*ಇಡೀ ಹುಬ್ಬಳ್ಳಿ ಹಸಿರುಮಯ – ಹೈರಾಣಾದ ಪೊಲೀಸರು*
*ಜೋಶಿ ನಿವಾಸಕ್ಕೆ ಮುತ್ತಿಗೆ ಯತ್ನ – ಹೈಡ್ರಾಮಾ , ಶಾಸಕರಿಂದ ಭರವಸೆ ನಂತರ ಹಿಂದಕ್ಕೆ*
ಹುಬ್ಬಳ್ಳಿ: ಡಾ. ಸ್ವಾಮಿನಾಥನ್ ಆಯೋಗ ಜಾರಿ, ಪ್ರತಿ ಟನ್ ಕಬ್ಬಿಗೆ ಕನಿಷ್ಠ ₹5500 ಬೆಂಬಲ ಬೆಲೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿ ರಾಜ್ಯ ರೈತ ಸಂಘ, ಹಸಿರು ಸೇನೆ ಸಂಘಟನೆಯ ನೇತೃತ್ವದಲ್ಲಿ ನಡೆದ ಕಾವು ಒಂದೇ ದಿನದಲ್ಲಿ ವಾಣಿಜ್ಯ ರಾಜಧಾನಿಯನ್ನು ಹೈರಾಣಾಗಿಸಿತಲ್ಲದೇ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಕಾರಾತ್ಮಕ ಸ್ಪಂದನೆ ಹಿನ್ನೆಲೆಯಲ್ಲಿ, ಹೋರಾಟವನ್ನು ತಾತ್ಕಾಲಿಕವಾಗಿ ಸಂಜೆ ವೇಳೆಗೆ ಕೈಬಿಡಲಾಗಿದೆ.
ಬೆಳಿಗ್ಗೆಯಿಂದ ಆರಂಭಗೊಂಡ ಪ್ರತಿಭಟನೆ ಇಡಿ ನಗರದ ಸಂಚಾರ ಅಸ್ತವ್ಯಸ್ತಗೊಳಿಸಿತಲ್ಲದೇ ಮಂಡ್ಯ, ಮೈಸೂರು, ವಿಜಯಪುರ, ತುಮಕೂರು, ಬಾಗಲಕೋಟೆ, ಧಾರವಾಡ ಸೇರಿದಂತೆ ಮಹಾರಾಷ್ಟ್ರ, ತೇಲಂಗಾಣ ರಾಜ್ಯದಿಂದಲೂ ಸುಮಾರು ಹದಿನೈದು ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ರೈತರ ಪ್ರವಾಹವೇ ಹರಿದು ಬಂದು ಕೇಂದ್ರ ಸರ್ಕಾರ ಹಾಗೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಚನ್ನಮ್ಮ ವರ್ತುಳದಲ್ಲಿ ಧರಣಿ ನಡೆಸಿದ ನಂತರ ಐದು ನೂರಕ್ಕೂ ಹೆಚ್ಚು ರೈತರು ಕೇಶ್ವಾಪುರದ ಸಚಿವ ಪ್ರಹ್ಲಾದ ಜೋಶಿಯವರ ನಿವಾಸದವರೆಗೆ ತೆರಳಿ ನುಗ್ಗುವ ಯತ್ನ ಮಾಡಿದರೂ ಪೊಲೀಸರು ಹರಸಾಹಸ ಮಾಡಿ ತಡೆದರು. ಸಂಜೆ ವೇಳೆಗೆ ರಮೇಶ ಭವನ ಬಳಿ ರೈತರನ್ನು ಭೇಟಿ ಮಾಡಿದ ಶಾಸಕರಾದ ಮಹೇಶ ಟೆಂಗಿನಕಾಯಿ ಹಾಗೂ ಎಂ.ಆರ್.ಪಾಟೀಲ ಕೇಂದ್ರ ಸಚಿವರ ಸ್ಪಂಧನೆ ನೀಡುವ ಮೂಲಕ ಅನಿರ್ಧಿಷ್ಟ ಹೋರಾಟದಿಂದ ಹಿಂದೆ ಸರಿದರು.
ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಸಕಾರಾತ್ಮಕ ಸ್ಪಂದನೆ ಸಿಕ್ಕಿದ್ದು ಅಕ್ಟೋಬರ್ 10 ರೊಳಗಾಗಿ ದೆಹಲಿಯಲ್ಲಿ ಸಭೆ ನಡೆಸಲು ಸಮ್ಮತಿ ಸೂಚಿಸಲಾಗಿದೆ. ಸಭೆಗೆ ರಾಜ್ಯ ಮತ್ತು ಮಹಾರಾಷ್ಟ್ರ, ಉತ್ತರ ಪ್ರದೇಶದ 30ರೈತರ ಮುಖಂಡರ ನಿಯೋಗ ಭಾಗಿಯಾಗಲು ಅವಕಾಶ ಕಲ್ಪಿಸಲಾಗಿದೆ. ರೈತರ ಜೊತೆಗೆ ಸಭೆ ಮುಗಿಯುವರಿಗೆ ಯಾವುದೇ ಸಕ್ಕರೆ ಕಾರ್ಖಾನೆಗಳ ಆರಂಭವಾಗುವಂತಿಲ್ಲ. ದೆಹಲಿ ಸಭೆಯಲ್ಲಿ ಸಂಬಂಧಿಸಿದ ಕೇಂದ್ರ ಸಚಿವರುಗಳು ಭಾಗಿಯಾಗಬೇಕು. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಜೊತೆ ಪೆಟ್ರೋಲಿಯಂ ಸಚಿವರು ಮತ್ತು ಕಬ್ಬು ಬೆಳೆಗೆ ಸಂಬಂಧಿಸಿದ ಅಧಿಕಾರಿಗಳು ಭಾಗಿಯಾಗಬೇಕು. ಸಭೆಯಲ್ಲಿ ರೈತರು ಕೇಳುವ ಬೆಂಬಲ ಬೆಲೆ, ಎಂಆರ್ ಪಿ ದರ ನಿಗದಿ ಮಾಡಬೇಕು. ಇಲ್ಲದಿದ್ದರೆ ಗುರ್ಲಾಪುರದಲ್ಲಿ ಉಗ್ರವಾದ ಹೋರಾಟದ ಮಾಡೋದಾಗಿ ಎಚ್ಚರಿಕೆ ನೀಡಿದರು.
ಎಥನಾಲ್ ಉತ್ಪಾದನೆಗೆ ಮತ್ತು ವಿಕ್ರಿಗೆ ಪೂರ್ಣ ಪ್ರಮಾಣದ ಅನುಮತಿ ನೀಡಬೇಕು. ವಿಬಿಜಿ ರಾಮ್ ಜಿ ಯೋಜನೆಯಲ್ಲಿ ಎಲ್ಲಾ ಕೃಷಿ ಚಟುವಟಿಕೆಗಳನ್ನು ಅಳವಡಿಸಬೇಕು.ಮಹಾದಾಯಿ ನೀರಾವರಿ ಯೋಜನೆಯನ್ನು ತ್ವರಿತವಾಗಿ ಅನುಷ್ಠಾನಗೊಳಿಸಬೇಕು ಎಂಬುದು ಪ್ರಮುಖ ಬೇಡಿಕೆಯಾಗಿದೆ.
ಚುನಪ್ಪ ಪೂಜೇರಿ, ಶಶಿಕಾಂತ ಗುರೂಜಿ ನಾಗೇಶ ಇಟಗಿ, ಜ್ಯೋತಿಬಾ ಹುಲಕೊಪ್ಪ, ಪ್ರಕಾಶ ನಾಯ್ಕ, ಕುಮಾರ ಬಾಬ್ಜಿ,ಮಂಜುನಾಥ ಹೊಸಮನಿ, ಸಿದ್ದು ತೇಜಿ ಮುಂತಾದವರು ನೆರೆದ ರೈತರನ್ನು ಉದ್ದೇಶಿಸಿ ಮಾತನಾಡಿದರು .
ಕೇಶ್ವಾಪುರದಲ್ಲಿರುವ ಕೇಂದ್ರ ಸಚಿವ ಪ್ರಲಾದ ಜೋಶಿ ಅವರ ನಿವಾಸ ಹಾಗೂ ಚಿಟಗುಪ್ಪಿ ಆಸ್ಪತ್ರೆ ಆವರಣದಲ್ಲಿರುವ ಅವರ ಕಚೇರಿಗೆ ಬಿಗಿ ಭದ್ರತೆ ಒದಗಿಸಲಾಗಿತ್ತು.

ಪೊಲೀಸ ಇಲಾಖೆಯವರು ನಾಲ್ಕು ರಸ್ತೆಗಳಲ್ಲಿ ವಾಹನಗಳನ್ನು ಗಬ್ಬೂರ, ಗದಗ ರಸ್ತೆ, ಕೇಶ್ವಾಪುರ ಮುಂತಾದೆಡೆ ತಡೆದರೂ ಮಧ್ಯಾಹ್ನದವರೆಗೆ ರೈತರು ತಂಡೋಪತಂಡವಾಗಿ ಬಂದು 1990ರ ದಶಕದ ಹೋರಾಟದ ಕಿಚ್ಚು ಪ್ರದರ್ಶಿಸಿದರಲ್ಲದೇ ಸಚಿವ ಜೋಶಿ ಮತ್ತು ಕೇಂದ್ರದ ವಿರುದ್ದ ಹರಿಹಾಯ್ದರು. ಸಹಸ್ರ ಸಹಸ್ರ ಸಂಖ್ಯೆಯಲ್ಲಿ ರೈತರು ಬಂದ ಕಾರಣ ಪೊಲೀಸರು ಅವರನ್ನು ತಡೆಯುವರಲ್ಲಿ ಹರಸಾಹಸ ಪಡೆಯಬೇಕಾಯಿತು.




