*ಮಾದಕ ದ್ರವ್ಯ ಮುಕ್ತವಾಗಿಸಲು ಬೋರಸೆ ಮಹತ್ವದ ಹೆಜ್ಜೆ*
ಹುಬ್ಬಳ್ಳಿ : ಅವಳಿ ನಗರಗಳಲ್ಲಿ ಹೆಚ್ಚುತ್ತಿರುವ ಮಾದಕ ದ್ರವ್ಯಗಳ ಹಾವಳಿ ಹಾಗೂ ಅಕ್ರಮ ಸಾಗಾಟಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಹುಬ್ಬಳ್ಳಿ–ಧಾರವಾಡ ಪೊಲೀಸರು ಸಮರೋಪಾದಿಯಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದು, ಪೊಲೀಸ್ ಆಯುಕ್ತ ಭೂಷಣ ಬೋರಸೆ ಮಾರ್ಗದರ್ಶನದಲ್ಲಿ ಸಿಸಿಬಿ ಪೊಲೀಸರು ಸದ್ದಿಲ್ಲದೇ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಕಳೆದ ಎರಡು ತಿಂಗಳಲ್ಲಿ ವಾರಕ್ಕೆ ಎರಡು – ಮೂರು ದಾಳಿಗಳನ್ನು ನಡೆಸಿ ಈಗಾಗಲೇ ಹಲವು ಪ್ರಕರಣ ದಾಖಲಿಸುತ್ತಿರುವ ಸಿಸಿಬಿ ಎಸಿಪಿ ಶಿವಪ್ರಕಾಶ ನಾಯಕ ತಂಡ ಇಂದು ಬೆಂಡಿಗೇರಿ ಮತ್ತು ಘಂಟಿಕೇರಿ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿ ಸುಮಾರು ಎರಡು ಕೆ.ಜಿ.ಗಾಂಜಾ ವಶ ಪಡಿಸಿಕೊಂಡಿದೆ.
ಗಾಂಜಾ ಕ್ರಿಮಿಗಳ ಚಲನವಲನದ ಮೇಲೆ ನಿಗಾ ಇಟ್ಟ ಸಿಸಿಬಿ ತಂಡ ಘಂಟಿಕೇರಿ ಹಾಗೂ ಮಂಟೂರ್ ರಸ್ತೆಯ ಮಿಲತ್ ನಗರದ ಮನೆ ಒಂದರಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿ, ಸುಮಾರು ಎರಡು ಲಕ್ಷ ರೂ ಮೌಲ್ಯದ ಗಾಂಜಾ ವಶಪಡಿಸಿಕೊಂಡು ಮೂವರನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿತರನ್ನು ಶಾಹಿರಾ ಹಸನ್ ಶೇಕ್ ಹಾಗೂ ಅರ್ಮಾನ್ ಹಸನ್ ಶೇಖ ಹಾಗೂ ಫಾತಿಮಾ ನಧಾಫ( ಘಂಟಿಕೇರಿ) ಬಂಧಿಸಲ್ಪಟ್ಟವರಾಗಿದ್ದಾರೆ. ಗಾಂಜಾ ತಂದು ಮನೆಯಲ್ಲಿಯೇ ಇಟ್ಟು ತಮ್ಮ ಪತ್ನಿಯರಿಂದ ಮಾರಾಟ ಮಾಡಿಸುತ್ತಿದ್ದರೆನ್ನಲಾಗಿದೆ.
ಆಯುಕ್ತ ಬೋರಸೆ, ಅಪರಾಧ ಡಿಸಿಪಿ ವಿಜಯಕುಮಾರ ತಳವಾರ, ಸಿಸಿಬಿ ಎಸಿಪಿ ಶಿವಪ್ರಕಾಶ ನಾಯಕ ಮಾರ್ಗದರ್ಶನದಲ್ಲಿ ಇನ್ಸಪೆಕ್ಟರ್ಗಳಾದ ವಿಜಯ ಕಾಂಬಳೆ, ದಯಾನಂದ, ಸಿಸಿಬಿ ಸಿಬ್ಬಂದಿಗಳಾದ ಸುನೀಲ ಪಾಂಡೆ, ಮಲ್ಲಿಕಾರ್ಜುನ ಧನಿಗೊಂಡ, ನಿಂಗನಗೌಡ ಪಾಟೀಲ, ಮುತ್ತಣ್ಣ ಪಾಟೀಲ, ಉಮೇಶ ಹೆದ್ದೇರಿ, ಶಂಭು, ಮಾರುತಿ ಭಜಂತ್ರಿ, ಜಂತ್ಲಿ, ಅಕ್ಕೂರ, ದಾನೇಶ ಮಾಂಗ, ಬಡಿಗೇರ ಕಾರ್ಯಾಚರಣೆ ನಡೆಸಿದ್ದರು.
ಮಾದಕ ವಸ್ತುಗಳ ಮಾರಾಟ, ಸಾಗಾಟ ಮತ್ತು ಬಳಕೆಯನ್ನು ತಡೆಗಟ್ಟಲು ಪೊಲೀಸರು ವಿಶೇಷ ನಿಗಾ ವಹಿಸಿದ್ದು, ವಿವಿಧ ಅನುಮಾನಾಸ್ಪದ ಸ್ಥಳಗಳ ಮೇಲೆ ನಿರಂತರ ದಾಳಿ ನಡೆಸುವ ಮೂಲಕ ಮಾದಕ ದ್ರವ್ಯ ಜಾಲದ ವಿರುದ್ಧ ಸಮರ ಸಾರಿದ್ದಾರೆ. ಮಾದಕ ದ್ರವ್ಯಗಳ ಅಕ್ರಮ ದಂಧೆಯಲ್ಲಿ ತೊಡಗಿರುವವರನ್ನು ಪತ್ತೆಹಚ್ಚಲು ಪೊಲೀಸರು ಗುಪ್ತಚರ ಮಾಹಿತಿ ಸಂಗ್ರಹಣೆ, ವಿಶೇಷ ತನಿಖೆ ಹಾಗೂ ತೀವ್ರ ತಪಾಸಣಾ ಕಾರ್ಯಾಚರಣೆಗಳನ್ನು ಕೈಗೊಂಡಿದ್ದಾರೆ. ನಗರದ ವಿವಿಧ ಪ್ರದೇಶಗಳಲ್ಲಿ ಅನುಮಾನಾಸ್ಪದ ಚಟುವಟಿಕೆಗಳ ಮೇಲೆ ನಿಗಾ ಇಟ್ಟು, ಮಾದಕ ವಸ್ತುಗಳ ಮಾರಾಟ ಮತ್ತು ಪೂರೈಕೆ ಜಾಲವನ್ನು ಪತ್ತೆಹಚ್ಚಲು ವಿಶೇಷ ಸಿಸಿಪಿ ತಂಡಗಳು ಕಾರ್ಯಪ್ರವೃತ್ತವಾಗಿವೆ. ಎನ್ಡಿಪಿಎಸ್ (ಮಾದಕ ದ್ರವ್ಯಗಳು ಮತ್ತು ಮನೋವಿಕಾರಕ ವಸ್ತುಗಳ ನಿಯಂತ್ರಣ) ಕಾಯ್ದೆಯಡಿ ಕಾನೂನುಬದ್ಧ ಕ್ರಮಗಳನ್ನು ಕೈಗೊಳ್ಳುತ್ತಿರುವ ಪೊಲೀಸರು, ಮಾದಕ ವಸ್ತುಗಳ ಅಕ್ರಮ ದಂಧೆಯಲ್ಲಿ ತೊಡಗಿರುವವರಿಗೆ ಈಗಾಗಲೇ ಆಯುಕ್ತ ಭೂಷಣ ಬೋರಸೆ ಕಠಿಣ ಎಚ್ಚರಿಕೆ ನೀಡಿದ್ದು, ಹುಬ್ಬಳ್ಳಿ–ಧಾರವಾಡ ಅವಳಿ ನಗರಗಳನ್ನು ಮಾದಕ ದ್ರವ್ಯ ಮುಕ್ತವಾಗಿಸುವ ನಿಟ್ಟಿನಲ್ಲಿ ಪೊಲೀಸರು ಕೈಗೊಂಡಿರುವ ಕಟ್ಟುನಿಟ್ಟಿನ ಕ್ರಮಗಳು ಮಹತ್ವ ಪಡೆದಿವೆ.




