*ಸದನದಲ್ಲಿ ಸಚಿವ ಜೋಶಿ ಹೇಳಿಕೆ*
ಹೊಸದಿಲ್ಲಿ : ರೈತರ ಖಾತೆಗೆ 48 ಗಂಟೆಗಳಲ್ಲೇ ಬೆಂಬಲ ಬೆಲೆ ಖರೀದಿ ಹಣ ನೇರ ಜಮೆಯಾಗುತ್ತದೆ. ವಿಳಂಬವಾಗುವ ಪ್ರಶ್ನೆಯೇ ಇಲ್ಲ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಖಾತೆ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಸಂಸತ್ ಅಧಿವೇಶನದಲ್ಲಿ ಇಂದು ಬಿಹಾರದ ಸಂಸದ ಉಪೇಂದ್ರ ಕುಶ್ವಾ ಅವರ ಪ್ರಶ್ನೆಗೆ ಉತ್ತರಿಸಿ, ರೈತರಿಂದ ಬೆಂಬಲ ಬೆಲೆಯಲ್ಲಿ ಧಾನ್ಯ ಖರೀದಿಸಿದ ಮೇಲೆ ಅಷ್ಟೇ ತ್ವರಿತವಾಗಿ ಅವರ ಖಾತೆಗೆ ನೇರವಾಗಿ ಹಣ ಜಮೆಯಾಗುತ್ತಿದೆ. ಇದರಲ್ಲಿ ಯಾವುದೇ ರೀತಿ ಲೋಪವಾಗುತ್ತಿಲ್ಲ ಎಂದು ಹೇಳಿದರು.
ಬೆಂಬಲ ಬೆಲೆಯಲ್ಲಿ ಧಾನ್ಯ ಖರೀದಿ DCP ಮತ್ತು Non DCP ಎರಡು ರೀತಿಯ ವ್ಯವಸ್ಥೆಯಲ್ಲಿ ನಡೆಯುತ್ತಿದೆ. Non DCP ವ್ಯವಸ್ಥೆಯುಳ್ಳ ರಾಜ್ಯಗಳಲ್ಲಿ ಸಹ ತಕ್ಷಣವೇ ರೈತರ ಖಾತೆಗೆ ಹಣ ಜಮೆ ಮಾಡಲು ಆಯಾ ರಾಜ್ಯ ಸರ್ಕಾರಗಳಿಗೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ ಎಂದರು.
ಬೆಂಬಲ ಬೆಲೆಯಲ್ಲಿ ಧಾನ್ಯ ಖರೀದಿ ಮತ್ತು ರೈತರ ಖಾತೆಗೆ ನೇರ ಹಣ ವರ್ಗಾವಣೆಯಲ್ಲಿ ಮಧ್ಯವರ್ತಿಗಳಿಗೆ ಅವಕಾಶವೇ ಇಲ್ಲ. ಇಂಥ ಯಾವುದೇ ದೂರುಗಳು ಬಂದಿಲ್ಲ. ತಮ್ಮ ಗಮನಕ್ಕೆ ಬಂದರೆ ತಕ್ಷಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
*ರಾಜ್ಯಕ್ಕೆ ಕಳೆದ ಬಾರಿಗಿಂತ ಶೇ.10ರಷ್ಟು ಹೆಚ್ಚೇ ತೆರಿಗೆ ಹಂಚಿಕೆ*
ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಕಳೆದ ವರ್ಷಕ್ಕಿಂತ ಶೇ.10ರಷ್ಟು ಹೆಚ್ಚೇ ತೆರಿಗೆ ಹಂಚಿಕೆ ಮಾಡಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣ X ಖಾತೆಯಲ್ಲಿ ಈ ಬಗ್ಗೆ ಅಗತ್ಯ ಮಾಹಿತಿ ಹಂಚಿಕೊಂಡಿರುವ ಸಚಿವರು, 2025-26ನೇ ಆರ್ಥಿಕ ವರ್ಷದಲ್ಲಿ ಕರ್ನಾಟಕಕ್ಕೆ ₹51,876 ಕೋಟಿ ತೆರಿಗೆ ಹಂಚಿಕೆ ಮಾಡಿದೆ ಎಂದಿದ್ದಾರೆ.
2014-15ರಲ್ಲಿ 24,789.78 ಕೋಟಿ ತೆರಿಗೆ ಹಂಚಿಕೆ ಆಗಿದ್ದರೆ, 2025-2 6ರ ಆರ್ಥಿಕ ವರ್ಷ ಇದಕ್ಕಿಂತ ಶೇ.108ರಷ್ಟು (51876 ಕೋಟಿ ರೂ.)ಅಧಿಕ ತೆರಿಗೆ ಹಂಚಿಕೆ ಮೊತ್ತವನ್ನು ಕರ್ನಾಟಕಕ್ಕೆ ಭರಿಸಲಾಗಿದೆ ಎಂದು ತಿಳಿಸಿದ್ದಾರೆ.