣಿಗೆ ಆರಂಭಿಸಿದರು.
ಪ್ರಮುಖ ಬೀದಿಗಳಲ್ಲಿ ಸಾಗಿದ ಬೃಹತ್ ಮೆರವಣಿಗೆಯಲ್ಲಿ ಹುಬ್ಬಳ್ಳಿ-ಧಾರವಾಡ, ಶಿಗ್ಗಾವಿ-ಸವಣೂರು ಸೇರಿದಂತೆ ಕ್ಷೇತ್ರದ ವಿವಿಧೆಡೆಯಿಂದ ಅಸಂಖ್ಯಾತ ಕಾರ್ಯಕರ್ತರು ಭಾಗವಹಿಸಿದ್ದರು. ಜೆಡಿಎಸ್ ಪ್ರಮುಖರು, ಕಾರ್ಯಕರ್ತರು ಸಹ ಪಾಲ್ಗೊಂಡು ಮೈತ್ರಿಕೂಟದ ಬಲ ಪ್ರದರ್ಶಿಸಿದರು.
ಇನ್ನೊಂದೆಡೆ ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿ ಸಹ ನಾಳೆ ನಾಮಪತ್ರದಲ್ಲೇ ಶಕ್ತಿ ಪ್ರದರ್ಶನ ಮಾಡಲಿದ್ದು ನಾಡಿದ್ದು ದಿಂಗಾಲೇಶ್ವರರ ನಾಮಪತ್ರ ಸಲ್ಲಿಕೆ ಸಹ ಕುತೂಹಲ ಕೆರಳಿಸಿದೆ.