*2ನೇ ಬಾರಿಗೆ ಚಾಂಪಿಯನ್ ಪಟ್ಟ* – *ಅರ್ಜೆಂಟೀನಾಗೆ ಸೋಲು, ಮೆಸ್ಸಿಯ ಕನಸು ಭಗ್ನ*
ನ್ಯೂಜೆರ್ಸಿ: ನ್ಯೂಯಾರ್ಕ್ ನ್ಯೂಜೆರ್ಸಿ ಕ್ರೀಡಾಂಗಣದಲ್ಲಿ ಸೋಮವಾರ ಬೆಳಿಗ್ಗೆ ನಡೆದ ರೋಚಕ ಫಿಫಾ ವಿಶ್ವಕಪ್ ಫೈನಲ್ ಪಂದ್ಯದಲ್ಲಿ, ಅರ್ಜೆಂಟೀನಾ ವಿರುದ್ಧ 1-೦ ಅಂತರದ ಐತಿಹಾಸಿಕ ಜಯ ಸಾಧಿಸಿದ ಸ್ಪೇನ್ ಎರಡನೇ ಬಾರಿಗೆ ವಿಶ್ವದ ನೂತನ ರಾಜನಾಗಿ ಹೊರಹೊಮ್ಮಿದೆ.

ಇಡೀ ಜಗತ್ತೇ ಉಸಿರು ಬಿಗಿಹಿಡಿದು ನೋಡುತ್ತಿದ್ದ ಪಂದ್ಯದ 106ನೇ ನಿಮಿಷದಲ್ಲಿ ಫೆರಾನ್ ಟೊರೆಸ್ ಬಾರಿಸಿದ ಮ್ಯಾಜಿಕ್ ಗೋಲು ಸ್ಪೇನ್ ಪಾಲಿಗೆ ಸುವರ್ಣಾಕ್ಷರಗಳಲ್ಲಿ ಬರೆಯುವಂತಹ ವಿಜಯವನ್ನು ತಂದುಕೊಟ್ಟಿತು.ಲಿಯೋನೆಲ್ ಮೆಸ್ಸಿಯ ವಿಶ್ವಕಪ್ ಪಯಣಕ್ಕೆ ಅದ್ಭುತ ವಿದಾಯ ನೀಡಲು ಕಾಯುತ್ತಿದ್ದ ಅರ್ಜೆಂಟೀನಾ ಅಭಿಮಾನಿಗಳಿಗೆ ಫಲಿತಾಂಶ ಶಾಕ್ ನೀಡಿದ್ದು ಸ್ಪೇನ್ ತಂಡವು ಕೇವಲ ಡಿಫೆಂಡಿಂಗ್ ಚಾಂಪಿಯನ್ ಅರ್ಜೆಂಟೀನಾ ವಿರುದ್ಧ ರೋಚಕ ಜಯ ಸಾಧಿಸದೆ ಬದಲಿಗೆ ಪಂದ್ಯದುದ್ದಕ್ಕೂ ಅವರ ಮೇಲೆ ಸಂಪೂರ್ಣ ಪ್ರಾಬಲ್ಯ ಸಾಧಿಸಿತು.
ಲೂಯಿಸ್ ಡಿ ಲಾ ಫ್ಯುಯೆಂಟೆ ಅವರ ಪಡೆ ಚೆಂಡಿನ ಮೇಲಿನ ನಿಯಂತ್ರಣವನ್ನು ತನ್ನದೇ ಹಿಡಿತದಲ್ಲಿಟ್ಟುಕೊಂಡು, ಆಟದ ಗತಿಯನ್ನು ತಾನೇ ನಿರ್ದೇಶಿಸಿತು ಹಾಗೂ ಅರ್ಜೆಂಟೀನಾ ಯಾವುದೇ ರೀತಿಯ ಆಕ್ರಮಣಕಾರಿ ಆಟ ಆಡದಂತೆ ಸಂಪೂರ್ಣವಾಗಿ ಕಟ್ಟಿಹಾಕಿತು. ಅಂತಿಮವಾಗಿ ಹೆಚ್ಚುವರಿ ಅವಧಿಯಲ್ಲಿ ಫೆರಾನ್ ಟೊರೆಸ್ ಬಾರಿಸಿದ ಆ ಅದ್ಭುತ ಗೋಲು, ಅರ್ಹವಾಗಿಯೇ ಸ್ಪೇನ್ ತಂಡಕ್ಕೆ 1-೦ ಅಂತರದ ಐತಿಹಾಸಿಕ ವಿಜಯದೊಂದಿಗೆ ಎರಡನೇ ಫಿಫಾ ವಿಶ್ವಕಪ್ ಮುಕುಟವನ್ನು ತಂದುಕೊಟ್ಟಿತು.
ಎಂಟು ಬಾರಿಯ ಬ್ಯಾಲನ್ ಡಿ’ಓರ್ ಪ್ರಶಸ್ತಿ ವಿಜೇತ ಲಿಯೋನೆಲ್ ಮೆಸ್ಸಿ ಅವರತ್ತ ಚೆಂಡು ತಲುಪದಂತೆ ಸ್ಪೇನ್ನ ಮಧ್ಯಮ ಕ್ರಮಾಂಕದ ಆಟಗಾರರು ಯಶಸ್ವಿಯಾಗಿ ಕಟ್ಟಿಹಾಕಿದರೂ .ಸ್ಪೇನ್ ವಿಜಯಕ್ಕಾಗಿ ಕೊನೆಯವರೆಗೂ ಕಾಯಬೇಕಾಗಿ ಬಂದಿತು.




