*ಬಿಜೆಪಿ ಭದ್ರಕೋಟೆ ಕೈ ವಶಕ್ಕೆ ‘ಲಕ್ಷ್ಮಿ’ ಕರಾಮತ್ತು / ಕಾಂಗ್ರೆಸ್ಸಿಗೆ ಗ್ಯಾರಂಟಿ ಲಾಭದ ಲೆಕ್ಕಾಚಾರ / ಮೋದಿ ಮಂತ್ರ, ನೇಹಾ ಅನುಕಂಪದ ಮೇಲೆ ಕಮಲದ ಕಣ್ಣು*
ಬೆಳಗಾವಿ: ರಾಜ್ಯದ ಹೈ ವೋಲ್ಟೇಜ್ ಕ್ಷೇತ್ರಗಳಲ್ಲಿ ಒಂದಾಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರ ಕೇಸರಿ ಪಾಳೆಯದ ಭದ್ರಕೋಟೆ ಹಣೆ ಪಟ್ಟಿ ಹಚ್ಚಿಕೊಂಡಿದ್ದು ಅದು ಮುಂದುವರಿಯುವ ಎಲ್ಲ ಲಕ್ಷಣಗಳು ಗೋಚರಿಸಲಾರಂಬಿಸಿದೆ.
2004ರಿಂದ ಸತತ ನಾಲ್ಕು ಬಾರಿ ಸಂಸತ್ಗೆ ಬಲಗಾಲಿಟ್ಟಿದ್ದ ಅಲ್ಲದೇ ಅವರ ನಿಧನದ ನಂತರ ಅವರ ಪತ್ನಿ ಗೆಲುವು ಸಾಧಿಸಿದ್ದ ಕ್ಷೇತ್ರದಲ್ಲಿ ಈ ಬಾರಿ ರಾಜ್ಯದ ಸಜ್ಜನ ರಾಜಕಾರಣಿ ಎಂದೇ ಖ್ಯಾತರಾಗಿರುವ ಹುಬ್ಬಳ್ಳಿಯ ಜಗದೀಶ ಶೆಟ್ಟರ್ ಕಣಕ್ಕಿಳಿದಿದ್ದಾರೆ. ಅಂಗಡಿ ಕುಟುಂಬದ ಬೀಗರು ಆಗಿರುವ ಶೆಟ್ಟರ್ಗೆ ಅಂತಿಮವಾಗಿ ಕಮಲ ಕಮಾಂಡ್ ಮಣೆ ಹಾಕಿದ ನಂತರ ಆರಂಭದಲ್ಲಿ ಎದ್ದಿದ್ದ ’ಹೊರಗಿನವರು’ ಎಂಬ ಪ್ರಬಲ ಕೂಗು ಕ್ರಮೇಣ ಕರಗಿದ್ದು ಬಿಜೆಪಿ ಭದ್ರಕೋಟೆ ನುಚ್ಚು ನೂರು ಮಾಡುವ ಗುರಿಯೊಂದಿಗೆ ಮಗ ಮೃಣಾಲ್ಗೆ ಟಿಕೆಟ್ ತಂದಿರುವ ಪ್ರಭಾವಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ ಕನಸು ದಿನದಿಂದ ದಿನಕ್ಕೆ ಕ್ಷೀಣಿಸಲಾರಂಬಿಸಿದೆ.
ಮೇಲ್ನೋಟಕ್ಕೆ ಹಳೇ ಬೇರು ಮತ್ತು ಹೊಸ ಚಿಗುರುಗಳ ಸೆಣಸಾಟದಂತಿದ್ದರೂ ಜಿದ್ದಾ ಜಿದ್ದಿಯ ಪೈಪೋಟಿ ನಿಶ್ಚಿತವಾಗಿದ್ದು ಸ್ವತಃ ಪ್ರಧಾನಿ ನರೇಂದ್ರ ಮೋದಿ ಕುಂದಾನಗರಿಗೆ ಬಂದು ಶೆಟ್ಟರ್ಗೆ ಬೂಸ್ಟರ್ ಡೋಸ್ ಕೊಟ್ಟಿದ್ದು ಅಲ್ಲದೇ ಇತ್ತೀಚೆಗೆ ಹತ್ಯೆಯಾದ ನೇಹಾ ಹಿರೇಮಠ ಪ್ರಕರಣ ಸಹ ವರವಾಗಿ ಪರಿಣಮಿಸಿದೆ. ಕೇಸರಿ ಪಕ್ಷದ ವರ್ಚಸ್ಸು ಮತ್ತು ಕೊಡುಗೆಗಳು ಲೆಕ್ಕದ ಪಟ್ಟಿಯಲ್ಲಿದ್ದರೂ ಗೋಕಾಕ ಸಾಹುಕಾರ ಮತ್ತು ಅರಬಾವಿ ಸಾಹುಕಾರರಿಬ್ಬರೂ ಶೆಟ್ಟರ್ ಗೆಲುವಿಗೆ ಟೊಂಕ ಕಟ್ಟಿರುವುದು ಆನೆ ಬಲ ಬಂದಂತಾಗಿದೆ.
ಬೆಳಗಾವಿ ಕ್ಷೇತ್ರ ವ್ಯಾಪ್ತಿಯಲ್ಲಿ ಎಂಟು ವಿಧಾನಸಭಾ ಕ್ಷೇತ್ರಗಳು ಬರುತ್ತಿದ್ದು ಮೂರು ಕ್ಷೇತ್ರಗಳಲ್ಲಿ ಬಿಜೆಪಿಯ ಶಾಸಕರಿದ್ದರೆ, ಐವರು ಶಾಸಕರು ಕಾಂಗ್ರೆಸ್ಸಿಗರಿದ್ದು ಕೈ ಪಡೆ ಗ್ಯಾರಂಟಿ ಯೋಜನೆಗಳನ್ನು ವಿಶೇಷವಾಗಿ ನಂಬಿಕೊಂಡಿದೆ. ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಇಬ್ಬರೂ ಮೃಣಾಲ ಗೆಲುವಿಗೆ ಪ್ರಚಾರ ನಡೆಸಿದ್ದಾರೆ.
ಅಲ್ಲದೇ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ ಸಹ ಶಕ್ತಿ ಮೀರಿ ಮಗನ ಗೆಲುವಿಗೆ ಯತ್ನ ನಡೆಸಿದ್ದಾರೆ. ಆರು ತಿಂಗಳ ಹಿಂದಿನಿಂದಲೇ ಚುನಾವಣೆ ತಯಾರಿ ನಡೆಸಿರುವ ಲಕ್ಷ್ಮಿ ಮೇಡಂ 2014ರಲ್ಲಿ ಸುರೇಶ ಅಂಗಡಿ ವಿರುದ್ಧದ ಸೋಲಿನ ಸೇಡನ್ನು ತೀರಿಸಲು ಮುಂದಾಗಿದ್ದಾರೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಅಲ್ಪ ಅಂತರದಿಂದ ಸೋತ ಸತೀಶ ಜಾರಕಿಹೊಳಿ ಈಗ ಉಸ್ತುವಾರಿ ಸಚಿವರಾಗಿರುವುದು ಅಲ್ಲದೇ ಲಕ್ಷ್ಮಣ ಸವದಿ ಸಾಮರ್ಥ್ಯ ಎಷ್ಟರ ಮಟ್ಟಿಗೆ ಕೈ ಪಡೆಗೆ ವರವಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.
ಉಮೇದುವಾರಿಕೆ ಅಂತಿಮಗೊಂಡ ನಂತರ ಹುಬ್ಬಳ್ಳಿಯಿಂದ ಬೆಳಗಾವಿಗೆ ಸ್ಥಳಾಂತರಗೊಂಡಿರುವ ಶೆಟ್ಟರ್ ಮುಖ್ಯಮಂತ್ರಿ ಆಗಿ, ಎರಡು ಬಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯ ಮಾಡಿದ್ದರೂ ಮೋದಿ ನಾಮ ಬಲ ಅಲ್ಲದೇ ರಾಮಮಂದಿರ ಪ್ಲಸ್ ಆಗಿದ್ದರೂ ಇತ್ತೀಚಿನ ನೇಹಾ ಹತ್ಯೆಯ ಆರೋಪಿ ಮುನವಳ್ಳಿಯವ ಆಗಿರುವುದು ಅಲ್ಲದೇ ಅಲ್ಲಿನ ಜನತೆಯ ಆಕ್ರೋಶದ ಬಾಣ ಅಲ್ಪ ಮಟ್ಟಿಗೆ ಮತವಾಗಿ ಪರಿವರ್ತನೆ ನಿಶ್ಚಿತವಾಗಿದ್ದು, ಸವದತ್ತಿ, ರಾಮದುರ್ಗ, ಸುತ್ತಮುತ್ತ ತೀವ್ರ ಹಿನ್ನೆಡೆಯಲ್ಲಿದ್ದ ಬಿಜೆಪಿಗೆ ಈಗ ಅನೂಕೂಲದ ಬಾಣವಾಗಿ ಮಾರ್ಪಟ್ಟಿದೆ.
ಬೈಲಹೊಂಗಲ ಬಿಜೆಪಿ ಮನೆಯೊಂದು ಮೂರು ಬಾಗಿಲಾಗಿದ್ದು ಈಗ ಎಲ್ಲವೂ ಸುಸೂತ್ರವಾಗಿದ್ದರೆ ರಾಮದುರ್ಗ ಅಲ್ಲದೇ ಸವದತ್ತಿಗಳಲ್ಲೂ ಎಲ್ಲ ಭಿನ್ನಾಭಿಪ್ರಾಯ ಮರೆಯಾಗಿದ್ದು ಬೆಳಗಾವಿ ಶಹರ , ದಕ್ಷಿಣ ದೊಡ್ಡ ಮಟ್ಟದ ಲೀಡ್ ತಂದು ಕೊಡಬಹುದಾಗಿದೆ. ಶೆಟ್ಟರ್ ಹೊರಗಿನವರಲ್ಲ ಎಂಬ ಅಂಶ ಮನದಟ್ಟು ಮಾಡುವಲ್ಲಿ ತೀವ್ರ ಶ್ರಮಿಸಲಾಗುತ್ತಿದೆ. ಮಾಜಿ ಸಿಎಂ ಪತ್ನಿ ಶಿಲ್ಪಾ ಶೆಟ್ಟರ್,ಹಾಲಿ ಸಂಸದೆ ಮಂಗಲಾ ಅಂಗಡಿ ಕುಟುಂಬ, ಶೆಟ್ಟರ್ ಸಹೋದರ ಪ್ರದೀಪ ಶೆಟ್ಟರ್, ಅಂಗಡಿಯವರ ಮಗಳು,ಅಳಿಯ ಸಂಕಲ್ಪ ಶೆಟ್ಟರ್ ಎಲ್ಲರೂ ಕಾಲಿಗೆ ಚಕ್ರ ಕಟ್ಟಿಕೊಂಡು ಕ್ಷೇತ್ರ ಸುತ್ತುತ್ತಿದ್ದಾರೆ. ಹೆಬ್ಬಾಳ್ಕರರ ’ಪಂಚಮಸಾಲಿ’ ಬಲ ತಗ್ಗಿಸಲು ಬಸನಗೌಡ ಪಾಟೀಲ ಯತ್ನಾಳ, ಶಂಕರ ಪಾಟೀಲ ಮುನೇನಕೊಪ್ಪ, ಸಿ.ಸಿ.ಪಾಟೀಲ ಅಲ್ಲದೇ ಸ್ವತಃ ಮಾಜಿ ಸಿಎಂ ಯಡಿಯೂರಪ್ಪ ಎಲ್ಲರೂ ತಂತ್ರಗಾರಿಕೆ ಹೆಣೆದಿದ್ದಾರೆ.
ಕ್ಷೇತ್ರದಲ್ಲಿ ಜಾರಕಿಹೊಳಿ ಕುಟುಂಬದ ಹಿಡಿತ ಸಾಕಷ್ಟಿದ್ದು ಇನ್ನೊಂದೆಡೆ ಚಿಕ್ಕೋಡಿಯಲ್ಲಿ ಸತೀಶ ಜಾರಕಿಹೊಳಿ ಪುತ್ರಿ ಕಣದಲ್ಲಿರುವುದು ಇಬ್ಬರಿಗೂ ಗೆಲುವು ಅನಿವಾರ್ಯವಾಗಿದ್ದು ಅಂತಿಮ ಕ್ಷಣದ ಲೆಕ್ಕಾಚಾರಗಳು ಯಾವ ಯಾವ ತಿರುವು ಪಡೆಯುತ್ತದೋ ಕಾದು ನೋಡಬೇಕಾಗಿದೆ.
19,23, 788 ಒಟ್ಟು ಮತದಾರರಿದ್ದು ಲಿಂಗಾಯತ ಮತದಾರರೇ ನಿರ್ಣಾಯಕರಾಗಿದ್ದು (ಸುಮಾರು 6 ಲಕ್ಷ) ಎರಡನೇ ಸ್ಥಾನದಲ್ಲಿ 2.83 ಲಕ್ಷ ಪರಿಶಿಷ್ಠ ಜಾತಿ, ಪಂಗಡದ ಮತದಾರರಿದ್ದಾರೆ.
ಹುಬ್ಬಳ್ಳಿಯಿಂದಲೂ ದೊಡ್ಡ ಮಟ್ಟದ ಕಾರ್ಯಕರ್ತರ ಪಡೆ ಬೆಳಗಾವಿಯಲ್ಲೇ ಬೀಡು ಬಿಟ್ಟಿದ್ದು, ವಾಯುವ್ಯ ಸಾರಿಗೆ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಸಾವಕಾರ, ಹುಡಾ ಮಾಜಿ ಅಧ್ಯಕ್ಷ ನಾಗೋಸಾ ಕಲಬುರ್ಗಿ ಮುಂತಾದವರ ನೇತೃತ್ವದಲ್ಲಿ ದಿನಂಪ್ರತಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.
ನಿಧಾನವಾಗಿ ಹೊರಗಿನವರಲ್ಲ ಎಂಬ ಸಂದೇಶ ರವಾನೆಯಾಗಿ ಕೆಎಲ್ ಇ ಅಧ್ಯಕ್ಷ ಪ್ರಭಾಕರ ಕೋರೆ, ಮಹಾಂತೇಶ ಕವಟಗಿಮಠ ಸಹಿತ ಹಲವು ಮುಖಂಡರು ಶೆಟ್ಟರ್ ಅವರನ್ನು ’ಮನೆ ಮಗ’ ಎಂಬಂತೆ ಬಿಂಬಿಸಲು ಮುಂದಾಗಿದ್ದು, ಮನೆ ಮಗಳೆಂಬ ಹಿರಿಮೆಯ ಲಕ್ಷ್ಮಿಗೆ ತೀವ್ರ ಟಕ್ಕರ್ ಕೊಡುತ್ತಿದ್ದಾರೆ.
ತಮ್ಮ ಜೀವನದುದ್ದಕ್ಕೂ ದ್ವೇಷ ರಾಜಕಾರಣ ಮಾಡದ ಶೆಟ್ಟರ್ ಗೆಲುವು ದಾಖಲಿಸಿದಲ್ಲಿ ಅವರಿಗೆ ಮೋದಿ ಕ್ಯಾಬಿನೆಟ್ನಲ್ಲಿ ಹಿರಿತನದ ಆಧಾರದ ಮೇಲೆ ಸಚಿವ ಪಟ್ಟ ಗ್ಯಾರಂಟಿ ಎಂಬ ಮಾತು ಕೇಳಿ ಬರುತ್ತಿದ್ದು ಬೆಳಗಾವಿಯ ಮತದಾರರು ದಿ. 7ರಂದು ಯಾರಿಗೆ ತಮ್ಮ ಪರಮಾಧಿಕಾರದ ಮುದ್ರೆ ಒತ್ತುವರು ಕಾದು ನೋಡಬೇಕಿದೆ.
1994ರಲ್ಲಿ ಹುಬ್ಬಳ್ಳಿ ಗ್ರಾಮೀಣದಲ್ಲಿ ಬಸವರಾಜ ಬೊಮ್ಮಾಯಿಗೆ ಮೊದಲ ಸೋಲಿನ ಇಂಜೆಕ್ಷನ್ ನೀಡಿ ವಿಧಾನ ಸಭೆ ಪ್ರವೇಶಿಸಿದ ಶೆಟ್ಟರ್ ಸುಮಾರು ಮೂರು ದಶಕಗಳ ಕಾಲ ಧಾರವಾಡ ಜಿಲ್ಲೆಯಲ್ಲಿ ಪಕ್ಷದ ಹಿಡಿತವನ್ನು ಪ್ರಹ್ಲಾದ ಜೋಶಿಯವರೊಂದಿಗೆ ಸೇರಿ ಇಟ್ಟುಕೊಂಡವರು.ಬದಲಾದ ಲೆಕ್ಕಾಚಾರ ಇಂದು ಅವರನ್ನು ಬೆಳಗಾವಿಯತ್ತ ಮುಖ ಮಾಡುವಂತೆ ಮಾಡಿದ್ದು ಕ್ಷೇತ್ರ ಹೊಸದಾದರೂ ’ನಂಟು’ ಹಳೆಯದೇ ಇದ್ದು ಗೆಲುವಿನ ದಡ ಮುಟ್ಟುವ ವಿಶ್ವಾಸ ಹೊಂದಿದ್ದಾರೆ.
*ವಿಧಾನ ಸಭಾ ಕ್ಷೇತ್ರವಾರು ಬಿಜೆಪಿ ಸದ್ಯದ ವಾಸ್ತವ ಸ್ಥಿತಿ* :
ಅರಭಾವಿ : ಶೇ. 60 , ಗೋಕಾಕ : ಶೇ. 60, ಬೆಳಗಾವಿ ಉತ್ತರ ಶೇ. 50, ಬೆಳಗಾವಿ ದಕ್ಷಿಣ ಶೇ. 55, ಬೆಳಗಾವಿ ಗ್ರಾಮೀಣ ಶೇ. 42 , ಬೈಲಹೊಂಗಲ ಶೇ. 50,ಸವದತ್ತಿ ಯಲ್ಲಮ್ಮ ಶೇ. 5೦, ರಾಮದುರ್ಗ ಶೇ. 50
ಜಾತಿವಾರು ವಿವರ
ಲಿಂಗಾಯತರು :6 ಲಕ್ಷ ,ಮರಾಠಾ 2.25ಲಕ್ಷ : , ಎಸ್ ಸಿ ಎಸ್ ಟಿ:2.83 ಲಕ್ಷ ಮುಸ್ಲಿಂ2.20ಲಕ್ಷ, ಕುರುಬ1.90ಲಕ್ಷ , ಉಪ್ಪಾರ 80 ಸಾವಿರ, ಲಂಬಾಣಿ60 ಸಾವಿರ, ಬ್ರಾಹ್ಮಣ 55ಸಾವಿರ, ಜೈನ 44 ಸಾವಿರ.
ಸಾಕ್ಷಾತ್ ಸಮೀಕ್ಷೆ :*ಸುಪ್ರಭಾತ ಹುಬ್ಬಳ್ಳಿ*