50 ಮೀಟರ್ ಫ್ರೀ ಪಿಸ್ತೂಲ್ ವಿಭಾಗದಲ್ಲಿ ಐಶ್ವರ್ಯ ಬಾಲೆಹೊಸೂರು ಆಯ್ಕೆ*
ಹುಬ್ಬಳ್ಳಿ: ಖ್ಯಾತ ಕ್ರೀಡಾಪಟು, ಹುಬ್ಬಳ್ಳಿಯ ಶೂಟಿಂಗ್ ಅಕಾಡೆಮಿಯ ಪ್ರತಿಭೆ ಐಶ್ವರ್ಯ ರವಿಚಂದ್ರ ಬಾಲೆಹೊಸೂರು ಅವರು ಕತಾರ್ನ ದೋಹಾದಲ್ಲಿ ನವೆಂಬರ್ 1 ರಿಂದ ನವೆಂಬರ್ 14 ರವರೆಗೆ ನಡೆಯಲಿರುವ ಐಎಸ್ಎಸ್ಎಫ್ (ISSF) ವಿಶ್ವ ಶೂಟಿಂಗ್ ಚಾಂಪಿಯನ್ಶಿಪ್ಗೆ ಭಾರತವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ.

ಐಶ್ವರ್ಯ ಅವರು 50 ಮೀಟರ್ ಫ್ರೀ ಪಿಸ್ತೂಲ್ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ. ಈ ಹಿಂದೆ ಜರ್ಮನಿಯಲ್ಲಿ ನಡೆದ ಜೂನಿಯರ್ ವರ್ಲ್ಡ್ ಶೂಟಿಂಗ್ ಚಾಂಪಿಯನ್ಶಿಪ್ನಲ್ಲಿ ಬೆಳ್ಳಿ ಪದಕ ಗೆದ್ದ ಸಾಧನೆ ಮಾಡಿರುವ ಇವರು, ರಾಜ್ಯ, ರಾಷ್ಟ್ರ ಹಾಗೂ ಪ್ರತಿಷ್ಠಿತ ದಸರಾ ಕ್ರೀಡಾಕೂಟಗಳಲ್ಲಿ ಅನೇಕ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ.
ನಾಲ್ಕು ವರ್ಷಕ್ಕೊಮ್ಮೆ ಜರುಗುವ ಈ ಪ್ರತಿಷ್ಠಿತ ವಿಶ್ವ ಶೂಟಿಂಗ್ ಚಾಂಪಿಯನ್ಶಿಪ್ನಲ್ಲಿ ವಿಶ್ವದ 90ಕ್ಕೂ ಹೆಚ್ಚು ದೇಶಗಳ 1000ಕ್ಕೂ ಅಧಿಕ ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ.
ಇಂತಹ ಅತ್ಯುನ್ನತ ಹಂತದ ಸ್ಪರ್ಧೆಯಲ್ಲಿ ಹುಬ್ಬಳ್ಳಿಯ ಶೂಟರ್ ಭಾಗವಹಿಸುತ್ತಿರುವುದು ಅತ್ಯಂತ ಹೆಮ್ಮೆಯ ವಿಷಯವಾಗಿದೆ.
”ವಿಶ್ವ ಚಾಂಪಿಯನ್ಶಿಪ್ನಲ್ಲಿ ಐಶ್ವರ್ಯ ಅತ್ಯುತ್ತಮ ಪ್ರದರ್ಶನ ನೀಡಿ ಪದಕ ಗೆಲ್ಲುವ ಮೂಲಕ ನಮ್ಮ ದೇಶ, ರಾಜ್ಯ ಹಾಗೂ ಧಾರವಾಡ ಜಿಲ್ಲೆಗೆ ಕೀರ್ತಿ ತರಲಿ. ಮುಂದೆ ಅವರ ಒಲಿಂಪಿಕ್ ಕನಸು ನನಸಾಗಲಿ ಎಂದು ತರಬೇತುದಾರರಾಗಿ ಹಾಗೂ ತಂದೆಯಾಗಿ ಆಶಿಸುತ್ತೇನೆ,” ಎಂದು ಮಾಜಿ ಸೈನಿಕರು ಮತ್ತು ರಾಷ್ಟ್ರಮಟ್ಟದ ಆಟಗಾರ ರವಿಚಂದ್ರ ಬಾಲೆಹೊಸೂರು ‘ಕನ್ನಡ ಧ್ವನಿ’ಗೆ ತಿಳಿಸಿದ್ದಾರೆ.



