*ಮೊದಲ ಪಟ್ಟಿಯಲ್ಲೂ ದ್ವೇಷ ಭಾಷಣಕಾರರಿಗೆ ಕೊಕ್*/ *ಉ.ಕ.ದಲ್ಲಿ ಅನಂತ ಹೆಗಡೆಗೆ ಕಷ್ಟ ಕಷ್ಟ*
ಹುಬ್ಬಳ್ಳಿ : ಭಾರತೀಯ ಜನತಾ ಪಕ್ಷ ಮುಂಬರುವ ಲೋಕಸಭಾ ಚುನಾವಣೆಗೆ 195ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು ಕರ್ನಾಟಕದ 28 ಕ್ಷೇತ್ರಗಳ ಯಾರೊಬ್ಬರೂ ಇಲ್ಲವಾಗಿದ್ದು ಟಿಕೆಟ್ ಗ್ಯಾರಂಟಿ ಎಂದೇ ನಂಬಿದ್ದ ಹಲವರಿಗೆ ಮೊದಲ ಪಟ್ಟಿ ಶಾಕ್ ನೀಡಿದೆ.
ಮೊದಲ ಪಟ್ಟಿಯಲ್ಲಿ ಬಾಯಿಯನ್ನೇ ಬಂಡವಾಳವಾಗಿಸಿಕೊಂಡ ದ್ವೇಷ ಭಾಷಣಕಾರರು, ಅಲ್ಲದೇ ಸಂಸದರಾಗಿ ಇದ್ದುಕೊಂಡು ಜನ ಸಂಪರ್ಕ ಕಳೆದುಕೊಂಡ ಸುಮಾರು 33 ಸಂಸದರಿಗೆ ಕೊಕ್ ನೀಡಿದ್ದು ರಾಜ್ಯದಲ್ಲೂ ಈ ಫಾರ್ಮುಲಾ ಅನ್ವಯವಾದರೆ 10ಕ್ಕೂ ಹೆಚ್ಚು ಸಂಸದರು ಕಮಲ ಬಿ ಫಾರಂ ವಂಚಿತರಾಗುವುದು ನಿಶ್ಚಿತ ಎನ್ನಲಾಗಿದೆ.
ವಿವಾದಿತ ಹೇಳಿಕೆಗಳಿಂದ ಸುದ್ದಿ ಮಾಡುತ್ತಿದ್ದ ನಾಥೂರಾಮ ಗೋಡ್ಸೆಯನ್ನು ದೇಶ ಭಕ್ತ ಎಂದಿದ್ದ ಭೋಪಾಲ ಸಂಸದೆ ಸಾಧ್ವಿ ಪ್ರಜ್ಞಾಸಿಂಗ್ ಠಾಕೂರ್, ಹಿಂದೂ – ಮುಸ್ಲಿಂ ಸಮುದಾಯದ ನಡುವೆ ಸದಾ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದ ಪಶ್ಚಿಮ ದಿಲ್ಲಿ ಸಂಸದ ಪರವೇಜ್ ಸಾಹೀಬ ಸಿಂಗ್ , ಲೋಕಸಭೆ ಕಲಾಪದಲ್ಲೇ ಅಸಂಸದೀಯ ಶಬ್ದ ಬಳಕೆ ಮಾಡಿದ್ದ ರಮೇಶ ಬಿದೂರಿ ಅಲ್ಲದೇ ಗೌತಮ ಗಂಭೀರ, ಮೀನಾಕ್ಷಿ ಲೇಖಿ, ಆರೋಗ್ಯ ಸಚಿವ ಹರ್ಷವರ್ಧನ ಮುಂತಾದವರಿಗೆ ಟಿಕೆಟ್ ನಿರಾಕರಿಸಲಾಗಿದ್ದು ರಾಜ್ಯದಲ್ಲಿ ದ್ವೇಷ ಭಾಷಣ ಬಂಡವಾಳ ಮಾಡಿಕೊಂಡ ನೆರೆಯ ಉತ್ತರ ಕನ್ನಡ ಜಿಲ್ಲೆಯ ಸಂಸದರಿಗೆ ಸಹ ಟಿಕೆಟ್ ಕೈ ತಪ್ಪುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಉತ್ತರ ಕನ್ನಡ ಅಭಿವೃದ್ಧಿಗೆ ಏನನ್ನೂ ಮಾಡದೇ ಇದ್ದರೂ ಆಯ್ಕೆಯಾಗುತ್ತಲೆ ಬಂದಿರುವ ಕಳೆದ 3-4 ತಿಂಗಳಿಂದ ಮತ್ತೆ ಅಬ್ಬರಿಸಿ ಬೊಬ್ಬಿರಿಯುತ್ತಿರುವ ಅನಂತ ಕುಮಾರ ಹೆಗಡೆ ಸಹಿತ 8-10 ಸಂಸದರಿಗೆ ಟಿಕೆಟ್ ನಿರಾಕರಣೆ ಖಚಿತ ಎನ್ನಲಾಗಿದೆ.
ಮಾಜಿ ವಿಧಾನಸಭಾ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಪತ್ರಕರ್ತ ಹರಿಪ್ರಕಾಶ ಕೋಣೆಮನೆ, ಚಕ್ರವರ್ತಿ ಸೂಲಿಬೆಲೆ,ಶಶಿಭೂಷಣ ಹೆಗಡೆ ಹೆಸರುಗಳು ಪ್ರಮುಖವಾಗಿ ಕ್ಷೇತ್ರಕ್ಕೆ ಕೇಳಿ ಬರುತ್ತಿದೆ. ಧಾರವಾಡ ಸಂಸದ, ಅಲ್ಲದೇ ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ ಹೆಸರು ಮೊದಲು ಉ.ಕ. ಕ್ಷೇತ್ರಕ್ಕೆ ಕೇಳಿ ಬಂದಿತ್ತಾದರೂ ಆ ಸಾಧ್ಯತೆ ಕಡಿಮೆಯಾಗಿದೆ. ಅಲ್ಲದೆ ಸೋಮವಾರ ಭಟ್ಕಳದಲ್ಲಿ ಅನಂತಕುಮಾರ ಹೆಗಡೆ ಆಡಿದ ಮಾತುಗಳು ಟಿಕೆಟ್ ಗ್ಯಾರಂಟಿಯಿಲ್ಲ ಎಂಬುದಕ್ಕೆ ಸಾಕ್ಷಿಯಾಗಿತ್ತು.
ಮೋದಿ ಸಂಪುಟದ ನಂ. 3ನೇ ಸ್ಥಾನದಲ್ಲಿರುವ ಜೋಶಿಯವರ ಹೆಸರು ಬಿಡುಗಡೆಯಾದ ಮೊದಲ ಪಟ್ಟಿಯಲ್ಲಿ ನಿರೀಕ್ಷೆ ಇತ್ತಾದರೂ ಹೈಕಮಾಂಡ್ ಸಸ್ಪೆನ್ಸ್ ಮುಂದುವರಿದಿದ್ದು ಇತ್ತೀಚೆಗೆ ಮತ್ತೆ ಕೇಸರಿ ಪಾಳೆಯಕ್ಕೆ ಮರಳಿರುವ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಧಾರವಾಡ ಯತ್ನವೂ ಸಹ ಮುಂದುವರಿದಿದೆ ಎನ್ನಲಾಗುತ್ತಿದೆ.