*ಕಂಡ ಕನಸು ಸಾಕ್ಷಾತ್ಕರಿಸಿದ ರಿಯಲ್ ಅಚೀವರ್* / *ಎಂಟನೆ ತರಗತಿಯಲ್ಲಿ ಫೇಲಾಗಿ ಮುಂಬೈಗೆ ರೈಲು ಹತ್ತಿದವನ ಯಶೋಗಾಥೆ*
ಹುಬ್ಬಳ್ಳಿ : ಸುಮಾರು ಮೂರು ದಶಕಗಳ ಹಿಂದೆ ಎಂಟನೆ ತರಗತಿಯಲ್ಲಿ ಫೇಲಾಗಿ ಉಡುಪಿ ಜಿಲ್ಲೆಯ ಹಳ್ಳಿಯೊಂದರಿಂದ ಮಾಯಾನಗರಿ ಮುಂಬೈಗೆ ರೈಲು ಹತ್ತಿ ,ಕೆಲಸಕ್ಕಾಗಿ ಸುಮಾರು 60ಕ್ಕೂ ಹೆಚ್ಚು ಹೊಟೆಲ್ಗಳ ಬಾಗಿಲು ಬಡಿದಿದ್ದ ಹುಡುಗನೋರ್ವ ಇಂದು ಸಾವಿರಕ್ಕೂ ಹೆಚ್ಚು ಹೊಟೆಲ್ ಕಾರ್ಮಿಕರ ಒಡೆಯನಾಗಿದ್ದಲ್ಲದೇ ಪುಣೆಯ ಸಮೀಪದಲ್ಲೇ ದೊಡ್ಡ ಹೊಟೆಲ್ ಆರಂಭಿಸಿ ಸಾಧನೆ ಮಾಡಿದ್ದಾನೆ.
ಹೌದು, ಜಯದ ಹಾದಿಯಲ್ಲಿ ನಿರಂತರವಾಗಿ ಸಾಗುತ್ತಿರುವವರ ಬಗ್ಗೆ ಮಾತನಾಡಲು ಅನೇಕರು ಸಿಗುತ್ತಾರೆ. ಆದರೆ ಬದುಕಿನ ಸೋಲುಗಳನ್ನೇ ಜಯದ ಹಾದಿಯ ಮೆಟ್ಟಿಲುಗಳನ್ನಾಗಿ ಮಾಡಿಕೊಂಡು ತಾನು ಪ್ರೀತಿಸಿದ ಹೊಟೆಲ್ ವೃತ್ತಿಯನ್ನೇ ತನ್ನ ಉಸಿರಾಗಿಸಿಕೊಂಡು, ಬದುಕಾಗಿಸಿಕೊಂಡು ಹಲವರ ತುತ್ತಿನ ಚೀಲಕ್ಕೆ ಆಧಾರವಾಗಿದ್ದಾರೆ ಉಡುಪಿ ಮೂಲದ ಹುಬ್ಬಳ್ಳಿಯ ಹೊಟೆಲ್ ಉದ್ಯಮಿ ರಾಜೇಂದ್ರ ಶೆಟ್ಟಿ.
ಮುಂಬೈನ ವಿಶ್ವ ಪ್ಯಾಲೇಸ್ನಲ್ಲಿ ಕೆಲಸ ಮಾಡುವಾಗ ರಾತ್ರಿ ಟೆರೆಸ್ ಮೇಲೆ ಮಲಗಿದ್ದಾಗ ನಕ್ಷತ್ರಗಳನ್ನು ಎಣಿಸುತ್ತ ತಾನೂ ಇಂತಹದ್ದೊಂದು ಭವ್ಯ ಹೊಟೆಲ್ ಮಾಡಬೇಕೆಂಬ ಕನಸು ಕಂಡು ತನ್ನ ಪರಿಶ್ರಮದಿಂದಲೇ ಹಂತ ಹಂತವಾಗಿ ಮೇಲೆರುತ್ತ ಬಂದು ಪೇಡೆನಗರಿ ಧಾರವಾಡದಲ್ಲಿ ಪಂಜುರ್ಲಿ ಹೊಟೆಲ್ ಆರಂಭಿಸುವ ಮೂಲಕ ಉದ್ಯಮಕ್ಕೆ ಬಲಗಾಲಿಟ್ಟ ಇವರು ಇಂದು( ಫೆ.15) ಮುಂಬೈ- ಬೆಂಗಳೂರು ಹೆದ್ದಾರಿಯಲ್ಲಿ ಪುಣೆಯ ವಾಖೇಡ್ದ ಸಿಟಿ ಅವೆನ್ಯೂದಲ್ಲಿ ತಮ್ಮ ತಂದೆಯ ಹೆಸರಿನಲ್ಲಿ ವಿಶ್ವನಾಥ ಪ್ಯಾಲೇಸ್ ಆರಂಭಿಸಿದ್ದು ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಉದ್ಘಾಟನೆ ನೆರವೇರಿಸಿದ್ದಾರೆ . ಕರುನಾಡ ಭೋಜನ ಸವಿಯೊಂದಿಗೆ ಇಲ್ಲಿನ ಸಾಹಿತ್ಯ, ಸಂಸ್ಕೃತಿ, ಸಾಧಕರು ಪರಿಚಯಿಸುವ ಪ್ರಯತ್ನ ವಿಶೇಷವಾಗಿದೆ.
ಎಂಟನೆ ತರಗತಿಯಲ್ಲಿ ಫೇಲಾಗಿದ್ದರಿಂದ ಮನೆಗೆ ಹೋದರೆ ತಂದೆ ಹೊಡೆಯುತ್ತಾರೆ ಎಂದು ಮುಂಬೈಗೆ ತೆರಳಿ ಡಬ್ಬಾ ಅಂಗಡಿಯಲ್ಲಿ ಚಹಾ ಮಾರಿ, ವೇಟರ್, ಕ್ಲೀನರ್ ಮುಂತಾದ ಕೆಲಸ ಮಾಡಿ ನಂತರ ಮ್ಯಾನೇಜರ್ ಆಗಿಯೂ ಕಾರ್ಯನಿರ್ವಹಿಸಿದ ಅನುಭವದೊಂದಿಗೆ ಧಾರವಾಡದ ಟೋಲ್ನಾಕಾ ಬಳಿ ಚಿಕ್ಕದಾದ ಹೊಟೆಲ್ ಆರಂಭಿಸಿದ ಇವರು ಅತ್ಯಂತ ಶ್ರದ್ಧೆಯಿಂದ ಕೆಲಸ ಮಾಡುತ್ತ ಮುನ್ನಡೆಯುತ್ತ ಬಂದವರು ತದನಂತರ ಹಿಂದಿರುಗಿ ನೋಡಲಿಲ್ಲ.
ಹುಬ್ಬಳ್ಳಿ-ಧಾರವಾಡದಲ್ಲಿ ಪಂಜುರ್ಲಿ ಸಮೂಹ ಮಾಂಸಾಹಾರಿ ವಿಭಾಗದಲ್ಲಂತೂ ತನ್ನದೇ ಆದ ವಿಶಿಷ್ಟ ಶುಚಿ, ರುಚಿಯಿಂದ ಜನರ ಮನೆ ಮಾತಾಗಿದೆ. 2019ರಲ್ಲಿ ಗೋಕುಲ ರೋಡ್ನಲ್ಲಿ ಆರಂಭವಾದ ತಾಯಿ ಹೆಸರಿನಲ್ಲಿ ಆರಂಭಿಸಿದ ಸಂಪೂರ್ಣ ಶಾಖಾಹಾರಿ ಹೊಟೆಲ್ ಲೀಲಾವತಿ ಪ್ಯಾಲೇಸ್ ತನ್ನದೇ ಖ್ಯಾತಿ ಪಡೆದಿದೆ. ತದನಂತರ ಬೆಳಗಾವಿ, ದಾವಣಗೆರೆ ಮುಂತಾದೆಡೆ ಹೊಟೆಲ್ ಆರಂಭಿಸಿದ್ದು ಈಗ ಈ ಸಮೂಹದ ಒಟ್ಟು 10 ಹೊಟೆಲ್ಗಳಿವೆ.
ಗ್ರಾಹಕರಿಗೆ ಸರಿಯಾದ ನ್ಯಾಯ ಒದಗಿಸಿಲ್ಲ ಅಂದರೆ ನನ್ನ ತಾಯಿಗೇ ಮಾಡಿದ ಅನ್ಯಾಯ ಎನ್ನುವ ಮನೋಭಾವದ ರಾಜೇಂದ್ರ ಶೆಟ್ಟಿ ಅವರು, ಗ್ರಾಹಕರ ಆಶೀರ್ವಾದ, ಪಂಜುರ್ಲಿ ದೈವದ ಬಲದಿಂದ ಈ ಸಾಧನೆ ಮಾಡಲು ಆರಂಭಿಸಲು ಸಾಧ್ಯವಾಯಿತೇ ಹೊರೆತು ನನ್ನ ಪಾತ್ರ ಏನಿಲ್ಲ ಎಂದು ನಯವಾಗಿ ಹೇಳುತ್ತಾರೆ. ಅಕ್ಷರಶಃ ಇವರ ಜೀವನಗಾಥೆ ಹೊಸದಾಗಿ ಹೊಟೆಲ್ ಉದ್ಯಮಕ್ಕೆ ಬರುವವರಿಗೆ ಪ್ರೇರಣಾದಾಯಕವಾಗಿದೆ.
ಸಮಾಜದ ಸೊತ್ತಿನಿಂದ ಬೆಳೆದ ಮನುಷ್ಯ ಸಮಾಜದ ಋಣದಲ್ಲಿರುತ್ತಾನೆ.ಅದರಿಂದ ಋಣಮುಕ್ತನಾಗಲು ಒಂದೇ ದಾರಿ ತನ್ನ ಕೈಯಿಂದಾದ ಮಟ್ಟಿಗೆ ಇತರರಿಗೆ ದಾನ ಮಾಡುವುದು ಎಂಬುದನ್ನು ಪಾಲಿಸುತ್ತ ಬಂದಿರುವ ರಾಜೇಂದ್ರ ಶೆಟ್ಟಿಯವರಿಗೆ ರಾಜ್ಯ ಮಟ್ಟದ ಸೇರಿದಂತೆ ಹಲವು ಹತ್ತು ಪುರಸ್ಕಾರಗಳು ಅರಸಿ ಬಂದಿದ್ದು,ಇವರು ಹುಬ್ಬಳ್ಳಿ ಧಾರವಾಡ ಬಂಟರ ಸಂಘದ ಪದಾಧಿಕಾರಿಯೂ ಆಗಿ ಸಕ್ರೀಯರಾಗಿದ್ದಾರೆ.
ಪ್ರಾಮಾಣಿಕ ಪ್ರಯತ್ನದಲ್ಲಿ ಯಶಸ್ಸು ಅರಸಿ ಬರುತ್ತದೆ ಎಂಬುದಕ್ಕೆ ರಾಜೇಂದ್ರ ಅವರು ಉದಾಹರಣೆ. ಅವರಿಗೆ ಮತ್ತಷ್ಟು ಯಶಸ್ಸು ಸಿಗಲಿ.
*ಸುಗ್ಗಿ ಸುಧಾಕರ ಶೆಟ್ಟಿ*
, ಹುಬ್ಬಳ್ಳಿ ಧಾರವಾಡ ಬಂಟರ ಸಂಘದ ಅಧ್ಯಕ್ಷ ರು