ಹುಬ್ಬಳ್ಳಿ : ಡಿ.ಕೆ. ಶಿವಕುಮಾರ ಸಂಪುಟದಲ್ಲಿ ಸಚಿವ ಸ್ಥಾನದಿಂದ ವಂಚಿತರಾದ ಹಾನಗಲ್ ಕ್ಷೇತ್ರದ ಶಾಸಕರಾದ ಹುಬ್ಬಳ್ಳಿ ಮೂಲದವರೇ ಆದ ಶ್ರೀನಿವಾಸ ಮಾನೆ ಕರ್ನಾಟಕ ಗೃಹ ಮಂಡಳಿಯ ನೂತನ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.


ಆರ್.ವಿ.ದೇಶಪಾಂಡೆ ಅವರನ್ನುಆಡಳಿತ ಸುಧಾರಣಾ ಆಯೋಗಕ್ಕೆ ಹಾಗೂ ಮಂಕಾಳ ವೈದ್ಯರಿಗೆ ಉಪ ಸಭಾಧ್ಯಕ್ಷ ಸ್ಥಾನ ನೀಡಿದ ಬೆನ್ನ ಹಿಂದೆಯೆ ತಮ್ಮ ಕಟ್ಟಾ ಬೆಂಬಲಿಗರಾದ ಮಾನೆಯವರಿಗೆ ಗೃಹಮಂಡಳಿಯ ಮಹತ್ವದ ಅಧ್ಯಕ್ಷ ಸ್ಥಾನವನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಇಂದು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ಸಚಿವ ಸಂಪುಟಕ್ಕೆ ಸೇರ್ಪಡೆ ವಿಚಾರದಲ್ಲಿ ಹಿರಿತನ ಹೊಂದಿದ್ದ ಮಾನೆಯವರು ಮರಾಠಾ ಕೋಟಾದಡಿ ಅವರ ಹೆಸರು ಮುಂಚೂಣಿಯಲ್ಲಿತ್ತು. ಅಲ್ಲದೇ ಅವರ ಹೆಸರು ಅಖೈರಾಗಿದೆ ಎಂಬ ವದಂತಿಗಳು ಹಬ್ಬಿದ್ದವು. ಆದರೆ ಅಂತಿಮವಾಗಿ ಸಂತೋಷ ಲಾಡ್ ಅವರಿಗೆ ಮಂತ್ರಿ ಪದವಿ ಎರಡನೆ ಹಂತದಲ್ಲಿ ದೊರಕಿದ್ದರಿಂದ ಮಾನೆ ಸ್ಥಾನ ವಂಚಿತರಾಗಬೇಕಾಯಿತು.
ಪರಿಷತ್ ಸದಸ್ಯರಾಗಿ ಅನೇಕ ರಚನಾತ್ಮಕ ಕಾರ್ಯಗಳನ್ನು ಮಾಡಿ ತದನಂತರ ಹಾನಗಲ್ ಕ್ಷೇತ್ರದಿಂದ ಆಯ್ಕೆಯಾಗಿದ್ದು ಅಲ್ಲಿಯೂ ಕೋವಿಡ್ ಕಾಲ ಘಟ್ಟದಲ್ಲಿ ಇವರು ಮಾಡಿದ ಕಾರ್ಯಗಳು ಜನಪ್ರೀಯತೆ ತಂದಿಕೊಟ್ಟಿದ್ದವೆ. ರಾಹುಲ್ ಗಾಂಧಿ ಬಳಗದಲ್ಲಿ ನಿಕಟವರ್ತಿಯಾಗಿರುವ ಮಾನೆಯವರು ಹಾನಗಲ್ ಕ್ಷೇತ್ರದಾದ್ಯಂತ ಅನೇಕ ಅಭಿವೃದ್ದಿ ಯೋಜನೆಗಳನ್ನು ಜಾರಿಗೊಳಿಸಿ ಎಲ್ಲರಿಂದಲೂ ಜನಸಾಮಾನ್ಯರ ಶಾಸಕ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.



