ಹೊಸದಿಲ್ಲಿ: ಕಾಂಕ್ರೋಚ್ ಜನತಾ ಪಕ್ಷದ ನೇತೃತ್ವದಲ್ಲಿ ಕಳೆದ ಒಂದು ತಿಂಗಳಿನಿಂದ ದೇಶಾದ್ಯಂತ ನಡೆಯುತ್ತಿರುವ ನೀಟ್ (NEET) ಪೇಪರ್ ಸೋರಿಕೆ ಮತ್ತು ಪರೀಕ್ಷಾ ಅಕ್ರಮಗಳ ವಿರುದ್ಧದ ವಿದ್ಯಾರ್ಥಿ ಹೋರಾಟಕ್ಕೆ ಕೊನೆಗೂ ಕೇಂದ್ರ ಸರ್ಕಾರ ಮಂಡಿಯೂರಿದೆ.

ದೆಹಲಿಯ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಹೋರಾಟಕ್ಕೆ ಮಣಿದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಶನಿವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಪ್ರಧಾನ್ ಅವರು ತಮ್ಮ ರಾಜೀನಾಮೆ ಪತ್ರವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ರವಾನಿಸಿದ್ದು,
ಕೇಂದ್ರ ಸರ್ಕಾರ ಹಾಗೂ ‘ಕಾಕ್ರೋಚ್ ಜನತಾ ಪಾರ್ಟಿ’ ನಡುವೆ ನಡೆಯಬೇಕಿದ್ದ ಮೂರನೇ ಹಂತದ ಮಾತುಕತೆಗೆ ಕೆಲವೇ ಗಂಟೆಗಳ ಮೊದಲು ಧರ್ಮೇಂದ್ರ ಪ್ರಧಾನ್ ಅವರು ತಮ್ಮ ಸಾಮಾಜಿಕ ಜಾಲತಾಣ ‘X’ (ಟ್ವಿಟರ್) ಖಾತೆಯಲ್ಲಿ ರಾಜೀನಾಮೆ ನಿರ್ಧಾರವನ್ನು ಪ್ರಕಟಿಸಿದ್ದಾರೆ.
ಯುವಶಕ್ತಿ ಗೊಂದಲದ ಬಲೆಯಲ್ಲಿ ಸಿಲುಕಿಕೊಳ್ಳಲು ನಾವು ಬಿಡುವುದಿಲ್ಲ ಎಂಬುದು ನನ್ನ ದೃಢ ಸಂಕಲ್ಪ. ಜಂತರ್ ಮಂತರ್ ಹಾಗೂ ದೇಶಾದ್ಯಂತ ಉದ್ಭವಿಸಿರುವ ಪರಿಸ್ಥಿತಿಯ ಲಾಭ ತೆಗೆದುಕೊಳ್ಳಲು ರಾಷ್ಟ್ರವಿರೋಧಿ ಶಕ್ತಿಗಳಿಗೆ ಅವಕಾಶ ಸಿಗಬಾರದು, ದೇಶದ ಐಕ್ಯತೆ ಅಖಂಡವಾಗಿರಬೇಕು, ಭಾರತದ ಒಬ್ಬನೇ ಒಬ್ಬ ವಿದ್ಯಾರ್ಥಿಯ ಭವಿಷ್ಯವೂ ಕಾನೂನು ಸಂಕಷ್ಟಗಳಲ್ಲಿ ಸಿಲುಕಬಾರದು ಮತ್ತು ನಮ್ಮ ಮಕ್ಕಳು ತಮ್ಮ ಸಮಯವನ್ನು ಅಭ್ಯಾಸಕ್ಕೆ ವಿನಿಯೋಗಿಸಿ ವೃತ್ತಿಜೀವನ ರೂಪಿಸಿಕೊಳ್ಳುವುದರತ್ತ ಗಮನಹರಿಸಬೇಕು ಎಂಬುದನ್ನು ಮನಸ್ಸಿನಲ್ಲಿಟ್ಟುಕೊಂಡು ನಾನು ಗೌರವಾನ್ವಿತ ಪ್ರಧಾನಿಯವರಿಗೆ ರಾಜೀನಾಮೆ ಸಲ್ಲಿಸಿದ್ದೇನೆ” ಎಂದು ಅವರು ತಿಳಿಸಿದ್ದಾರೆ. ಹೋರಾಟಗಾರರ ಮುಖ್ಯ ಬೇಡಿಕೆಯೇ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯಾಗಿತ್ತು. ಸಚಿವರ ರಾಜೀನಾಮೆ ಸುದ್ದಿ ತಿಳಿಯುತ್ತಿದ್ದಂತೆಯೇ ಜಂತರ್ ಮಂತರ್ನಲ್ಲಿ ಸಂಭ್ರಮ ಮುಗಿಲು ಮುಟ್ಟಿದೆಯಾದರೂ ಪ್ರತಿಭಟನೆ ನಿಲ್ಲುವುದಿಲ್ಲ ಎಂದು ಸಿಜೆಪಿ ಹೇಳಿದೆ.
ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ತಲಾ ಒಂದು ಕೋಟಿ ಪರಿಹಾರ, ಪ್ರತಿಭಟನಾಕಾರರ ಮೇಲೆ ಶಿಸ್ತುಕ್ರಮವಿಲ್ಲ, ದಿಲ್ಲಿ ಪೊಲೀಸರ ಕ್ಷಮೆಗೆ ಪಟ್ಟು ಹಿಡಿದಿದೆ.



