ಅಂತಿಮವಾಗಿ ಪೂರ್ವದ ಪಾಲಾದ ಪ್ರಥಮ ಪ್ರಜೆ ಪಟ್ಟ*
ಹುಬ್ಬಳ್ಳಿ : ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆಯ ಇಪ್ಪತ್ತೈದನೇ ಅವಧಿಯ ಮೇಯರ್ ಪಟ್ಟ ಕೊನೆಗೂ ಹುಬ್ಬಳ್ಳಿ ಧಾರವಾಡ ಪೂರ್ವ ಕ್ಷೇತ್ರದ ಪಾಲಾಗಿದ್ದು, ಈ ಹಿಂದೆ 69ನೇ ವಾರ್ಡಿನಿಂದ ಗೆದ್ದ ಉಪ ಮೇಯರ್ ಆಗಿಯೂ ಕಾರ್ಯ ನಿರ್ವಹಿಸಿರುವ ದುರ್ಗಮ್ಮ ಶಶಿಕಾಂತ ಬಿಜವಾಡ ಗೆಲುವು ನಿಶ್ಚಿತವಾಗಿದೆ. ಉಪ ಮೇಯರ್ ಆಗಿ ಒಂಬತ್ತನೆ ವಾರ್ಡಿನಿಂದ ಗೆಲುವು ಸಾಧಿಸಿರುವ ರತ್ನಾಬಾಯಿ ನಾಝರೆ ಸಹ ವಿಜಯ ಸಾಧಿಸುವುದು ನಿಕ್ಕಿಯಾಗಿದೆ.

82ಸದಸ್ಯ ಬಲ ಹೊಂದಿರುವ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಲ್ಲಿ 42 ಸದಸ್ಯರ ಬಲ ಹೊಂದಿರುವ ಬಿಜೆಪಿಗೆ ಜನಪ್ರತಿನಿಧಿಗಳ ಮತಗಳೂ ಸೇರಿ 51 ಆಗಲಿದ್ದು ಅವರೇ ಅಧಿಕಾರಕ್ಕೇರುವುದು ಖಚಿತವಾಗಿದೆ.
ಮೇಯರ್ ಸ್ಥಾನ ಈ ಬಾರಿ ಪರಿಶಿಷ್ಠ ಮಹಿಳೆಗೆ ಮೀಸಲಾದ ಹಿನ್ನೆಲೆಯಲ್ಲಿ ಪೂರ್ವ ಕ್ಷೇತ್ರ ವ್ಯಾಪ್ತಿಯ 69ನೇ ವಾರ್ಡಿನಿಂದ ಗೆದ್ದ ದುರ್ಗಮ್ಮ ಬಿಜವಾಡ ಹಾಗೂ ಸೆಂಟ್ರಲ್ ವ್ಯಾಪ್ತಿಯ 56ನೇ ವಾರ್ಡಿನಿಂದ ಗೆದ್ದ ಚಂದ್ರಿಕಾ ಮೇಸ್ತ್ರಿ ಇಬ್ಬರ ಮಧ್ಯೆಯೇ ಪೈಪೋಟಿಯಿದ್ದು , ಇಬ್ಬರಲ್ಲೊಬ್ಬರು ಪ್ರಥಮ ಪ್ರಜೆಯಾಗುವುದು ನಿಕ್ಕಿಯಾಗಿತ್ತು. ಈ ಇಬ್ಬರೂ ಪಕ್ಷೇತರರಾಗಿ ಗೆದ್ದು ಬಿಜೆಪಿ ಸಹ ಸದಸ್ಯರಾದವರಾಗಿದ್ದಾರೆ ಎಂಬುದು ವಿಶೇಷವಾಗಿತ್ತು.
ನಿನ್ನೆ ರಾತ್ರಿ ನಡೆದ ಬಿಜೆಪಿ ಕೋರ ಕಮೀಟಿ ಸಭೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಶಾಸಕರುಗಳಾದ ಮಹೇಶ ಟೆಂಗಿನಕಾಯಿ, ಅರವಿಂದ ಬೆಲ್ಲದ, ಪ್ರದೀಪ ಶೆಟ್ಟರ್, ಎಸ್.ವಿ.ಸಂಕನೂರ,ರಾಜ್ಯಸಭಾ ಸದಸ್ಯ ಮಾ.ನಾಗರಾಜ ಮುಂತಾದವರು ಪಾಲ್ಗೊಂಡಿದ್ದರಾದರೂ ತಡರಾತ್ರಿಯವರೆಗೂ ಯಾವುದೇ ಇತ್ಯರ್ಥವಾಗದೆ ಇಂದು ಬೆಳಿಗ್ಗೆ ಬಿಜೆಪಿ ಮುಖಂಡರು ಮೇಯರ್ ಸ್ಥಾನಕ್ಕೆ ಮತ್ತು ಉಪ ಮೇಯರ್ ಸ್ಥಾನಕ್ಕೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದರು.
ಪ್ರಸಕ್ತ ಐದು ವರ್ಷಗಳ ಅವಧಿಯಲ್ಲಿ ಅರವಿಂದ ಬೆಲ್ಲದ ಪ್ರತಿನಿಧಿಸುವ ಹುಬ್ಬಳ್ಳಿ ಧಾರವಾಡ ಪಶ್ಚಿಮ ಕ್ಷೇತ್ರಕ್ಕೆ ಎರಡು ಬಾರಿ ದಕ್ಕಿದ್ದು (ರಾಮಣ್ಣ ಬಡಿಗೇರ, ಜ್ಯೋತಿ ಪಾಟೀಲ), ಮಹೇಶ ಟೆಂಗಿನಕಾಯಿಯವರ ಸೆಂಟ್ರಲ್ಗೆ ಒಮ್ಮೆ (ವೀಣಾ ಭಾರದ್ವಾಡ) ಮತ್ತು ಧಾರವಾಡ ಗ್ರಾಮೀಣದಿಂದ ಒಮ್ಮೆ (ಈರೇಶ ಅಂಚಟಗೇರಿ) ಮೇಯರ್ ಕುರ್ಚಿ ಅಲಂಕರಿಸಿದ್ದು ಹುಬ್ಬಳ್ಳಿ ಧಾರವಾಡ ಪೂರ್ವ ಕ್ಷೇತ್ರಕ್ಕೆ ಮಾತ್ರ ಒಮ್ಮೆಯೂ ನೀಡಿಲ್ಲವಾಗಿದೆ ಎಂಬ ವಿಷಯವೇ ಮುಂಚೂಣಿಗೆ ಬಂದಿತಲ್ಲದೇ ಮುಂದಿನ 2028ರ ಚುನಾವಣೆಗೆ ಪಕ್ಷಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಎಲ್ಲರೂ ಒಮ್ಮತದಿಂದ ದುರ್ಗಮ್ಮ ಬಿಜವಾಡರನ್ನು ಅಂತಿಮಗೊಳಿಸಿದ್ದು ಧಾರವಾಡದ ಒಂಬತ್ತನೇ ವಾರ್ಡಿನ ಸದಸ್ಯೆ ರತ್ನಾಬಾಯಿ ನಾಝರೆ ಉಪಮೇಯರ್ ಹುದ್ದೆಗೆ ಅಖೈರಾದರು.
ಮಾಜಿ ಮೇಯರ್ ವೆಂಕಟೇಶ ಮೇಸ್ತ್ರಿ ಯವರು ಈ ಹಿಂದೆ ಕೆಜೆಪಿ ಸಹಿತ ಬೇರೆ ಪಕ್ಷಗಳಿಗೆ ಹೋಗಿ ಬಂದುದು ಅವರ ಪತ್ನಿಯ ಹಿನ್ನೆಡೆಗೆ ಕಾರಣವಾಯಿತಲ್ಲದೇ ಸೆಂಟ್ರಲ್ಗೆ ಈ ಬಾರಿ ನೀಡಿದಲ್ಲಿ ಎರಡನೆ ಬಾರಿ ಆಗುತ್ತದೆ. ಪೂರ್ವಕ್ಕೆ ಒಮ್ಮೆಯೂ ದಕ್ಕದೆ ಹೋದುದು ಆ ಕ್ಷೇತ್ರಕ್ಕೆ ಹೋಗಲು ಕಾರಣವಾಯಿತು.
ಕಾಂಗ್ರೆಸ್ನಿಂದ 20ನೇ ವಾರ್ಡಿನ ಕಾರ್ಪೊರೇಟರ್ ಕವಿತಾ ಕಬ್ಬೇರ ಮೇಯರ್ ಹುದ್ದೆಗೆ ಹಾಗೂ ಆರನೇ ವಾರ್ಡಿನ ಸದಸ್ಯೆ ದಿಲ್ಶಾದಬೇಗಂ ನದಾಫ್ ಉಪ ಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲಿದ್ದಾರಾದರೂ ಅವರಿಗೆ ಬಹುಮತವಿಲ್ಲವಾಗಿದ್ದು ಮತ್ತೊಮ್ಮೆ ಕೇಸರಿ ಬಾವುಟ ನಿಶ್ಚಿತವಾಗಿದೆ.
ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿದ್ದು ಮಧ್ಯಾಹ್ನ ಎರಡರ ಸುಮಾರಿಗೆ ಅಧಿಕೃತ ಫಲಿತಾಂಶ ಹೊರ ಬೀಳಲಿದೆ.




