*ನೀತಿ, ಪ್ರೀತಿ ನೆಲೆಯಲ್ಲಿ ನಾಡು ಕಟ್ಟಲು ಸ್ವಾಮೀಜಿ ಕರೆ*/ *ನಾಡಿನ ಸುಭಿಕ್ಷೆಗಾಗಿ ಸಿಎಂ ಡಿಕೆಶಿ ಪ್ರಾರ್ಥನೆ*
ಮೈಸೂರು : ಚಾಮುಂಡಿ ಬೆಟ್ಟದಲ್ಲಿ ನಾಡಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿ ತಾಯಿಗೆ ಶುಭ ಧನುರ್ ಲಗ್ನದಲ್ಲಿ ಅಗ್ರಪೂಜೆ ಸಲ್ಲಿಸುವ ಮೂಲಕ,416ನೇ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ–2026ಕ್ಕೆ ಕೊಪ್ಪಳದ ಗವಿಮಠದ ಪೂಜ್ಯ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿ ಅವರು ಭವ್ಯ ಚಾಲನೆ ನೀಡಿದರು.
ಪುಷ್ಪಾರ್ಚನೆ ಮಾಡುವ ಮೂಲಕ ಈ ಬಾರಿಯ 11 ದಿನಗಳ ನಾಡಹಬ್ಬ ದಸರಾ ವಿದ್ಯುಕ್ತ ಆರಂಭಗೊಂಡಿತು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹಾಜರಿದ್ದು, ನಾಡಿನ ಸುಭಿಕ್ಷೆ, ಶಾಂತಿ, ಸಮೃದ್ಧಿ ಹಾಗೂ ಜನರ ಕಲ್ಯಾಣಕ್ಕಾಗಿ ತಾಯಿಯಲ್ಲಿ ಪ್ರಾರ್ಥಿಸಿದರು.
ಇಂದಿನಿಂದ ಅಕ್ಟೋಬರ್ 21 ರವರೆಗೆ ದಸರಾ ಕಾರ್ಯಕ್ರಮಗಳು ನಡೆಯಲಿವೆ.
ಉದ್ಘಾಟಿಸಿ ಮಾತನಾಡಿದ ಕೊಪ್ಪಳದ ಗವಿಸಿದ್ದೇಶ್ವರ ಸ್ವಾಮೀಜಿ, ಮೈಸೂರಿನ ಸಾಂಸ್ಕೃತಿಕ ಪರಂಪರೆ, ಮೈಸೂರು ರಾಜಮನೆತನದ ಕೊಡುಗೆ, ಕನ್ನಡದ ಸಾಮರಸ್ಯದ ಪರಂಪರೆಯ ಮಹತ್ವವನ್ನು ಒತ್ತಿಹೇಳಿದರು.
ಒಂದು ಕಾಲದಲ್ಲಿ ದೊರೆಯ ಹಬ್ಬವಾಗಿದ್ದ ದಸರಾ ಇಂದು ಧರೆಯ ಹಬ್ಬವಾಗಿದೆ. ದಸರಾ ಇದು ನಾಡಿನ ಗತವೈಭವ, ವರ್ತಮಾನ ಮತ್ತು ಭವಿಷ್ಯದ ಸಂಗಮ ಎಂದರು.
ಆದಿಕವಿ ಪಂಪನಿಂದ ರಾಷ್ಟ್ರಕವಿ ಕುವೆಂಪುವರೆಗಿನ ಕನ್ನಡ ಸಾಹಿತ್ಯ ಪರಂಪರೆ ಸಾಮರಸ್ಯದ ಸಂದೇಶ ಸಾರುತ್ತದೆ. ನೀತಿ ಮತ್ತು ಪ್ರೀತಿಯ ನೆಲೆಯಲ್ಲಿ ನಾವು ನಾಡು ಕಟ್ಟಬೇಕು. ಗ್ರಂಥಗಳು ಹಾಗೂ ಪಂಥಗಳು ಬೇರೆ ಇರಬಹುದು; ಆದರೆ ಮಾನವೀಯತೆ ಮತ್ತು ಸತ್ಯದ ಹಾದಿ ಒಂದೇ ಆಗಿರಬೇಕು ಎಂದು ಪ್ರತಿಪಾದಿಸಿದರು. ದುಡಿಮೆಯನ್ನು ಪ್ರೀತಿಸಬೇಕೇ ಹೊರತು ಹಣವನ್ನಷ್ಟೇ ಆರಾಧಿಸಬಾರದು. ದುಡಿದು ಬದುಕುವ ಸಂಸ್ಕೃತಿ ಬೆಳೆಸಿಕೊಳ್ಳಬೇಕು ಎಂಬ ಆಶಿಸಿದರು.
ಸಚಿವರಾದ ಶಿವರಾಜ್.ಎಸ್.ತಂಗಡಗಿ, ಯತೀಂದ್ರ ಸಿದ್ದರಾಮಯ್ಯ, ರಾಮಲಿಂಗಾರೆಡ್ಡಿ ಈಶ್ವರ್ ಖಂಡ್ರೆ, ರಿಜ್ವಾನ್ ಅರ್ಷದ್, ಬಸವಂತಪ್ಪ, ಪುಟ್ಟರಂಗಶೆಟ್ಟಿ, ಅಜಯ್ ಸಿಂಗ್, ಶಾಸಕರಾದ ಜಿ.ಟಿ.ದೇವೇಗೌಡ, ಎಚ್.ಸಿ.ಮಹದೇವಪ್ಪ, ತನ್ವೀರ್ ಸೇಠ್, ಕೆ.ವೆಂಕಟೇಶ್, ಅನಿಲ್ ಕುಮಾರ್ ಚಿಕ್ಕಮಾದು, ರವಿಶಂಕರ್, ದರ್ಶನ್ ಧ್ರುವನಾರಾಯಣ್, ಶ್ರೀವತ್ಸ, ಹರೀಶ್ ಗೌಡ, ರಾಘವೇಂದ್ರ ಹಿಟ್ನಾಳ್, ಎ.ಆರ್.ಕೃಷ್ಣಮೂರ್ತಿ, ದಿನೇಶ್ ಗೂಳಿಗೌಡ, ಸಂಸದ ಸುನೀಲ್ ಬೋಸ್, ಪರಿಷತ್ ಸದಸ್ಯರಾದ ತಿಮ್ಮಯ್ಯ, ಶಿವಕುಮಾರ್, ಬಸನಗೌಡ ಬಾದರ್ಲಿ ಇದ್ದರು. 



