*ಪಹಲ್ಗಾಮ್ ದಾಳಿಗೆ ಪ್ರತಿಕಾರ/ ಸ್ಕಾಲ್ಪ ಕ್ರೂಸ್ ಕ್ಷಿಪಣಿ, ಹ್ಯಾಮರ್ ಬಾಂಬ್ ಬಳಕೆ*
ಹೊಸದಿಲ್ಲಿ :ಇತ್ತೀಚೆಗೆ ಪಹಲ್ಗಾಮ್ನಲ್ಲಿ 26 ನಾಗರಿಕರನ್ನು ಭಯೋತ್ಪಾದಕರು ಕೊಂದಿದ್ದಕ್ಕೆ ಪ್ರತೀಕಾರವಾಗಿ
ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಮತ್ತು ಪಾಕಿಸ್ತಾನದ ಗಡಿಭಾಗದಲ್ಲಿ ಭಾರತೀಯ ಸೇನೆ ‘ಆಪರೇಷನ್ ಸಿಂಧೂರ್’ ಹೆಸರಿನಲ್ಲಿ ಉಗ್ರರ ತಾಣಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ.
ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ 5 ಭಯೋತ್ಪಾದಕ ಶಿಬಿರಗಳನ್ನು ಹಾಗೂ ಪಾಕಿಸ್ತಾನದಲ್ಲಿದ್ದ 4 ಭಯೋತ್ಪಾದಕ ನೆಲೆಗಳನ್ನು ನಾಶಪಡಿಸುವಲ್ಲಿ ಭಾರತದ ಸೇನೆಯ ಜಂಟಿ ಕಾರ್ಯಾಚರಣೆ ಯಶಸ್ವಿಯಾಗಿದೆ.
ಪಾಕಿಸ್ತಾನದ 9 ಪ್ರದೇಶದಲ್ಲಿರುವ ಉಗ್ರರ ತಾಣಗಳ ಮೇಲೆ ಕ್ಷಿಪಣಿ ದಾಳಿ ನಡೆಸಲಾಗಿದೆ ಎಂದು ಭಾರತದ ರಕ್ಷಣಾ ಸಚಿವಾಲಯ ಈ ಕುರಿತು ವಿವರಣೆ ನೀಡಿದೆ.
ಪಹಲ್ಗಾಮ್ನಲ್ಲಿ ನಡೆದ ಅಮಾನವೀಯ ದಾಳಿಯ ಎರಡು ವಾರಗಳ ನಂತರ ಈ ದಾಳಿಗಳು ನಡೆದಿವೆ. ಭಯೋತ್ಪಾದಕ ಶಿಬಿರಗಳ ಮೇಲೆ ಭಾರತೀಯ ಸಶಸ್ತ್ರ ಪಡೆಗಳು ಬುಧವಾರ ಮುಂಜಾನೆ ನಡೆಸಿದ ಸರಣಿ ನಿಖರ ದಾಳಿಯಲ್ಲಿ 80 ಕ್ಕೂ ಹೆಚ್ಚು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಎಂದು ಉನ್ನತ ಭದ್ರತಾ ಮೂಲಗಳು ತಿಳಿಸಿವೆ.
ಮಧ್ಯರಾತ್ರಿ 1:44ರ ಸುಮಾರಿಗೆ ಭಾರತ ಕ್ಷಿಪಣಿ ದಾಳಿ ನಡೆಸಿದೆ. ಭಾರತೀಯ ಸಶಸ್ತ್ರ ಪಡೆಗಳ ಕ್ರಮಗಳು ಯಾವುದೇ ಪಾಕಿಸ್ತಾನಿ ಮಿಲಿಟರಿ ಸೌಲಭ್ಯಗಳನ್ನು ಗುರಿಯಾಗಿಸಿಕೊಂಡಿಲ್ಲ ಬದಲಾಗಿಷ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಭಾರತೀಯ ಸೇನೆ ಮಾಹಿತಿ ನೀಡಿದೆ. ಈ ಕಾರ್ಯಾಚರಣೆಯಲ್ಲಿ ಹೆಚ್ಚಿನ ನಿಖರತೆಯ, ದೀರ್ಘ-ಶ್ರೇಣಿಯ ದಾಳಿಯಲ್ಲಿ ಶಸ್ತ್ರಾಸ್ತ್ರಗಳನ್ನು ಬಳಸಿಕೊಂಡಿತು. ಇವುಗಳಲ್ಲಿ SCALP ಕ್ರೂಸ್ ಕ್ಷಿಪಣಿ, ಹ್ಯಾಮರ್ ಬಾಂಬ್ ಸೇರಿವೆ.
SCALP (ಸ್ಟಾರ್ಮ್ ಶ್ಯಾಡೋ): ಸ್ಟಾರ್ಮ್ ಶ್ಯಾಡೋ ಎಂದೂ ಕರೆಯಲ್ಪಡುವ SCALP ಕ್ಷಿಪಣಿಯು ದೀರ್ಘ-ಶ್ರೇಣಿಯ, ವಾಯು-ಉಡಾವಣಾ ಕ್ರೂಸ್ ಕ್ಷಿಪಣಿಯಾಗಿದೆ.