*ಮೋದಿ 3.0ದಲ್ಲಿ ಮಹತ್ವದ ಖಾತೆ ಸಾಧ್ಯತೆ / ಶೆಟ್ಟರ್, ಬೊಮ್ಮಾಯಿಗೆ ನಿರಾಸೆ*
ಹುಬ್ಬಳ್ಳಿ : ನರೇಂದ್ರ ಮೋದಿ 2.0 ಸಂಪುಟದಲ್ಲಿ ಸಂಸದೀಯ ವ್ಯವಹಾರಗಳು ಮತ್ತು ಕಲ್ಲಿದ್ದಲು ಖಾತೆ ಸಚಿವರಾಗಿ ಅತ್ಯಂತ ಕ್ರೀಯಾಶೀಲರಾಗಿ ಕಾರ್ಯನಿರ್ವಹಿಸಿದ ಅಲ್ಲದೆ, ಧಾರವಾಡ ಕ್ಷೇತ್ರದಲ್ಲಿ ಸತತ ಐದನೇ ಬಾರಿಗೆ ಗೆಲುವು ಸಾಧಿಸಿ, ಸಂಸತ್ ಪ್ರವೇಶಿಸಿರುವ ಪ್ರಹ್ಲಾದ ಜೋಶಿಯವರು ನಿರೀಕ್ಷೆಯಂತೆ ಮೋದಿ 3.0 ಮಂತ್ರಿ ಮಂಡಲದಲ್ಲಿ ಅವಕಾಶ ಪಡೆದಿದ್ದಾರೆ.
ಸಂಜೆ 7 ಗಂಟೆಗೆ ನಡೆಯುವ ಪ್ರಮಾಣವಚನ ಸಮಾರಂಭದಲ್ಲಿ ನರೇಂದ್ರ ದಾಮೋದರ ಮೋದಿ ನೇತೃತ್ವದ ಎನ್ಡಿಎ ಸಂಪುಟದಲ್ಲಿ ಪದಗ್ರಹಣ ಮಾಡಲಿದ್ದಾರೆ.ಬೆಳಿಗ್ಗೆ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಅಮಿತ್ ಶಾ ಜೋಶಿಯವರಿಗೆ ತಿಳಿಸಿದ್ದು, ಮೋದಿಯವರ ಚಹಾ ಕೂಟದಲ್ಲೂ ಪಾಲ್ಗೊಂಡಿದ್ದರು.
ತವರು ಧಾರವಾಡ ಜಿಲ್ಲೆಯಲ್ಲಿ. ಕಮಲ ಪಾಳೆಯದಲ್ಲಿ ಸಂಭ್ರಮ ಮತ್ತು ವಿಜಯೋತ್ಸವ ಆರಂಭವಾಗಿದ್ದು,
ಶಾಸಕರುಗಳಾದ ಮಹೇಶ್ ಟೆಂಗಿನಕಾಯಿ, ಎಂ ಆರ್ ಪಾಟೀಲ್, ಅರವಿಂದ್ ಬೆಲ್ಲದ, ಮಹಾನಗರ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ ಮುಂತಾದವರು ದಿಲ್ಲಿಯಲ್ಲಿ ಇದ್ದು ಅಭಿನಂದಿಸಿದರು.
ತಮಗೆ ಸರಿಸಾಟಿ ಯಾರೂ ಇಲ್ಲ ಎಂಬಂತೆ ಅಭೂತಪೂರ್ವ ಗೆಲುವು ದಾಖಲಿಸಿ 2004ರಿಂದ ಧಾರವಾಡ ಕ್ಷೇತ್ರವನ್ನು ಕಮಲದ ಭದ್ರಕೋಟೆಯಾಗಿ ಉಳಿಸಿದ ಜೋಶಿಯವರು ಕ್ಷೇತ್ರದಲ್ಲಿ ಸಂಸದರಾಗಿ ಮಾಡಿದ ಅಭಿವೃದ್ಧಿ ಕಾರ್ಯಗಳು, ಪ್ರತಿ ಹಳ್ಳಿಗೂ ಸಂಪರ್ಕ, ಸರ್ಕಾರಿ ಶಾಲೆಗಳ ಸುಧಾರಣೆ, ಗಾಳಿಪಟ ಉತ್ಸವ ಸೇರಿದಂತೆ ಕಾರ್ಯಕ್ರಮಗಳ ಮೂಲಕ
ವಿರೋಧಿಸುವವರೂ ಮೆಚ್ಚುಗೆ ವ್ಯಕ್ತಪಡಿಸುವ ರೀತಿ ಕೆಲಸ ನಿರ್ವಹಿಸಿದ್ದಾರೆ.
ಕಳೆದ ಬಾರಿ ಮಹತ್ವದ ಖಾತೆಗಳನ್ನು ನಿಭಾಯಿಸಿದ ಇವರು ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರ ಅತ್ಯಂತ ನಿಕಟವರ್ತಿ ಅಲ್ಲದೆ ಸಂಘ ಪರಿವಾರದ ಸಂಪೂರ್ಣ ಆಶೀರ್ವಾದವೂ ಇದೆ.
ರಾಜಸ್ತಾನ, ಉತ್ತರಾಖಂಡ ಮುಂತಾದ ರಾಜ್ಯಗಳ ಚುನಾವಣಾ ಉಸ್ತುವಾರಿಯಾಗಿ ತಮ್ಮದೇ ಆದ ತಂತ್ರಗಾರಿಕೆಯಿಂದ ಕಮಲ ಅರಳಿಸಿದ ಜೋಶಿಯವರಿಗೆ ಮಾನವ ಸಂಪನ್ಮೂಲದಂತಹ ಮಹತ್ವದ ಖಾತೆ ಸಿಗುವ ಸಾಧ್ಯತೆ ಇದೆ.
ರಾಜ್ಯದಿಂದ ನಿರ್ಮಲಾ ಸೀತಾರಾಮ ಸಹಿತ ಐವರಿಗೆ ಸಚಿವ ಭಾಗ್ಯ ದೊರೆಯಲಿದೆ. ಜೆಡಿಎಸ್ ಕೋಟಾದಡಿ ಕುಮಾರಸ್ವಾಮಿಗೆ ಕ್ಯಾಬಿನೆಟ್ ದರ್ಜೆ, ಲಿಂಗಾಯಿತ ಕೋಟಾದಲ್ಲಿ ವಿ. ಸೋಮಣ್ಣ, ಒಕ್ಕಲಿಗರಾದ ಶೋಭಾ ಕರಂದ್ಲಾಜೆ ಅವರಿಗೆ ರಾಜ್ಯ ಸಚಿವ ಸ್ಥಾನ ಪಕ್ಕಾ ಆಗಿದೆ.ಮಾಜಿ ಸಿಎಂಗಳಾದ ಜಗದೀಶ್ ಶೆಟ್ಟರ್ ಮತ್ತು ಬಸವರಾಜ ಬೊಮ್ಮಾಯಿ ಅವರ ಕನಸು ಕೊನೆಗೂ ಹಾಗೆ ಉಳಿದಂತಾಯಿತು.
*ಬಿಎಸ್ ವೈ ಆಶೀರ್ವಾದ ಪಡೆದ ಜೋಶಿ*
ಮೋದಿ ಅವರ ಮೂರನೇ ಅವಧಿ ಸಚಿವ ಸಂಪುಟದಲ್ಲಿ ಸ್ಥಾನ ಪಡೆದಿರುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪ್ರಮಾಣ ವಚನಕ್ಕೂ ಮುನ್ನ ರಾಜ್ಯ ಬಿಜೆಪಿ ವರಿಷ್ಠ ಬಿ.ಎಸ್. ಯಡಿಯೂರಪ್ಪ ಅವರ ಆಶೀರ್ವಾದ ಪಡೆದರು.
ಇಂದು ಸಂಜೆ ಪ್ರಮಾಣ ವಚನ ಸ್ವೀಕರಿಸುವ ಹಿನ್ನೆಲೆಯಲ್ಲಿ ಪ್ರಲ್ಹಾದ ಜೋಶಿ ದೆಹಲಿಯಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.
*ಸಿಹಿ ತಿನಿಸಿ ಬೆನ್ನು ತಟ್ಟಿದ ಬಿಎಸ್ ವೈ:* ಯಡಿಯೂರಪ್ಪ ಅವರು ಜೋಶಿ ಅವರಿಗೆ ಸಿಹಿ ತಿನಿಸಿ ಬೆನ್ನು ತಟ್ಟಿ ಬೆಂಬಲ ವ್ಯಕ್ತಪಡಿಸಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸಹ ಸಿಹಿ ತಿನಿಸಿ ಸಂಭ್ರಮದಲ್ಲಿ ಭಾಗಿಯಾದರು.
ಸಂಸದರಾದ ಬಿ.ವೈ.ರಾಘವೇಂದ್ರ, ವಿಧಾನ ಪರಿಷತ್ ಸದಸ್ಯ ರವಿಕುಮಾರ್, ಶಾಸಕರಾದ ಮಹೇಶ್ ಟೆಂಗಿನಕಾಯಿ, ಅರವಿಂದ ಬೆಲ್ಲದ, ಹರೀಶ್ ಪೂಂಜಾ, ಧಾರವಾಡ ಜಿಲ್ಲಾ ಬಿಜೆಪಿ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ ಹಾಗೂ ಪ್ರಮುಖರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
*ಮೋದಿ-ಜೋಶಿ ದಾಖಲೆ:* ಕೇಂದ್ರದಲ್ಲಿ ಕಾಂಗ್ರೆಸ್ಸೇತರವಾಗಿ ನರೇಂದ್ರ ಮೋದಿ ಸತತ ಮೂರನೇ ಬಾರಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದರೆ, ಇತ್ತ ಧಾರವಾಡ ಸಂಸದ ಪ್ರಲ್ಹಾದ ಜೋಶಿ ಅವರದ್ದು ಒಂದು ದಾಖಲೆ ಆಗಿದೆ.