*ಬಿಜೆಪಿ ಬಣದಾಟಕ್ಕೆ ಪೂರ್ಣ ವಿರಾಮಕ್ಕೆ ಚಿಂತನೆ*
ಬೆಂಗಳೂರು : ಕರ್ನಾಟಕ , ಮಧ್ಯ ಪ್ರದೇಶ,ಉತ್ತರ ಪ್ರದೇಶ ಹಾಗೂ ತೆಲಂಗಾಣ ಸೇರಿದಂತೆ ನಾಲ್ಕು ರಾಜ್ಯಗಳ ರಾಜ್ಯಾಧ್ಯಕ್ಷರ ಆಯ್ಕೆ ರಾಷ್ಟ್ರೀಯ ಬಿಜೆಪಿ ವರಿಷ್ಠರಿಗೆ ತೀವ್ರ ಕಗ್ಗಂಟಾಗಿ ಪರಿಣಮಿಸಿದೆ.
ಕರ್ನಾಟಕದಲ್ಲಿನ ಬಣ ಬಡಿದಾಟ ಮತ್ತೆ ತಾರಕಕ್ಕೇರಿದ್ದು ಯಾವುದೇ ಕಾರಣಕ್ಕೂ ಬಿ.ವೈ.ವಿಜಯೇಂದ್ರ ಅವರನ್ನು ಮಾಡಬಾರದೆಂದು ಬಸನಗೌಡ ಪಾಟೀಲ್ ಯತ್ನಾಳ್ ಬಣ ಮತ್ತೆ ದಿಲ್ಲಿಗೆ ಪ್ರಯಾಣ ಬೆಳೆಸಿದೆ.
ಶಾಸಕ ಯತ್ನಾಳ್ ಹಾಗೂ ಅರವಿಂದ್ ಲಿಂಬಾವಳಿ ದೆಹಲಿಗೆ ತೆರಳಿದ್ದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಲಿದ್ದಾರೆ. ಶಾ ಅವರು ಕೆಲ ದಿನಗಳ ಹಿಂದೆ ಉಡುಪಿ ಮಠದ ಕಾರ್ಯಕ್ರಮಕ್ಕೆ ಬೆಂಗಳೂರಿಗೆ ಬಂದಿದ್ದ ವೇಳೆ ಲಿಂಬಾವಳಿ ಶಾ ಅವರನ್ನು ಭೇಟಿ ಮಾಡಲು ಪ್ರಯತ್ನಿಸಿದ್ದರು. ಈ ವೇಳೆ ಶಾ ಅವರು ದೆಹಲಿಗೆ ಬರುವಂತೆ ಚೀಟಿ ಕಳುಹಿಸಿದ್ದರು. ಈ ಹಿನ್ನೆಲೆಯಲ್ಲಿ ಯತ್ನಾಳ್ ಹಾಗೂ ಲಿಂಬಾವಳಿ ದೆಹಲಿಗೆ ದೌಡಾಯಿಸಿದ್ದಾರೆ.
ಯಾವುದೇ ಕಾರಣಕ್ಕೂ ಬಿ.ವೈ. ವಿಜಯೇಂದ್ರ ಅವರನ್ನು ಮತ್ತೇ ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಬಾರದು ಎಂಬ ಕೂಗಿಗೆ ದಿನದಿಂದ ದಿನಕ್ಕೆ ಬಲ ಬರುತ್ತಿದ್ದು ವಿಜಯೇಂದ್ರ ಬದಲಿಗೆ ಬೇರೊಬ್ಬರನ್ನು ನೇಮಕ ಮಾಡಬೇಕೆಂದು ಯತ್ನಾಳ್ ಬಣ ಪಟ್ಟು ಹಿಡಿದಿದೆ. ಈ ನಿಟ್ಟಿನಲ್ಲಿ ಮಹಾರಾಷ್ಟ್ರ ಸಿಎಂ ದೇವೆಂದ್ರ ಫಡ್ನವೀಸರನ್ನು ಯತ್ನಾಳ ಹಾಗೂ ಫಡ್ನವೀಸ್ರ ಜತೆ ಉತ್ತಮ ಬಾಂಧವ್ಯ ಹೊಂದಿರುವ ರಮೇಶ ಜಾರಕಿಹೊಳಿ ಭೇಟಿಯಾಗಿ ಒತ್ತಡ ಹೇರಿದ್ದಾರೆನ್ನಲಾಗಿದೆ.
ವಿಜಯೇಂದ್ರ ಬದಲಿಸಲು ವೊದಲು ಕಮಲ ಕಮಾಂಡ್ ಹೆಚ್ಚು ಉತ್ಸುಕವಾಗಿಲ್ಲವಾಗಿತ್ತಾದರೂ ಆದರೆ ಬದಲಿಸದೆ ಮುಂದುವರಿಸಿದರೆ ಇದೇ ಬಣ ಬಡಿದಾಟ ಮತ್ತಷ್ಟು ಹೆಚ್ಚಾಗುವದೆಂಬ ಆಂತರಿಕ ವರದಿ ಚಿಂತೆಗೆ ಕಾರಣವಾಗಿದೆ.
ವಿಜಯೇಂದ್ರ ಬದಲಿಸಿದರೆ ಯಡಿಯೂರಪ್ಪ ಕೆಂಗಣ್ಣು ಪಕ್ಷದಲ್ಲಿ ಮತ್ತಷ್ಟು ಸಮಸ್ಯೆಗೆ ಕಾರಣವಾಗಬಹುದು ಎಂಬ ಚಿಂತೆ ವರಿಷ್ಠರನ್ನು ಕಾಡುತ್ತಿದ್ದು ಒಂದು ವೇಳೆ ಅವರನ್ನು ಬದಲಿಸಿದರೆ ಯಾರಿಗೆ ಪಕ್ಷದ ಅಧ್ಯಕ್ಷ ಗಾದಿಯ ಹುದ್ದೆ ನೀಡಬೇಕು ಎಂಬ ಬಗ್ಗೆ ವರಿಷ್ಠರು ಗಂಭೀರ ಚಿಂತನೆ ನಡೆಸಿದ್ದಾರೆನ್ನಲಾಗುತ್ತಿದೆ.
ಹಾಗಾಗಿ ಯಡಿಯೂರಪ್ಪ ಅವರನ್ನೇ ಒಲಿಸಿ ಅವರು ಹೇಳುವವರನ್ನೇ ಅಧ್ಯಕ್ಷ ಸ್ಥಾನಕ್ಕೆ ಪಟ್ಟ ಕಟ್ಟಲು ಮುಂದಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಎರಡು ಬಣಗಳು ವಿಶ್ವಾಸಕ್ಕೆ ತೆಗೆದುಕೊಂಡು ಬಣ ಬಡಿದಾಟಕ್ಕೆ ಮದ್ದು ಅರಿಯಲು ವರಿಷ್ಠರು ಮುಂದಾದಲ್ಲಿ ಮಾಜಿ ಮುಖ್ಯಮಂತ್ರಿ , ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಅಥವಾ ಸಂಪನ್ಮೂಲ ಕ್ರೋಡಿಕರಿಸಿ ಪಕ್ಷ ಸಂಘಟಿಸಬಲ್ಲ ಮಾಜಿ ಸಚಿವ ಮುರುಗೇಶ ನಿರಾಣಿ ಇಬ್ಬರಲ್ಲಿ ಒಬ್ಬರಿಗೆ ಪಟ್ಟ ಕಟ್ಟುವ ಸಾಧ್ಯತೆಗಳು ಹೆಚ್ಚಾಗಿದೆ ಎಂದು ದಿಲ್ಲಿ ಮೂಲಗಳು ಹೇಳುತ್ತವೆ.
ವಿಜಯೇಂದ್ರ ಬದಲಿಸಿದರೆ ಲಿಂಗಾಯತರಿಗೇ ಪಟ್ಟ ಮುಂದುವರಿಸುವುದು ಖಚಿತವಾಗಿದ್ದು,ಬಸವರಾಜ ಬೊಮ್ಮಾಯಿ ಹೆಸರಿಗೆ ಯಡಿಯೂರಪ್ಪ ಅಲ್ಲದೇ ಸಂಘ ಪರಿವಾರದವರು ಒಪ್ಪುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.
ಶೆಟ್ಟರ್ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಅಜಾತ ಶತ್ರುವಾದರೂ ಪಕ್ಷ ಸಂಘಟನೆಗೆ ವ್ಯಯಿಸಬಲ್ಲ ಸಾಮರ್ಥ್ಯವು ಪರಿಗಣನೆಗೆ ಬರುವ ಸಾಧ್ಯತೆಗಳಿವೆ. ಹಾಗಾಗಿ ಪ್ರಬಲ ಪಂಚಮಸಾಲಿ ಸಮುದಾಯದ ನಿರಾಣಿ ಹೆಸರು ಪರಿಗಣನೆಗೆ ಬಂದರೂ ಅಚ್ಚರಿಯಿಲ್ಲ. ನಿರಾಣಿ ಮತ್ತು ಯತ್ನಾಳ ನಡುವೆ ಹಾವು ಮುಂಗುಸಿ ಸಂಬಂಧವಿದೆಯಾದರೂ ಇತ್ತೀಚಿನ ನಿರಾಣಿ ಹೇಳಿಕೆಗಳು ಬಸನಗೌಡರ ಬಗೆಗೆ ಮೃದುವಾಗಿರುವುದು ಹಲವು ಲೆಕ್ಕಾಚಾರಗಳಿಗೆ ನಾಂದಿ ಹಾಡಿದೆ.
ಇನ್ನೊಂದು ಹತ್ತು ದಿನಗಳಲ್ಲಿ ನೂತನ ಅಧ್ಯಕ್ಷರ ಆಯ್ಕೆ ನಿಶ್ಚಿತವಾಗಿದೆ.