*ನಾಳೆ ನಂದದಿರುವ ಜ್ಯೋತಿ ಅಭಿನಂದನಾ ಕೃತಿ ಬಿಡುಗಡೆ*
ಹುಬ್ಬಳ್ಳಿ : ರೇಲ್ವೆ ಇಲಾಖೆಯ ಉದ್ಯೋಗಿಯಾಗಿ ಹುಬ್ಬಳ್ಳಿಯನ್ನೇ ಕರ್ಮಭೂಮಿಯಾಗಿಸಿಕೊಂಡು ಕನ್ನಡ ಸಾಹಿತ್ಯ ಭಂಡಾರಕ್ಕೆ ಎಂಟು ಮೌಲಿಕ ಕೃತಿಗಳನ್ನು ನೀಡಿ ಅಕ್ಷರ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿರುವವರು ಮಹಾಂತಪ್ಪ ನಂದೂರ ಅವರು.
ರೇಲ್ವೆ ಇಲಾಖೆಯಲ್ಲಿ 33 ವರ್ಷ ಸೇವೆ ಸಲ್ಲಿಸಿ ಸಹಾಯಕ ಹಣಕಾಸು ಅಧಿಕಾರಿಯಾಗಿ ವೃತ್ತಿಯಿಂದ (ಮಾ 31) ನಿವೃತ್ತರಾದ ಹಿನ್ನೆಲೆಯಲ್ಲಿ ಅವರ ತಾಯ್ನುಡಿಯ ಸೇವೆಯ , ಜೀವಿತಾವಧಿಯ ಅಪೂರ್ವ ಸಾಧನೆ ಯ, ಅವರ ಕೃತಿಗಳ ದಾಖಲೀಕರಣ ದ ‘ನಂದದುರಿವ ಜ್ಯೋತಿ’ಯ ಬಿಡುಗಡೆ ಮತ್ತು ಅಭಿನಂದನೆ ಸಮಾರಂಭ ದಿ.4ರಂದು 10-30ಕ್ಕೆ ರೇಲ್ವೆ ಅಧಿಕಾರಿಗಳ ಸಭಾಭವನದಲ್ಲಿ ನಡೆಯಲಿದೆ.
ಹಿರಿಯ ಸಾಹಿತಿಗಳಾದ ರಂಜಾನ್ ದರ್ಗಾ, ಹಿರಿಯ ವಿಮರ್ಶಕ ಎಚ್.ಎಸ್. ಸತ್ಯನಾರಾಯಣ, ಡಾ. ಕಲ್ಯಾಣರಾವ ಪಾಟೀಲ್, ಕುಸುಮಾ ಹರಿಪ್ರಸಾದ್, ಸಿ.ಎಂ. ಮುನಿಸ್ವಾಮಿ, ಮಾಣಿಕರಾವ್ ಸಹಿತ ಅನೇಕ ಗಣ್ಯರು ಸಾಕ್ಷಿಯಾಗಲಿದ್ದಾರೆ.
ಮೂಲತಃ ಕಲಬುರ್ಗಿ ಜಿಲ್ಲೆಯವರಾದ ನಂದೂರ ಪದವಿ ಹಂತದಲ್ಲಿಯೇ ಸಾಹಿತ್ಯಕ ಒಲವು ಹೊಂದಿದ್ದರು.ಹುಬ್ಬಳ್ಳಿಯ ರೇಲ್ವೆ ಇಲಾಖೆಯಲ್ಲಿ ಸೇವೆಗೆ ಸೇರಿದ ನಂತರ ಸಾಹಿತ್ಯದಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡರು. ಸಮಾಜದಲ್ಲಿಯ ಅಸಮತೆ, ಅನ್ಯಾಯ, ಭ್ರಷ್ಟಾಚಾರ ಮುಂತಾದವುಗಳ ವಿರುದ್ಧ ಅಕ್ಷರದಲ್ಲೇ ಆಕ್ರೋಶ ಹೊರ ಹಾಕಿದರು.ಇವರ ಉದಕದೊಳಗಣ ಬೆಂಕಿ ಮೊದಲ ಕವನ ಸಂಕಲನ 2002ರಲ್ಲಿ ಬಿಡುಗಡೆ ಕಂಡಿತು.
ವಿಮರ್ಶೆ ಲೇಖನಗಳ ಆನಂದ ನಿನಾದ, ಆಯಿತಾರ ಅಮಾಶಿ, ಜೀವ ಕೊಳಲು,ನಾದ ಲೋಕದ ಪುಟ್ಟರಾಜ, ವಚನಕಾರರ ವ್ಯಕ್ತಿತ್ವ ಬಿಂಬಿಸುವ ಸುನೀತದಲ್ಲಿ ರಚಿಸಿರುವ ಕಲ್ಯಾಣವೆಂಬ ಪ್ರಣತಿ ಸಾಹಿತ್ಯ ವಲಯದಲ್ಲಿ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.ಅಲ್ಲದೇ ಅರಿವೇ ಪ್ರಮಾಣು ಪುಸ್ತಕಕ್ಕೆ ಬೆಟದೂರು ಪ್ರತಿಷ್ಠಾನ, ಗುಲ್ಬರ್ಗಾ ವಿಶ್ವವಿದ್ಯಾಲಯದ ರಾಜ್ಯೋತ್ಸವ, ಸುತ್ತೂರು ಮಠದ ಶಿವರಾತ್ರೀಶ್ವರ ಪ್ರಶಸ್ತಿಗಳು ಅರಸಿ ಬಂದಿವೆ.
ಹುಬ್ಬಳ್ಳಿ ರೇಲ್ವೆ ಕನ್ನಡ ಸಂಘ ಮತ್ತಷ್ಟು ಕ್ರೀಯಾಶೀಲವಾಗಿಸಿದ ಅಲ್ಲದೆ, ಅಕ್ಷರ ಸಾಹಿತ್ಯ ವೇದಿಕೆ ಮೂಲಕ ವಾಣಿಜ್ಯ ರಾಜಧಾನಿಯಲ್ಲಿ ಕನ್ನಡದ ಕಂಪು ಪಸರಿಸಲು ಕಾರಣವಾದವರು.
ಮಾನವೀಯ ಮೌಲ್ಯಗಳಾದ ಪ್ರೀತಿ, ವಿಶ್ವಾಸ, ಪರೋಪಕಾರ, ಪ್ರಾಮಾಣಿಕತೆ ಮುಂತಾದ ಅಮೂಲ್ಯ ವಸ್ತುಗಳೇ ಮಾಯವಾಗುತ್ತಿರುವ ಇಂದಿನ ವ್ಯವಸ್ಥೆಯಲ್ಲಿ ಸೂಕ್ಷ್ಮ ಸಂವೇದನಾಶೀಲ ಕವಿ ಮನಸು ಹೊಂದಿರುವ ಅವರು ಆ ಮೌಲ್ಯಗಳನ್ನೇ ಬಂಡವಾಳವಾಗಿಸಿ ಅಕ್ಷರಶಃ ಬದುಕು ಬರಹ ಕಾಯಕ ಮಾಡಿದವರು ನಂದೂರ ಎಂದರೆ ಯಾವುದೇ ಉತ್ಪ್ರೇಕ್ಷೆಯಲ್ಲ.
ಡಾ.ಸಂಗಮೇಶ ಹಂಡಗಿ ಸಾಹಿತ್ಯ ಪ್ರತಿಷ್ಠಾನದ ಸಾಹಿತ್ಯ ಸಮಿತಿ ಮುಖ್ಯಸ್ಥರೂ ಆಗಿರುವ ಇವರಿಗೆ ಅನೇಕ ಪ್ರಶಸ್ತಿ, ಪುರಸ್ಕಾರ ಲಭಿಸಿದೆ.