ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರದ ನೂತನ ಪೊಲೀಸ್ ಆಯುಕ್ತರಾದ ಭೂಷಣ ಬೊರಸೆ ಅವರು ಅಧಿಕಾರ ವಹಿಸಿಕೊಂಡ ಮೇಲೆ ನೇರವಾಗಿ ಸ್ವತಃ ಫೀಲ್ಡ್ಗೆ ಇಳಿದಿದ್ದು, ನಿನ್ನೆ ಶನಿವಾರ ತಡರಾತ್ರಿ ಗೋಕುಲ ರಸ್ತೆಯಲ್ಲಿರುವ ಅವಧಿ ಮೀರಿ ತೆರೆದುಕೊಂಡಿದ್ದ ಪಬ್, ಬಾರ್ ಅಂಗಡಿಗಳ ಮೇಲೆ ದಾಳಿ ನಡೆಸಿ, ಮಾಲಿಕರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಗೋಕುಲ ಪೊಲೀಸ್ ಠಾಣೆಗೆ ಕೂಗಳತೆ ದೂರದಲ್ಲಿರುವ ಐಸ್ಕ್ಯೂಬ್ ಮತ್ತು ಬಾಂಬೆ 63 ಮೇಲೆ ದಾಳಿ ಮಾಡಿದ ಆಯುಕ್ತರು, ರಾತ್ರಿ 11:30ರ ನಂತರ ಅಂಗಡಿ ತೆರೆಯುವಂತಿಲ್ಲ. ನಿಯಮ ಮೀರಿ ನಡೆದು ಕೊಳ್ಳಬೇಡಿ. ಅವಧಿಯೊಳಗೆ ವಹಿವಾಟು ಮುಗಿಸಬೇಕು. ಇಲ್ಲವಾದರೆ ಸೂಕ್ತ ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಅಂಗಡಿಗಳ ಮಾಲಿಕರಿಗೆ ಎಚ್ಚರಿಕೆ ನೀಡಿದ್ದಾರೆ.
ದಾಳಿ ಸಂದರ್ಭದಲ್ಲಿ ಡಿಸಿಪಿ ಶ್ರುತಿ ಎನ್.ಎಸ್., ಎಸಿಪಿ ಶಿವಾನಂದ ಚಲವಾದಿ ಹಾಗೂ ಇತರೆ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಇದ್ದರು. ರಾಜಾರೋಷವಾಗಿ ಬೆಳಗಿನ ಜಾವದವರೆಗೆ ತೆರೆದು ಇರುತ್ತಿದ್ದ ಐಸ್ ಕ್ಯೂಬ್ ಮುಂತಾದ ಹೊಟೆಲ್ ಗಳಿಗೆ ಮೊದಲ ಬಾರಿಗೆ ಆಯುಕ್ತರು ಬಿಸಿ ಮುಟ್ಟಿಸಿದ್ದಾರೆ.
*ಆಂಟಿ ಸ್ಟಾಬಿಂಗ್ ಸ್ಕ್ವಾಡ್*

ಅವಳಿನಗರದ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಆಂಟಿ ಸ್ಟಾಬಿಂಗ್ ಸ್ಕ್ವಾಡ್ಗಳನ್ನು ಆರಂಭಿಸಲಾಗಿದೆ.
ಈ ತಂಡ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಮತ್ತು ಇತರ ಸಾರ್ವಜನಿಕ ಸ್ಥಳಗಳಲ್ಲಿ ಜನರು ಯಾವುದೇ ಮಾರಕಾಸ್ತ್ರಗಳನ್ನು ಹೊಂದಿದ್ದಾರೆಯೇ ಎಂದು ಪರಿಶೀಲಿಸುತ್ತಾರೆ. ಒಂದು ವೇಳೆ ಕಂಡುಬಂದರೆ, ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುವುದು.
ಇಂದು ಸುಮಾರು 215 ವಾಹನಗಳನ್ನು ಪರಿಶೀಲಿಸಲಾಗಿದೆ.
*ಅಪರಾಧಿಗಳ ವಿರುದ್ಧ ಮುಲಾಜಿಲ್ಲದೆ ಕ್ರಮ*
ಕಳೆದ ಎರಡು ದಿನಗಳಲ್ಲಿ ನಾನು ಪೊಲೀಸ್ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ಹಿನ್ನೆಲೆಯಲ್ಲಿ 200ಕ್ಕೂ ಹೆಚ್ಚು ನಾಗರಿಕರು ಪೊಲೀಸ್ ಆಯುಕ್ತರ ಕಚೇರಿಗೆ ಆಗಮಿಸಿ ಶುಭ ಕೋರಿದ್ದಾರೆ. ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರಿಂದ, ಅಪರಾಧ ಹಿನ್ನೆಲೆ ಹೊಂದಿರುವ ಕೆಲವು ವ್ಯಕ್ತಿಗಳು ಸಹ ಭೇಟಿ ನೀಡಿ ಛಾಯಾಚಿತ್ರ ತೆಗೆಸಿಕೊಂಡಿರುವುದು ನಂತರ ಗಮನಕ್ಕೆ ಬಂದಿದೆ.

ಅಂತಹ ವ್ಯಕ್ತಿಗಳ ಭೇಟಿ ಅಥವಾ ಅವರೊಂದಿಗೆ ತೆಗೆಸಿಕೊಂಡಿರುವ ಛಾಯಾಚಿತ್ರಗಳನ್ನು ಪೊಲೀಸ್ ಇಲಾಖೆಯೊಂದಿಗಿನ ಅವರ ಯಾವುದೇ ರೀತಿಯ ಸಂಬಂಧವೆಂದು ಅರ್ಥೈಸಬಾರದು ಎಂದು ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹುಬ್ಬಳ್ಳಿ-ಧಾರವಾಡ ನಗರ ಪೊಲೀಸರು ಅಪರಾಧ ಹಾಗೂ ಅಪರಾಧಿಗಳ ವಿರುದ್ಧ ಯಾವುದೇ ಮುಲಾಜಿಲ್ಲದೆ, ನಿಷ್ಪಕ್ಷಪಾತವಾಗಿ ಮತ್ತು ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲು ಬದ್ಧರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.




