*ತಮಾಟಗಾರ, ಮಾ.ನಾಗರಾಜಗೆ ಕೊನೆಯ ಕ್ಷಣದಲ್ಲಿ ಟಿಕೆಟ್ ಮಿಸ್*
ಹುಬ್ಬಳ್ಳಿ ; ಜೂ.13ರಂದು ವಿಧಾನಸಭೆಯಿಂದ ಪರಿಷತ್ ನಡೆವ ಚುನಾವಣೆಗೆ ಬಿಜೆಪಿ ಮೂವರು ಅಭ್ಯರ್ಥಿಗಳ ಹಾಗೂ ಕಾಂಗ್ರೆಸ್ 8 ಅಭ್ಯರ್ಥಿಗಳ ಪಟ್ಟಿ ಇಂದು ಬಿಡುಗಡೆ ಮಾಡಿದೆ. ಅಲ್ಲದೆ ಎರಡೂ ಪಕ್ಷಗಳೂ ಮಾ. ನಾಗರಾಜ್ ಹಾಗೂ ಇಸ್ಮಾಯಿಲ್ ತಮಾಟಗಾರಗೆ ಕೊನೆಯ ಕ್ಷಣದಲ್ಲಿ ಟಿಕೆಟ್ ನಿರಾಕರಿಸಿ ಉತ್ತರ ಕರ್ನಾಟಕಕ್ಕೆ ಅನ್ಯಾಯ ಮಾಡಿದೆ.
ಬಿಜೆಪಿ ಪಟ್ಟಿಯಲ್ಲಿ ನಿರೀಕ್ಷೆಯಂತೆ ಹಾಲಿ ಪರಿಷತ್ ಸಚೇತಕ ಎನ್ .ರವಿಕುಮಾರ ಮತ್ತೊಂದು ಅವಧಿಗೆ ಸ್ಥಾನ ಪಡೆದಿದ್ದು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲುಂಡ ಮಾಜಿ ಸಚಿವ ಸಿ.ಟಿ.ರವಿ ಸ್ಥಾನ ಪಡೆದಿದ್ದು ಬಿ.ಎಲ್. ಸಂತೋಷ್ ಮೇಲುಗೈ ಸಾಧಿಸಿದ್ದಾರೆ. ಮರಾಠಾ ಕೋಟಾದಡಿ ಎಂ.ಜಿ.ಮುಳೆಗೆ ಅವಕಾಶ ಕಲ್ಪಿಸಲಾಗಿದೆ.
ಹುಬ್ಬಳ್ಳಿ ಮೂಲದ ಮಾಜಿ ಕೆಪಿಎಸ್ಸಿ ಸದಸ್ಯ , ರಾಜ್ಯ ಬಿಜೆಪಿ ಕಚೇರಿಗಳ ನಿರ್ಮಾಣ ಉಸ್ತುವಾರಿಯಾಗಿರುವ ಮಾ.ನಾಗರಾಜ ಅಲ್ಲದೇ ಮಂಡ್ಯ ಸಂಸದೆ ಸುಮಲತಾಗೆ ಅಂತಿಮ ಹಂತದಲ್ಲಿ ಕೈ ಬಿಡಲಾಗಿದೆ.
ಲೋಕಸಭಾ ಚುನಾವಣೆಯಲ್ಲಿ ಕುರುಬ ಸಮುದಾಯಕ್ಕೆ ಆದ ಅನ್ಯಾಯವನ್ನು ಈ ಬಾರಿ ಉ.ಕ.ದ ಮಾ. ನಾಗರಾಜ ಅವರಿಗೆ ನೀಡಿ ಸರಿಪಡಿಸಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ.
ಮಂಡ್ಯದಲ್ಲಿ ಕ್ಷೇತ್ರ ತ್ಯಾಗ ಮಾಡಿದ ಸುಮಲತಾಗೂ ಮೇಲ್ಮನೆ ಭಾಗ್ಯ ಕರುಣಿಸದೇ ಕಮಲ ಪಡೆ ಶಾಕ್ ನೀಡಿದೆ.
ಕಾಂಗ್ರೆಸ್ ಹೈಕಮಾಂಡ್ ಅಂತಿಮವಾಗಿ 7 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿದೆ.
ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ, ಹಾಲಿ ಸಚಿವ ಎನ್.ಎಸ್.ಬೋಸರಾಜು, ಸಿಎಂ ರಾಜಕೀಯ ಕಾರ್ಯದರ್ಶಿ ಡಾ.ಕೆ ಗೋವಿಂದರಾಜು, ವಸಂತಕುಮಾರ್, ಜಗದೇವ್ ಗುತ್ತೇದಾರ್, ಐವನ್ ಡಿಸೋಜಾ ಮತ್ತು ಬಿಲ್ಕಿಸ್ ಬಾನೊ ಅವರನ್ನು ಕಾಂಗ್ರೆಸ್ ಅಭ್ಯರ್ಥಿಗಳನ್ನಾಗಿ ಘೋಷಿಸಲಾಗಿದೆ. ಇನ್ನು ಕಾಂಗ್ರೆಸ್ ನಿಂದ ಆಯ್ಕೆಯಾಗಿದ್ದ ಜಗದೀಶ್ ಶೆಟ್ಟರ್ ಅವರ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಕ್ಕೆ ಬಸನಗೌಡ ಬಾದರ್ಲಿ ಅವರನ್ನ ಆಯ್ಕೆ ಮಾಡಿದೆ.
ಅಲ್ಪಸಂಖ್ಯಾತ ಕೋಟಾದಡಿ ಉತ್ತರ ಕರ್ನಾಟಕದ ಧಾರವಾಡದ ಅಂಜುಮನ್ ಇಸ್ಲಾಂ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ ಸ್ಥಾನ ಗಿಟ್ಟಿಸಿದ್ದರೂ ಇಂದು ಪಟ್ಟಿ ಬಿಡುಗಡೆ ಮಾಡಿದಾಗ ಅವರ ಸ್ಥಾನದಲ್ಲಿ ಬಿಲ್ಕೀಶಬಾನು ಹೆಸರು ಮಹಿಳೆ ಮತ್ತು ಅಲ್ಪಸಂಖ್ಯಾತರ ಕೋಟಾದಡಿ ಸೇರಿತ್ತು.
ಅಲ್ಪಸಂಖ್ಯಾತರ ಕೋಟಾದಡಿ ಮುಸ್ಲಿಂ ಸಮುದಾಯಕ್ಕೆ ಉತ್ತರ ಕರ್ನಾಟಕಕ್ಕೋ ಅಥವಾ ದಕ್ಷಿಣ ಕರ್ನಾಟಕಕ್ಕೊ ಎಂಬುದು ತೀವ್ರ ಕುತೂಹಲಕ್ಕೆ ಕಾರಣವಾಗಿದ್ದರೂ ಸಿಎಂ ಸಿದ್ದರಾಮಯ್ಯ, ಡಿಸಿಎಂ ಶಿವಕುಮಾರ, ಸಚಿವ ಜಮೀರ್ ಅಲ್ಲದೇ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ, ಮಾಜಿ ಸಚಿವ ವಿನಯ ಕುಲಕರ್ಣಿ ಇವರುಗಳು ಒಮ್ಮತದಿಂದ ಬೆಂಬಲಿಸಿ ಒತ್ತಡ ಹೇರಿದ ಪರಿಣಾಮ ಅಂತಿಮವಾಗಿ ಧಾರವಾಡ ಮೂಲದ ಇಸ್ಮಾಯಿಲ್ ತಮಟಗಾರ ಅಖ್ಯೆರುಗೊಂಡಿತ್ತಾದರೂ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ.