*ಅಧ್ಯಕ್ಷರಾಗಿ ಶಿವಕುಮಾರಗೌಡ, ಮರಿಗೌಡ್ರ ಉಪಾಧ್ಯಕ್ಷ*
*ವಿರೋಧಿಸಿದವರನ್ನೇ ಅಪ್ಪಿಕೊಂಡ ಬಿಜೆಪಿ/ ಕಳೆದ ಬಾರಿಯ ಕಾಂಗ್ರೆಸ್ ತಂತ್ರಕ್ಕೆ ತಿರುಮಂತ್ರ*
ಹುಬ್ಬಳ್ಳಿ : ಅವಿಭಾಜ್ಯ ಧಾರವಾಡ ಜಿಲ್ಲೆಯ ’ಸಹಕಾರ ಕೊಂಡಿ’ ಕೆಸಿಸಿ ಬ್ಯಾಂಕ್ನಲ್ಲಿ ಕೊನೆಗೂ ’ಆಪರೇಷನ್ ಕಮಲ’ ಮಾಡುವಲ್ಲಿ ಬಿಜೆಪಿ ದಂಡು ಯಶಸ್ವಿಯಾಗಿದ್ದು ಕಳೆದ ಅವಧಿಯಲ್ಲಿ ಆದ ತಂತ್ರಕ್ಕೆ ತಿರುಮಂತ್ರ ಹಾಕುವ ಮೂಲಕ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಎರಡೂ ಸ್ಥಾನಗಳನ್ನೂ ತನ್ನ ಮುಷ್ಟಿಯಲ್ಲಿ ಹಿಡಿದುಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಭಾರೀ ಕುತೂಹಲ ಕೆರಳಿಸಿದ್ದ ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ಜರುಗಿದ ಚುನಾವಣೆಯಲ್ಲಿ ೬ನೇ ಬಾರಿಗೆ ನಿರ್ದೇಶಕರಾಗಿರುವ ಮುಂಡರಗಿ ಮೂಲದ ಹಿರಿಯ ಸಹಕಾರಿ ಮುಖಂಡ ಶಿವಕುಮಾರಗೌಡ ಪಾಟೀಲ ಅಧ್ಯಕ್ಷರಾಗಿದ್ದು ಉಪಾಧ್ಯಕ್ಷರಾಗಿ ನಿಂಗನಗೌಡ ಮರಿಗೌಡರ ಆಯ್ಕೆಯಾದರು.
ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ತಲಾ ಒಂದು ನಾಮಪತ್ರ ಸಲ್ಲಿಕೆಯಾದ ಕಾರಣ ಇಬ್ಬರೂ ಅವಿರೋಧ ಆಯ್ಕೆ ಆಗಿದ್ದಾರೆ ಎಂದು ಚುನಾವಣಾಧಿಕಾರಿಯೂ ಆದ ಉಪವಿಭಾಗಾಧಿಕಾರಿ ಶಾಅಲಂ ಹುಸೇನ ಪ್ರಕಟಿಸಿದರು.
ಒಟ್ಟು 20ಸ್ಥಾನಗಳ ಪೈಕಿ 11ಸ್ಥಾನ ಗೆದ್ದಿದ್ದ ಕಾಂಗ್ರೆಸ್ ಹೆಚ್ಚಿನ ಪ್ರಾಬಲ್ಯ ಅಲ್ಲದೇ ಸಹಕಾರ ಉಪನಿಬಂಧಕರ ಮತ ಸೇರಿ ಅನಾಯಾಸವಾಗಿ ಗೆಲ್ಲಬಹುದಾಗಿದ್ದರೂ ಬಿಜೆಪಿಯ 9 ಸದಸ್ಯರ ಬಲದ ಬೆಂಬಲದಿಂದ ಕಾಂಗ್ರೆಸ್ನ 6 ಸದಸ್ಯರ ಬೆಂಬಲ ಹೊಂದಿದ್ದ ಶಿವಕುಮಾರಗೌಡ ಅಧ್ಯಕ್ಷರಾದರೆ ,ಬಿಜೆಪಿ ಬೆಂಬಲಿತರೇ ಆದ ಮರಿಗೌಡ್ರಗೆ ಶುಕ್ರದೆಸೆ ತಿರುಗಿತು.
ಕಾಂಗ್ರೆಸ್ ಪಾಳೆಯದಲ್ಲಿ ಸಹಕಾರಿ ರಂಗದಲ್ಲಿ ಪಳಗಿರುವ ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲರು ಸಭೆ ಕರೆದು ಒಮ್ಮತದಿಂದ ಆಯ್ಕೆ ಮಾಡುವ ಯತ್ನಕ್ಕೆ ಹಿನ್ನೆಡೆಯಾಗಿದ್ದು, ಇಂದು ಬೆಳಿಗ್ಗೆ ಮಾಜಿ ಸಚಿವ ಸಿ.ಸಿ.ಪಾಟೀಲ, ಮಾಜಿ ಶಾಸಕರಾದ ಕಳಕಪ್ಪ ಬಂಡಿ. ಶಿವರಾಜ ಸಜ್ಜನರ, ಕುಂದಗೋಳ ಶಾಸಕ ಎಂ.ಆರ್.ಪಾಟೀಲ ಇವರುಗಳ ಜತೆ ಚರ್ಚೆ ನಡೆಸಿ ಒಮ್ಮತಕ್ಕೆ ಬಂದು ನಾಮಪತ್ರ ಸಲ್ಲಿಸಿದ ಶಿವಕುಮಾರ ಗೌಡ ಗಾದಿಯೇರುವಲ್ಲಿ ಯಶಸ್ವಿಯಾದರು. ಇದರೊಂದಿಗೆ ಹಿಂದಿನ ಅವಧಿಯಲ್ಲಿ ಅಂತಿಮ ಕ್ಷಣದಲ್ಲಿ ಬಾಪುಗೌಡ ಪಾಟೀಲ ಕಮಲ ಪಾಳೆಯದಿಂದ ಹೊರಬಂದು ಕೈ ಹಿಡಿದು ಅಧ್ಯಕ್ಷ ಗಾದಿ ಹಿಡಿದ ವಿಚಾರದಲ್ಲಿ ಇಂದು ಅಂತಹದ್ದೇ ತಂತ್ರಗಾರಿಕೆ ಮೂಲಕ ಸೇಡು ತೀರಿಸಿಕೊಂಡಿದೆ.
ನಿನ್ನೆ ರಾತ್ರಿ ಸಚಿವ ಎಚ್.ಕೆ.ಪಾಟೀಲ ಸಭೆಯಲ್ಲಿ ಹಾವೇರಿಯ ಕೊಟ್ರೇಶಪ್ಪ ಬಸೇಗಣ್ಣಿ ಬಗ್ಗೆ ಒಲವು ಹೊಂದಲಾಗಿದ್ದು ಇಂದು ಬೆಳಿಗ್ಗೆ ಶಿವಕುಮಾರ ಗೌಡ ಹಾಗೂ ಅವರ ಐವರ ಬೆಂಬಲಿಗರು ಬಿಜೆಪಿ ಪಾಳೆಯದೊಂದಿಗೆ ಬಾಯಿ ಬಾಯಿ ಆದ ಪರಿಣಾಮ ಎಲ್ಲ ಲೆಕ್ಕಾಚಾರ ತಲೆಕೆಳಗಾಯಿತು.
*ಕಮಲ ಪಾಳೆಯದ ಅಚ್ಚರಿ ನಡೆ*
ಕೆಸಿಸಿ ಬ್ಯಾಂಕ್ ಪೂರ್ಣ ಫಲಿತಾಂಶ ಬಂದ ನಂತರ ಕಾಂಗ್ರೆಸ್ ಬೆಂಬಲಿತರ ಮೇಲುಗೈ ಆದ್ದರಿಂದ ಸಚಿವ ಎಚ್.ಕೆ.ಪಾಟೀಲರ ಬಳಿ ತೆರಳಿದ ಬಿಜೆಪಿ ನಿಯೋಗ ಈ ಹಿಂದೆ ಕೆಸಿಸಿ ಬ್ಯಾಂಕ್ನ ಕುಸಿತಕ್ಕೆ ಕಾರಣವಾದವರಿಗೆ ಬಿಟ್ಟು ಯಾರನ್ನೇ ಬೇಕಾದರೂ ಮಾಡಿ ನಾವು ಅಭ್ಯರ್ಥಿ ಹಾಕುವುದಿಲ್ಲ. ಆದರೆ ಶಿವಕುಮಾರ ಪಾಟೀಲರಿಗೆ ಪಟ್ಟ ಕಟ್ಟಲು ಮುಂದಾದರೆ ನಾವು ಅಭ್ಯರ್ಥಿ ಹಾಕುತ್ತೇವೆಂದು ಹೇಳಿ ಬಂದಿದ್ದ ಕೆಲ ಬಿಜೆಪಿ ಪ್ರಮುಖರು ಇಂದು ಶಿವಕುಮಾರ ಅವರ ಜತೆ ಕೈ ಜೋಡಿಸಿ ಅಧಿಕಾರ ಹಿಡಿದಿರುವುದು ನಿಜಕ್ಕೂ ಅಚ್ಚರಿಗೆ ಕಾರಣವಾಗಿದೆ.
ಇಂದು ಕಾಂಗ್ರೆಸ್ ಬೆಂಬಲಿತ ಐವರು ಇದ್ದರಾದರೂ ಬಹುಮತವಾಗುವುದಿಲ್ಲವೆಂದು ಅವಿರೋಧ ಆಯ್ಕೆ ಸುಗಮವಾಗಿ ಆಗಲು ಕಾರಣವಾಯಿತು. ಬ್ಯಾಂಕ್ ನ ಹಿತದೃಷ್ಟಿಯಿಂದ ಆಡಳಿತ ಮಂಡಳಿಯ ಎಲ್ಲ ಸದಸ್ಯರು ಚರ್ಚಿಸಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆಯಾದರೂ ಆದರೆ ವಾಸ್ತವವನ್ನು ಹೊಸ ಅಧ್ಯಕ್ಷರೇ ಹೇಳಬೇಕಾಗಿದೆ.
ಇಂದಿನ ಅಧ್ಯಕ್ಷರ ಉಪಾಧ್ಯಕ್ಷರ ಆಯ್ಕೆಯಲ್ಲೂ ಎರಡೂವರೆ ವರ್ಷದ ಸಹಕಾರ ತತ್ವ ಇದೆ ಎನ್ನಲಾಗುತ್ತಿದೆ. ಅಧ್ಯಕ್ಷರ ಜತೆ ಮುಂಡರಗಿಯ ಒಬ್ಬರು, ನರಗುಂದ, ರಾಣೆಬೆನ್ನೂರನ ಇಬ್ಬರು, ಶಿರಹಟ್ಟಿಯವರು ಇದ್ದಾರೆನ್ನಲಾಗಿದೆ.
ಚುನಾವಣೆ ಪ್ರಕ್ರಿಯೆ ವೇಳೆ ಬ್ಯಾಂಕಿನ ಎಲ್ಲ ನಿರ್ದೇಶಕರು, ಸಹಾಯಕ ಚುನಾವಣಾಧಿಕಾರಿ, ತಹಶೀಲ್ದಾರ ಡಾ.ದೊಡ್ಡ ಪ್ಪ ಹೂಗಾರ, ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಮುನಿಯಪ್ಪ, ಪ್ರಧಾನ ವ್ಯವಸ್ಥಾಪಕ ಶಿವಾನಂದ ಹೂಗಾರ ಇತರರು ಉಪಸ್ಥಿತರಿದ್ದರು.