*ಸುವರ್ಣಸೌಧದೆದರು ಸಲ್ಲೇಖನ ವೃತ : ಗುಣಧರನಂದಿ ಮಹಾರಾಜರ ಸ್ಪಷ್ಟೋಕ್ತಿ*
ಹುಬ್ಬಳ್ಳಿ: ರಾಜ್ಯ ಸರ್ಕಾರವು ಜೈನ ಸಮಾಜದ ಪ್ರಮುಖ ಬೇಡಿಕೆಗಳ ಕುರಿತಾಗಿ ಸರ್ಕಾರ ಲಿಖಿತವಾಗಿ ತಿಳಿಸದಿದ್ದರೆ ಡಿಸೆಂಬರ್ 4ರಿಂದ ಬೆಳಗಾವಿ ಜಿಲ್ಲೆ ಚಿಕ್ಕೋಡಿಯಿಂದ ಪಾದಯಾತ್ರೆ ಮೂಲಕ ಬಂದು ಬೆಳಗಾವಿಯ ಸುವರ್ಣ ಸೌಧದೆದುರು ಸಲ್ಲೇಖನ ವ್ರತ(ಜೀವನ ತ್ಯಾಗ) ಆರಂಭಿಸಲಾಗುವುದು ಎಂದು ವರೂರಿನ ನವಗ್ರಹ ತೀರ್ಥ ಕ್ಷೇತ್ರದ ಗುಣಧರನಂದಿ ಮಹಾರಾಜರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಮುನಿಗಳು, ಆರ್ಥಿಕವಾಗಿ ತೀವ್ರ ಹಿಂದುಳಿದಿರುವ ಜೈನ ಸಮಾಜದ ಅಭಿವೃದ್ಧಿಗೆ ನಿಗಮ ಸ್ಥಾಪಿಸಬೇಕು. ಜೈನ ಸಾಧು-ಸಂತರ ಸುರಕ್ಷತೆಗಾಗಿ ಮಾರ್ಗಸೂಚಿ ಹೊರಡಿಸಬೇಕು ಸೇರಿ ಇನ್ನಿತರೆ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕಳೆದ ಮೂರು ವರ್ಷಗಳಿಂದ ಸರ್ಕಾರ ಮತ್ತು ಸಚಿವರಿಗೆ ಮನವಿ ಸೇರಿ ಹೋರಾಟ ಮಾಡುತ್ತ ಬರಲಾಗಿದೆ. ಆದರೆ, ಇದುವರೆಗೂ ಸರ್ಕಾರದಿಂದ ಲಿಖಿತವಾಗಿ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ಸಮಾಜಕ್ಕಾಗಿ ದೇಹತ್ಯಾಗ ಮಾಡಲು ನಿರ್ಧರಿಸಿದ್ದೇನೆ ಎಂದು ಹೇಳಿದರು.

ನ. 19ರಂದು ಬಾಗಲಕೋಟೆ ಜಿಲ್ಲೆ ತೇರದಾಳದ ಜಿನಸೇನ ಭಟ್ಟಾರಕ ಸ್ವಾಮೀಜಿ ಆಶ್ರಮದಲ್ಲಿ ಮಹಾಸಮಾವೇಶ ಮೂಲಕ ನಿವೇದನಾ ಯಾತ್ರೆ ಆರಂಭಿಸಲಾಗುವುದು. ನಂತರ ಕಾಗವಾಡ, ಅಥಣಿ, ಚಿಕ್ಕೋಡಿಯಲ್ಲಿ ಸಮಾಜದವರೊಂದಿಗೆ ಸೇರಿ ಶಾಸಕರಿಗೆ ಮನವಿ ಸಲ್ಲಿಸಲಾಗುವುದು. ನಾನು ಕೊಟ್ಟ ಸಲ್ಲೇಖನ ವ್ರತ ಗಡುವು ಮುಗಿದಿದೆ ಎಂದು ತಿಳಿಸಿದರು.
ಶಿಕ್ಷಣ ಸಚಿವ ಮಧು ಬಂಗಾರಪ್ಪಗೆ ಹಲವು ಬಾರಿ ಮನವಿ ಮಾಡಿದರೂ ಸೌಜನ್ಯಕ್ಕಾದರೂ ಮಾತನಾಡಲಿಲ್ಲ. ಸ್ಪಂದಿಸಲಿಲ್ಲ. ಆ ನಿಟ್ಟಿನಲ್ಲಿ ಇದುವರೆಗೂ ಯಾವುದೇ ಕೆಲಸ ಮಾಡಲಿಲ್ಲ. ಅಗೌರವ ತಂದಿದ್ದು, ತುಂಬಾ ನೋವು ತಂದಿದೆ. ಅಂತಹ ಸಚಿವರು ನಮಗೆ ಬೇಕಿಲ್ಲ. ಅವರೇನು ರಾಜ್ಯದಲ್ಲಿ ಇಲ್ಲವೇ. ವಿದೇಶದಲ್ಲಿದ್ದಾರೆಯೇ? ಅವರ ವಿರುದ್ಧವೂ ಹೋರಾಟ ಮಾಡಲಾಗುವುದು. ಗೃಹ ಸಚಿವ ಪ್ರಿಯಾಂಕಾ ಖರ್ಗೆ ಸಂತರಿಗೆ ರಕ್ಷಣೆ ನೀಡಬೇಕು. ಸಿಎಂ, ಸಚಿವರು ನನಗೆ ಕಾಲು-ಕೈ ಮುಗಿಯುವ ಕಾಲ ಮುಗಿದಿದೆ. ಸರ್ಕಾರ ಲಿಖಿತವಾಗಿ ಉತ್ತರ ನೀಡಬೇಕು. ಇಲ್ಲವಾದರೆ ಅಂಹಿಸಾ ಮಾರ್ಗದಲ್ಲಿ ಹೋರಾಟ ಮಾಡಲಾಗುವುದು. ಶನಿವಾರ ಹುಬ್ಬಳ್ಳಿಯಿಂದ ತೇರದಾಳಕ್ಕೆ ತೆರಳುವೆ ಎಂದು ಮಹಾರಾಜರು ತಮ್ಮ ಸ್ಪಷ್ಟ ನಿರ್ಧಾರ ಪ್ರಕಟಿಸಿದರು.



