ಬೆಂಗಳೂರು: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಆಡಳಿತ ಮಂಡಳಿಗೆ ಮಂಗಳವಾರ ಚುನಾವಣೆ ನಡೆಯಿತು.
ಜಿಲ್ಲಾ ಸಹಕಾರ ಯೂನಿಯನ್ ಕ್ಷೇತ್ರದಿಂದ ಮೈಸೂರು ವಿಭಾಗದಿಂದ ಶಾಸಕ ಹಾಗೂ ಹಾಲಿ ಅಧ್ಯಕ್ಷ ಜಿ.ಟಿ.ದೇವೇಗೌಡ, ಬಿ.ಸಿ. ಲೋಕಪ್ಪಗೌಡ, ಶಶಿಕುಮಾರ್ ರೈ ಬಿ., ಬೆಂಗಳೂರು ವಿಭಾಗದಿಂದ ಹೆಚ್.ಎನ್. ಅಶೋಕ, ಬಿ.ಕೆ. ಶಿವಕುಮಾರ್, ಕೆ.ಪಿ. ಚನ್ನಬೈರೇಗೌಡ, ಕೆ. ಸುನೀಲ, ಬೆಳಗಾವಿ ವಿಭಾಗದಿಂದ ಜಗದೀಶ್ ಎಂ. ಕವಟಗಿಮಠ, ಕಾಶಿಲಿಂಗ ಬಿ. ಹುಡೇದ, ಕೃಷ್ಣಗೌಡ ಪಾಟೀಲ, ಕಲ್ಬುರ್ಗಿ ವಿಭಾಗದಿಂದ ಜೆ.ಎಂ. ಶಿವಪ್ರಸಾದ, ಅಭಿಷೇಕ ಆರ್. ಪಾಟೀಲ, ವಿಶ್ವನಾಥರೆಡ್ಡಿ ಎಸ್. ದರ್ಶನಾಪೂರ ಹಾಗೂ ಇತರೆ ಸಹಕಾರ ಸಂಸ್ಥೆಗಳ ಕ್ಷೇತ್ರದಿಂದ ಮಾಜಿ ಸಚಿವ ವೆಂಕಟರಾವ ನಾಡಗೌಡ ಅವರು ಚುನಾಯಿತರಾಗಿದ್ದಾರೆ ಎಂದು ವ್ಯವಸ್ಥಾಪಕ ನಿರ್ದೇಶಕ ಕೆ.ಎಸ್.ನವೀನ ತಿಳಿಸಿದ್ದಾರೆ.

ಸಹಕಾರ ವಲಯದ ಪ್ರಮುಖ ಮತ್ತು ಪ್ರತಿಷ್ಠೆಯ ಮಹಾಮಂಡಳದ 14 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಮತ್ತು ಸಹಕಾರ ಸಚಿವ ಲಕ್ಷ್ಮಣ ಸವದಿ ಅವರು ಖುದ್ದು ಆಸಕ್ತಿ ವಹಿಸಿ ತಮ್ಮ ಬೆಂಬಲಿಗರನ್ನು ಆಯ್ಕೆ ಮಾಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಮೂಲಕ ಸಿಎಂ ಶಿವಕುಮಾರ ಅವರು ಸಹಕಾರ ವಲಯದಲ್ಲಿ ತಮ್ಮ ಹಿಡಿತ ಬಿಗಿಗೊಳಿಸಿಕೊಂಡಿದ್ದು ಗಮನಾರ್ಹವಾಗಿದೆ.
ಒಟ್ಟು 21 ನಿರ್ದೇಶಕರಿರುವ ಮಹಾಂಡಳದ ನೂತನ ಅಧ್ಯಕ್ಷರ ಆಯ್ಕೆ ಸೆ.14 ರಂದು ಜರುಗಲಿದ್ದು, ಹಾಲಿ ಅಧ್ಯಕ್ಷ ಜಿ.ಟಿ.ದೇವೇಗೌಡ ಅವರು ಪುನಃ ಅಧ್ಯಕ್ಷರಾಗುವ ಸಾಧ್ಯತೆಯಿದೆ.
ಆದರೆ ಸಹಕಾರ ಕ್ಷೇತ್ರದ ಉಗಮಕ್ಕೆ ಕಾರಣವಾದ ಅವಿಭಕ್ತ ಧಾರವಾಡ ಜಿಲ್ಲೆಯ ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಯವರು ಮಹಾಮಂಡಳದ ಆಡಳಿತ ಮಂಡಳಿಯಲ್ಲಿ ಅವಕಾಶ ವಂಚಿತರಾಗಿದ್ದಾರೆ.



