ಹುಬ್ಬಳ್ಳಿ: ಧಾರವಾಡದಲ್ಲಿ ಐದನೇ ಬಾರಿ ಸ್ಪರ್ಧೆಗೆ ಕಮಲ ಟಿಕೆಟ್ ಪಡೆದ ಕೇಂದ್ರ ಸಚಿವ ಪ್ರಹ್ಲಾದ ಜೋ GVಶಿ ಇಂದು ಖುಷ್ ಮೂಡನಲ್ಲಿದ್ದು ಅರ್ಧ ಚುನಾವಣೆ ಗೆದ್ದ ಸಂಭ್ರಮದಲ್ಲಿದ್ದು ಮೊದಲ ದಿನವೇ ಟೆಂಪಲ್ ರನ್ ನಡೆಸಿದರು.
ಇನ್ನೊಂದೆಡೆ ಧಾರವಾಡ ಮತ್ತು ಹಾವೇರಿ ಟಿಕೆಟ್ ಎರಡೂ ಘೋಷಣೆಯಾದ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮುಂದೆ ಬೆಳಗಾವಿ ಆಯ್ಕೆ ಒಂದೇ ಉಳಿದಿದ್ದು ಸ್ವತಃ ಅಮಿತ ಶಾ ಸ್ಪರ್ಧಿಸುವುದಾದರೆ ಒಕೆ ಎಂಬ ಸಿಗ್ನಲ್ ನೀಡಿದ್ದಾರೆನ್ನಲಾಗಿದ್ದು ಇಂದು ಆಪ್ತ ವಲಯದೊಡನೆ ಚರ್ಚೆ ನಡೆಸಿ ಸಹೋದರ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್ ಜತೆ ಬೆಂಗಳೂರಿಗೆ ತೆರಳಿದ್ದಾರೆ. ಯಡಿಯೂರಪ್ಪ ಸಹಿತ ಇತರ ನಾಯಕರ ಜತೆ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಗಳಿದೆ.
ಜೋಶಿ ಬೆಂಬಲಿಗರ ಪಾಳೆಯದಲ್ಲಂತೂ ಗೆಲುವಿನ ಮಾರ್ಜಿನ್ ಲೆಕ್ಕಾಚಾರ ನಡೆದಿದ್ದು ಬೆಳಿಗ್ಗೆ ಜೋಶಿಯವರು ಆಪ್ತ ವಲಯದೊಂದಿಗೆ ಸಿದ್ಧಾರೂಢಮಠ, ಧಾರವಾಡ ಮುರುಘಾಮಠಕ್ಕೆ ಭೇಟಿ ನೀಡಿದರೆ, ಸಂಜೆ ಹಿಂದುಳಿದವರ ಸಮಾವೇಶ ಪೂರೈಸಿ ಮೂರುಸಾವಿರಮಠ, ತುಳಜಾಭವಾನಿ ಗುಡಿ ಅಲ್ಲದೇ ಗೋಕುಲ ರಸ್ತೆಯ ಕೇಶವಕುಂಜಕ್ಕೂ ಭೇಟಿ ನೀಡಿದರು.
ತನ್ಮಧ್ಯೆ ಶೆಟ್ಟರ್ ಪಾಳೆಯದಲ್ಲಿರುವ ಮಾಜಿ ಶಾಸಕಿ ಸೀಮಾ ಮಸೂತಿ ನಿವಾಸಕ್ಕೂ ತೆರಳಿ ಉಪಾಹಾರ ಸೇವಿಸಿ ಮತಬ್ಯಾಂಕ್ ಭದ್ರಗೊಳಿಸುವ ಕೆಲಸ ಮುಂದುವರಿಸಿದರು.
ಇನ್ನೊಂದೆಡೆ ಕಾಂಗ್ರೆಸ್ ಅಭ್ಯರ್ಥಿ ಕಸರತ್ತು ಮುಂದುವರಿದಿದ್ದು, ಒಬಿಸಿಗೆ ಕೊಡಬೇಕೋ ಅಥವಾ ಬಹುಸಂಖ್ಯಾತ ಲಿಂಗಾಯತರಿಗೋ ಎಂಬುದು ಅಂತಿಮಗೊಂಡಿಲ್ಲವಾಗಿದ್ದು ಶಿವಲೀಲಾ ಕುಲಕರ್ಣಿ ಉಮೇದುವಾರಿಕೆಗೆ ಹೆಚ್ಚು ಒಲವು ಕಂಡು ಬರುತ್ತಿದೆ. ಇಲ್ಲವೇ ಪರಿಷತ್ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ ಹೆಸರಿದ್ದು,ಒಬಿಸಿಗೆ ಒಲಿದಲ್ಲಿ ವಿನೋದ ಅಸೂಟಿ ಪಕ್ಕಾ ಎಂಬ ಮಾತುಗಳು ಕೇಳಿ ಬಂದಿವೆ.
ಶೆಟ್ಟರ್ ಹೇಳಿಕೆ : ಬೆಳಗಿನಿಂದ ಹೈಕಮಾಂಡ್, ಬೆಳಗಾವಿಯ ನಾಯಕರು ನಿರಂತರ ಸಮಾಲೋಚನೆ ಮಾಡುತ್ತಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ನಿರ್ಧಾರಕ್ಕೆ ಬರಲು ಆಗುವುದಿಲ್ಲ.ಒಟ್ಟಿನಲ್ಲಿ ಬೆಳಗಾವಿ ಟಿಕೆಟ್ ವಿಚಾರವಾಗಿ ಚರ್ಚೆ ನಡೆಯುತ್ತಿದೆ. ಕಾದು ನೋಡೋಣ ಎಂದಿದ್ದಾರೆ.