*ಪರೋಪಕಾರದಲ್ಲೆ ಸಾರ್ಥಕತೆ ಕಾಣುವ ಉದ್ಯಮಿ*
ಹುಬ್ಬಳ್ಳಿ : ಸಮಾಜದ ಸೊತ್ತಿನಿಂದ ಬೆಳೆದ ಮನುಷ್ಯ ಸಮಾಜದ ಋಣದಲ್ಲಿರುತ್ತಾನೆ.ಆದರಿಂದ ಋಣಮುಕ್ತನಾಗಲು ಒಂದೇ ದಾರಿ ತನ್ನ ಕೈಯಿಂದಾದ ಮಟ್ಟಿಗೆ ಇತರರಿಗೆ ದಾನ ಮಾಡುವುದು. ಸಮಾಜಕ್ಕಾಗಿ ಕೊಟ್ಟ ದಾನ ಎಂದೂ ವ್ಯರ್ಥವಾಗಲಾರದು. ಅದರ ಪುಣ್ಯದ ಬುತ್ತಿ ಕಟ್ಟಿರಲ್ಪಡುತ್ತದೆ. ದಾನ ಕೊಡುವಂತೆ ತಾನು ಮಾಡಿದ ದಾನದ ಬಗ್ಗೆ ಎಂದೂ ’ಕೆಟ್ಟನು’ ಅನ್ನದೇ ಮನಃ ಪೂರ್ತಿ ಕೊಟ್ಟು ಮರೆಯಬೇಕು. ಬಸವಣ್ಣನವರು ’ ಮಾಡಿದನೆಂಬುದು ಮನದ ಹೊಳೆಯದಿದ್ದಡ, ಬೇಡಿದ್ದನೀವ ನಮ್ಮ ಕೂಡಲ ಸಂಗಮದೇವ \\’ ಎಂದು ತಮ್ಮ ವಚನದಲ್ಲಿ ಹೇಳಿದಂತ ದಾನ, ಧರ್ಮ ಪರೋಪಕಾರದಲ್ಲೇ ಬದುಕು ಕಟ್ಟಿಕೊಂಡವರು ಹುಬ್ಬಳ್ಳಿಯ ಹನುಮಂತಪ್ಪ ಮಲ್ಲಪ್ಪ ಬಂಕಾಪುರ.
ಕೃಷಿ ಕುಟುಂಬದಲ್ಲಿ ಜನಿಸಿದ ಇವರು ತಮ್ಮ ಕಠಿಣ ಪರಿಶ್ರಮದಿಂದ ಮತ್ತು ಜಾತ್ಯತೀತ ಮನೋಭಾವದಿಂದ ವ್ಯವಹಾರ ಕ್ಷೇತ್ರದಲ್ಲಿ ಯಶಸ್ಸು ಕಂಡಿದ್ದು, ಕಾಯಕದೊಳು ನಿರತನಾದೊಡೆ ಗುರು, ಲಿಂಗ, ಜಂಗಮನನ್ನಾದರೂ ಮರೆಯಬೇಕೆಂಬ ಶರಣವಾಣಿಯಂತೆ ಮುನ್ನಡೆಯುತ್ತಿರುವವರು. ಜೀವನದುದ್ದಕ್ಕೂ ’ಆಗ ಬಾ ಈಗ ಬಾ ಹೋಗಿ ಬಾ ಎನ್ನದೇ ಆಗಲೇ ಕರೆದು ಕೊಡುವವನ ಮಣ್ಣು ಹೊನ್ನಾಗದೆ ಬಿಡದು ಸರ್ವಜ್ಞ’ಅನ್ನುವ ತತ್ವವನ್ನೇ ಇರಿಸಿಕೊಂಡವರು.
ಸದಾ ತಮ್ಮ ಕಾಯಕದಲ್ಲಿ ನಿರತರಾದ ಹನುಮಂತಪ್ಪ ಅವರಿಗೆ ಧರ್ಮ ಸಂಸ್ಕಾರ ತಂದೆ ತಾಯಿಗಳಿಂದ ಬಳುವಳಿಯಾಗಿ ಬಂದಿದ್ದು.ಗೋಕುಲ ರಸ್ತೆಯ ಪ್ರೀಯದರ್ಶಿನಿ ಕಾಲನಿ ಬಳಿ ತಾವು ವಾಸಿಸಲು ಮನೆ ಕಟ್ಟಿಸುವ ಜತೆಗೆ ಪಕ್ಕದಲ್ಲೇ ಇರುವ ಸ್ವಂತ ಭೂಮಿಯಲ್ಲಿ ಸಕಲ ಇಷ್ಟಾರ್ಥ ಈಡೇರಿಸುವ ವರದಾಂಜನೇಯ ಸ್ವಾಮಿ ದೇವಾಲಯ ಸ್ಥಾಪಿಸಿರುವುದು ಅವರ ಧರ್ಮದ ದಾರಿಯ ಪಯಣದ ಮತ್ತೊಂದು ಮುಖವಾಗಿದೆ. ಮತ್ತೊಬ್ಬರ ಮನ ನೋಯದಂತೆ ಬದುಕುವುದೇ ಧರ್ಮ ಹೇಳಿಕೊಟ್ಟ ಸುಲಭದ ದಾರಿ. ಧರ್ಮ ಯಾವುದೇ ಇರಲಿ ಅದು ಯಾರಿಗೂ ಯಾವಾಗಲೂ ಕೆಟ್ಟದ್ದನ್ನು ಮಾಡಲು ಹೇಳಲು ಹೇಳುವುದಿಲ್ಲ ಎಂದು ತತ್ವ ಅಳವಡಿಸಿಕೊಂಡು ಬದುಕಿನುದ್ದಕ್ಕೂ ಧರ್ಮವನ್ನೇ ಅನುಸರಿಸಿಕೊಂಡು ಬದುಕಿ ಬಾಳುತ್ತಿರುವವರು ಬಂಕಾಪುರ.
ದಿನಂಪ್ರತಿ ಹುಬ್ಬಳ್ಳಿಯಲ್ಲಿ ನಡೆದಾಡಿದ ದೇವರಾಗಿರುವ ಶ್ರೀ ಸಿದ್ಧಾರೂಢರ ದರ್ಶನ ಪಡೆಯುವ ಹನುಮಂತಪ್ಪ ಮಠದ ಪರಮ ಭಕ್ತರು. ಉಭಯ ಶ್ರೀಗಳಿಗೆ ಎರಡು ಬೆಳ್ಳಿ ಕಿರೀಟ ಹಾಗೂ ಬಾಗಿಲು ಚೌಕಟ್ಟಿಗೆ 2 ಕೆಜಿ ಬೆಳ್ಳಿಯ ಕಾಣಿಕೆಯನ್ನು ಅರ್ಪಿಸಿದ್ದಾರೆ.
ಬಂಕಾಪುರ ಮನುಷ್ಯನಿಗೆ ಆಸೆ ಇರಬೇಕು, ಆದರೆ ದುರಾಸೆ ಇರಬಾರದು,ಆಸೆ ಇಲ್ಲದ ಮನುಷ್ಯನೇ ಇಲ್ಲ. ನಾವು ಈ ಆಸೆಯನ್ನು ’ಗುರಿ’ ಎಂದು ಕ್ರಮಿಸಬೇಕು. ಗುರಿ ಮುಟ್ಟುವುದಕ್ಕೆ ಅತಿ ಮುಖ್ಯವೆಂದರೆ ಸಾಧನೆ ಮಾರ್ಗ. ಕ್ರಮಿಸುವ ದಾರಿ ಎಂಬ ಮಾತು ಅಕ್ಷರಶಃ ಸತ್ಯ.
’ಇವನಾರವ ಇವನಾರವ ಎಂದೆನಿಸದಿರಯ್ಯ, ಇವ ನಮ್ಮವ ಇವ ನಮ್ಮವ ಎಂದೆನಿಸಯ್ಯ’ ಎಂಬ ಬಸವಣ್ಣನವರ ಉಕ್ತಿಯಂತೆ ಬಡವ, ಬಲ್ಲಿದ ಎಂಬುದನ್ನುನೋಡದೆ ಪ್ರತಿಯೊಬ್ಬರನ್ನೂ ಪ್ರೀತಿಯಿಂದ ಕಾಣುವ ಸ್ವಭಾವದ ಹನುಮಂತಪ್ಪ ಅವರು ವಿವಿಧ ಸಾಮಾಜಿಕ ಸಂಘಟನೆಗಳಲ್ಲಿ , ಅಲ್ಲದೇ ರಾಜಕೀಯದಲ್ಲಿಯೂ ತಮ್ಮ ಛಾಪು ಮೂಡಿಸಿದ್ದರೂ ’ಇಂದಿನ ರಾಜಕೀಯ ನಮ್ಮಂತವರಿಗಲ’ ಎಂದು ನಗುತ್ತಲೆ ಹೇಳುವ ಇವರು, ಎಲ್ಲ ರಾಜಕೀಯ ಪಕ್ಷಗಳ ಘಟಾನುಘಟಿ ನಾಯಕರ ಅಲ್ಲದೇ ಸ್ಥಳೀಯ ಹಿರಿಯ ,ಕಿರಿಯ ಮುಖಂಡರುಗಳ ಜತೆ ಅತ್ಯಂತ ಅಜಾತಶತ್ರುವಿನ ಸಂಬಂಧ ಹೊಂದಿದ್ದಾರೆ.
ಪತಿಯ ಆಚಾರಕ್ಕೆ ಅಪಚಾರ ಬಾರದಂತೆ ಅವರಿಡುವ ಹೆಜ್ಜೆಯಲ್ಲಿಯೇ ಹೆಜ್ಜೆಯನ್ನಿಟ್ಟು ಅವರ ಎಲ್ಲ ಕಾರ್ಯಗಳಿಗೆ ಸ್ಪೂರ್ತಿಯಾಗಿ ನಿಂತವರು ಮತ್ತು ಆದರ್ಶ ಗೃಹಿಣಿಯಾಗಿ ಕುಟುಂಬದ ಸಮಪಾಲು ನಿಭಾಯಿಸಿದವರು ಇವರ ಧರ್ಮಪತ್ನಿ ಲತಾ ಹನುಮಂತಪ್ಪ ಬಂಕಾಪುರ. ಹಿರಿಯ ಮಗ ಸಿದ್ದೇಶ್ವರ ತಂದೆಯ ವ್ಯವಹಾರ ಮುನ್ನಡೆಸಿದ್ದರೆ, ದ್ವಿತೀಯ ಪುತ್ರ ನವೀನ ವೈದ್ಯರಾಗಿದ್ದಾರೆ. ಮಗಳು ವಾಣಿ, ಸೊಸೆ ಐಶ್ವರ್ಯ ,ಅಳಿಯ ಮಂಜುನಾಥ ಗೌಡರ, ಮೊಮ್ಮಕ್ಖಳು ಅಲ್ಲದೇ ಹನುಮಂತಪ್ಪ ಅವರ ಅಣ್ಣ ತಮ್ಮಂದಿರೆಲ್ಲರನ್ನೂ ನೋಡಿದರೆ ಇವರ ಕುಟುಂಬ ಪ್ರೀತಿ ವಾತ್ಸಲ್ಯಗಳಿಂದ ತುಂಬಿ ತುಳುಕುವ ಆನಂದ ಸಾಗರ.
*ವೈಶಿಷ್ಟ್ಯಪೂರ್ಣ ಶ್ರೀ ವರದಾಂಜನೇಯ ಸ್ವಾಮಿ ದೇಗುಲ*
ತಮ್ಮ ನೂತನ ನಿವಾಸ ’ಹನುಮಂತ -ಲತಾ ಮಹಲ್’ ಪಕ್ಕದಲ್ಲೇ ಬಂಕಾಪುರ ಅವರು ವರದಾಂಜನೇಯ ಸ್ವಾಮಿ ದೇಗುಲ ಸ್ಥಾಪಿಸಿದ್ದು ಅನೇಕ ಮಾರುತಿ ದೇವಸ್ಥಾನ ದರ್ಶಿಸಿ ಅಲ್ಲಿನ ವಿಗ್ರಹಗಳ ವಿಶೇಷತೆ ಮತ್ತು ಶಿಲಾ ವೈಶಿಷ್ಟ್ಯಗಳನ್ನು ಅಧ್ಯಯನ ಮಾಡಿ , ಪಂಡಿತರಿಂದ ಪರಿಶೋಧಿಸಿ ವರದಾಂಜನೇಯ ವಿಗ್ರಹವನ್ನು ನಿರ್ಮಿಸಲಾಗಿದೆ.
ಈ ವಿಗ್ರಹದ ವೈಶಿಷ್ಟ್ಯವೆಂದರೆ ಗುಪ್ತಗಂಗಾ ಸನ್ನಿದಾನ ಹೊಂದಿದ ಕೃಷ್ಣಶಾಲಿಗ್ರಾಮ ರತ್ನಗರ್ಭ ಶಿಲೆಯಲ್ಲಿ ರೂಪಿಸಿದ್ದು ಪ್ರಾಚೀನ ವಿಗ್ರಹಗಳಲ್ಲಿ ಕಾಣಸಿಗುವ ಸೂರ್ಯ, ಚಂದ್ರ, ಶಂಖ, ಚಕ್ರ ,ಕಮಲ, ಗೇಎ ಮೊದಲಾದ ಭಗವತ್ ಚಿಹ್ನೆಗಳಿಂದ ನೋಡಿದಾಕ್ಷಣ ಭಕ್ತಿ ಭಾವ ಉಕ್ಕಿಬರುವಂತಿದೆ. ಅಲ್ಲದೇ ದೇಗುಲ ನಿರ್ಮಾಣದ ಪೂರ್ವದಲ್ಲಿ ಬಂಕಾಪುರ ಅವರು, ಹನುಮಂತನ ಜನ್ಮಸ್ಥಳವಾದ ಅಂಜನಾದ್ರಿ ಪರ್ವತದ ಆಂಜನೇಯ ಸ್ವಾಮಿ ದರ್ಶನ ಪಡೆದು ಅಲ್ಲಿಯೇ ಸಂಕಲ್ಪ ಮಾಡಿ, ಅಲ್ಲಿನ ಸ್ವಾಮಿ ಸನ್ನಿದಾನದ ಫಲವನ್ನು ಪ್ರತಿಷ್ಟಾಪಿಸಿದ ಮೂರ್ತಿಯ ಗದ್ಗುಗೆ ಅಡಿಯಲ್ಲಿ ಹಾಕಲಾಗಿದೆ. ಸಾಮಾನ್ಯವಾಗಿ ಆಂಜನೇಯನ ಗುಡಿಗಳು ದಕ್ಷಿಣ ದಿಕ್ಕಿಗೆ ಅಭಿಮುಖವಾಗಿರುತ್ತವೆ.ಆದರೆ ಈ ವರದಾಂಜನೇಯ ಗುಡಿ ಪೂರ್ವ ದಿಕ್ಕಿಗೆ ಅಭಿಮುಖವಾಗಿದೆ. ಅಂಜನಾದ್ರಿಯ ಗುಡಿಯೂ ಸಹ ಪೂರ್ವಾಭಿಮುಖವಾಗಿದೆ.
*ದೇವಸ್ಥಾನ ಉದ್ಘಾಟನೆ, ಗೃಹ ಪ್ರವೇಶ*
ಬಂಕಾಪುರ ಅವರು ದೇವಸ್ಥಾನದಲ್ಲಿ ಶ್ರೀ ವರದಾಂಜನೇಯ ದೇವಸ್ಥಾನದ ಉದ್ಘಾಟನೆ ಮತ್ತು ಮತ್ತು ರಾಜಮಹಲಿನಂತೆ ಕಂಗೊಳಿಸುವ ನಿವಾಸದ ಗೃಹ ಪ್ರವೇಶ ಜ.7ರಂದು ರವಿವಾರ ಬ್ರಾಹ್ಮಿಮುಹೂರ್ತದಲ್ಲಿ ನಡೆಯಲಿದ್ದು, ಮೂರುಸಾವಿರಮಠದ ಜಗದ್ಗುರುಗಳು, ಧಾರವಾಡ ಮುರುಘಾಮಠದ ಶ್ರೀಗಳು, ಪಂಚಮಸಾಲಿ ಪೀಠದ ಜಯ ಮೃತ್ಯುಂಜಯ ಸ್ವಾಮಿಗಳು, ಸವಣೂರ ದೊಡ್ಡಹುಣಸೇ ಮಠದ ಚನ್ನ ಬಸವ ಸ್ವಾಮೀಜಿ, ರುದ್ರಾಕ್ಷಿಮಠದ ಸ್ವಾಮೀಜಿ, ಮಣಕವಾಡದ ಅಭಿನವ ಮೃತ್ಯುಂಜಯ ಸ್ವಾಮಿಗಳು, ಗೋಕುಲದ ಮೋಹನ ಗುರುಸ್ವಾಮಿಗಳು ಸೇರಿದಂತೆ ಅನೇಕ ಶ್ರೀಗಳು ಪಾಲ್ಗೊಳ್ಳಲಿದ್ದಾರೆ.