*18ನೇ ಐಪಿಎಲ್ ಗೆ ವರ್ಣರಂಜಿತ ಉದ್ಘಾಟನೆ*
ಕೊಲ್ಕತ್ತಾ : ಈಡನ್ ಗಾರ್ಡನ್ಸ್ ಮೈದಾನದಲ್ಲಿ ಐಪಿಎಲ್ 18ರ ಆವೃತ್ತಿಯ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೋಲ್ಕತ್ತಾ ನೈಟ್ ರೈಡರ್ಸ್ ಮೇಲೆ ಗೆಲುವು ಸಾಧಿಸಿ 17 ವರ್ಷಗಳ ಹಿಂದಿನ ಸೋಲಿನ ಸೇಡು ತೀರಿಸಿಕೊಂಡಿತು.
ಮೊದಲ ಆರು ಓವರ್ ಗಳಲ್ಲಿ 80 ರನ್ ಕಲೆ ಹಾಕಿದ ಆರಂಭಕಾರರಾದ ಫಿಲ್ ಸಾಲ್ಟ್ ಹಾಗೂ ವಿರಾಟ್ ಕೊಹ್ಲಿ ಬೌಂಡರಿ, ಸಿಕ್ಸರ್ ಮಳೆಗೆರೆದರು. ಸಾಲ್ಟ್ 31 ಎಸೆತಗಳಲ್ಲಿ 56 ರನ್ ಗಳಿಸಿ ಔಟಾದರು. ಕೊಹ್ಲಿ ಅಜೇಯ 59 ರನ್ ಕಲೆ ಹಾಕಿದರು. ನಾಯಕ ರಂಜಿತ ಪಾಟೀದಾರ 34 ಓಟ ಗಳಿಸಿದರು.ಲಿವಿಂಗಸ್ಟನ್ 15 ಔಟಾಗದೆ ಉಳಿದರು.ಆರ್ ಸಿ ಬಿ 16.2 ಓವರುಗಳಲ್ಲಿ ಗೆಲುವಿನ ನಗೆ ಬೀರಿತು.
ಮೊದಲು ಬ್ಯಾಟಿಂಗ್ ಮಾಡಿದ ಅಜಿಂಕ್ಯ ರಹಾನೆ ನೇತೃತ್ವದ ಪಡೆ ನಿಗಧಿತ ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 174ರನ್ ಕಲೆ ಹಾಕಿತ್ತು. ನಾಯಕ ರಹಾನೆ 56, ಸುನೀಲ್ ನರೈನ 44 ಹಾಗೂ ರಘುವಂಶಿ 30 ರನ್ ಗಳಿಸಿ ಉತ್ತಮ ಮೊತ್ತಕ್ಕೆ
ಕಾರಣರಾದರು. ಬೆಂಗಳೂರು ತಂಡದ ಕೃಣಾಲ್ ಪಾಂಡ್ಯ ಮೂರು ಹಾಗೂ ಹ್ಯಾಜಲ್ವುಡ್ ಎರಡು ವಿಕೆಟ್ ಪಡೆದರು.
ವರ್ಣರಂಜಿತ ಉದ್ಘಾಟನೆ ಸಮಾರಂಭದಲ್ಲಿ ಬಾಲಿವುಡ್ ಬಾದಷಾ ಶಾರೂಖ್ ಖಾನ್ ಜೊತೆ ಕಿಂಗ್ ಕೊಹ್ಲಿ ಹೆಜ್ಜೆ ಹಾಕಿ ಗಮನ ಸೆಳೆದರು.ಮೂರು ವಿಕೆಟ್ ಪಡೆದ ಕೃಣಾಲ್ ಪಂದ್ಯ ಶ್ರೇಷ್ಠರಾದರು.