ಹಿರಿಯ ಮುಖಂಡ ಲಿಂಗರಾಜ ಪಾಟೀಲ ಸಹಿತ ಇತರರಿಗೆ ಮತ್ತೆ ನಿರಾಸೆ*
*ಮೂರು ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಕೇಸರಿ ಹೈಕಮಾಂಡ್*
ಹುಬ್ಬಳ್ಳಿ : ಹುಬ್ಬಳ್ಳಿ ಧಾರವಾಡ, ಹಾವೇರಿ, ಗದಗ ಮತ್ತು ಉತ್ತರ ಕನ್ನಡ ಜಿಲ್ಲೆಗಳನ್ನೊಳಗೊಂಡ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಹುರಿಯಾಳು ಯಾರು ಎಂಬ ಪ್ರಶ್ನೆಗೆ ಕೊನೆಗೂ ಕೇಸರಿ ಕಮಾಂಡ್ನಿಂದ ಉತ್ತರ ಹೊರ ಬಿದ್ದಿದ್ದು ಹಾಲಿ ಸದಸ್ಯ ಎಸ್.ವಿ.ಸಂಕನೂರಗೆ ಮತ್ತೆ ಮಣೆ ಹಾಕಿದ್ದು, ಮಾಜಿ ಪರಿಷತ್ ಸದಸ್ಯ , ಕಾಂಗ್ರೆಸ್ ಅಭ್ಯರ್ಥಿ ಮೋಹನ ಲಿಂಬಿಕಾಯಿ ಎದುರು ಸೆಡ್ಡು ಹೊಡೆಯಲಿದ್ದಾರೆ.

ಸಂಕನೂರ ಅವರ ವಯಸ್ಸು, ಹಿಂದುಳಿದವರಿಗೆ ನೀಡಬೇಕೆಂಬ ಕೂಗು , ಬದಲಾವಣೆ ಮಾಡಲೇಬೇಕೆಂಬ ಸಂಘ ಪರಿವಾರದ ಕೂಗಿನ ಮಧ್ಯೆಯೆ ಮತ್ತೊಮ್ಮೆ ಸಂಕನೂರ ಅವರನ್ನು ಪಶ್ಚಿಮ ಅಭ್ಯರ್ಥಿಯನ್ನಾಗಿ ಘೋಷಿಸಿದ್ದು ಈಶಾನ್ಯ ಶಿಕ್ಷಕರ ಕ್ಷೇತ್ರದಿಂದ ಶಶೀಲ್ ನಮೋಶಿ ಹಾಗೂ ಆಗ್ನೇಯ ಪದವೀಧರ ಕ್ಷೇತ್ರದಿಂದ ಕೆ.ಎಮ್ .ಸುರೇಶ ಅವರನ್ನು ಅಂತಿಮಗೊಳಿಸಲಾಗಿದೆ.
ಕಳೆದ ತಿಂಗಳೇ ಮೂರು ಹೆಸರುಗಳ ಶಾರ್ಟ ಲೀಸ್ಟ್ ಕಳಿಸಿದ್ದು ಅವರಲ್ಲಿ ಒಬ್ಬರು ಅಂತಿಮಗೊಳ್ಳುವರೆಂಬ ಗುಸು ಗುಸುವಿನ ಮಧ್ಯೆಯೆ ಸುಮಾರು ಹದಿನೈದು ದಿನಗಳು ಮುಂದೂಡಲ್ಪಟ್ಟು ಇಂದು ಅಂತಿಮಗೊAಡಿದೆ. ಸಂಘ ಪರಿವಾರ, ಶಿಕ್ಷಣ ಸಂಕುಲ ಮುಂತಾದವುಗಳು ಸಾಕಷ್ಟು ಕಸರತ್ತು ನಡೆಸಿದರೂ ಬದಲಾವಣೆ ರಿಸ್ಕ್ಗೆ ವರಿಷ್ಠರು ಮಣೆ ಹಾಕಿಲ್ಲವಾಗಿದೆ. ಹಾಲಿ ಕ್ಷೇತ್ರ ಪ್ರತಿನಿಧಿಸುತ್ತಿರುವ ಎಸ್.ವಿ.ಸಂಕನೂರ ಹ್ಯಾಟ್ರಿಕ್ ಲೆಕ್ಕಾಚಾರದಲ್ಲಿದ್ದಾರೆ.

ಅವಿಭಾಜ್ಯ ಧಾರವಾಡ ಜಿಲ್ಲೆಯ ಹಿರಿಯ ಮುಖಂಡ , ಎರಡು ಬಾರಿ ಅಂತಿಮ ಕ್ಷಣದಲ್ಲಿ ಟಿಕೆಟ್ ಕೈ ತಪ್ಪಿರುವ ಲಿಂಗರಾಜ ಪಾಟೀಲ ಅವರಿಗೆ ಮತ್ತೆ ವರಿಷ್ಠರು ಕೈ ಕೊಟ್ಟಿದ್ದು ಜಯತೀರ್ಥ ಕಟ್ಟಿ ಧಾರವಾಡ ಜಿಲ್ಲಾ ಪ್ರಭಾರಿಯಾದಾಗಲೇ ರೇಸ್ನಿಂದ ಹೊರ ಬಿದ್ದಿದ್ದರು. ಭೋಜರಾಜ ಕರೂದಿ, ರವಿ ದಂಡಿನ, ಸುಭಾಸಸಿಂಗ ಜಮಾದಾರ ಮತ್ತಿತರರ ಹೆಸರು ಬಂದಿತ್ತಾದರೂ ಅಂತಿಮವಾಗಿ ಸಂಕನೂರ ಅವರ ಒತ್ತಡವೇ ಮೇಲುಗೈ ಸಾಧಿಸಿತು.

ಕವಿವಿ ಮಾಜಿ ಸಿಂಡಿಕೇಟ್ ಸದಸ್ಯ ಸುದೀಂಧ್ರ ದೇಶಪಾಂಡೆ ಈಗಾಗಲೇ ನಾಲ್ಕು ಜಿಲ್ಲೆಗಳಲ್ಲೂ ಒಂದು ಸುತ್ತು ಮುಗಿಸಿದ್ದು ಅಂತಿಮವಾಗಿ ಅವರು ಪಕ್ಷೇತರರಾಗಿ ಸ್ಪರ್ಧಿಸುವ ಸಾಧ್ಯತೆಗಳಿವೆ.
ಕಳೆದ ಬಾರಿಯೇ ಹಾಲಿ ಪರಿಷತ್ ಸದಸ್ಯ ಸಂಕನೂರ ಅವರಿಗೆ ವಿರೋಧ ವ್ಯಕ್ತವಾಗಿತ್ತಾದರೂ ಇನ್ನೊಮ್ಮೆ ಅವಕಾಶ ನೀಡಲು ಪಟ್ಟು ಹಿಡಿದ ಪರಿಣಾಮ ಅವರಿಗೆ ನೀಡಲಾಗಿತ್ತು. ಕಳೆದ ಬಾರಿಯೇ ಹೊಸಬರಿಗೆ ಅವಕಾಶ ನೀಡುವುದಾಗಿ ಭರವಸೆ ನೀಡಿದ್ದರು. ಈ ಬಾರಿ ಬದಲಾವಣೆ ನಿಶ್ಚಿತ ಎಂಬ ಮಾತುಗಳು ಕೇಳಿ ಬಂದಿದ್ದವು.



