*ಮ್ಯಾಟ್ ಸಿಸ್ಟಂ ನಲ್ಲಿ ಇಸ್ಪೀಟ್ ಜೂಜಾಟ – ಮತ್ತಿಬ್ಬರು ಪ್ರಮುಖರಾಗಿ ಹುಡುಕಾಟ : 40 ಸಾವಿರ ನಗದು ಜಪ್ತಿ* *ಗೋಕುಲ ಠಾಣೆ ಪೊಲೀಸರ ಭರ್ಜರಿ ಬೇಟೆ*
ಹುಬ್ಬಳ್ಳಿ : ಗೋವಾದಲ್ಲಿ ಹುಬ್ಬಳ್ಳಿಯ ಹಲವರು ಕ್ಯಾಸಿನೋ ನಡೆಸುತ್ತಿರುವ ವಿಷಯ ಎಲ್ಲರಿಗೂ ಗೊತ್ತಿರುವ ಸಂಗತಿಯಾಗಿದ್ದು ಆದರೆ ಹುಬ್ಬಳ್ಳಿಯಲ್ಲಿಯೇ ನಡೆಸುತ್ತಿದ್ದ ಗೋವಾ ಮಾದರಿಯ ಕ್ಯಾಸಿನೊವೊಂದರ ಮೇಲೆ ಗೋಕುಲ ರಸ್ತೆಯ ಠಾಣೆಯ ಪೊಲೀಸರು ದಾಳಿ ನಡೆಸಿ ಹದಿನೈದು ಕುಳಗಳನ್ನು ಬಂಧಿಸಿ ಭರ್ಜರಿ ಬೇಟೆ ಆಡಿದ್ದಾರೆ.

ಹುಬ್ಬಳ್ಳಿಯ ಗಾಂಧಿನಗರದ ಎಂಐಜಿ ಎರಡರ ಮೂವತ್ತೇಳನೆ ನಂಬರಿನ ನಿವಾಸದಲ್ಲಿ ‘ಮ್ಯಾಟ್ ಸಿಸ್ಟಂ’ ನಲ್ಲಿ ಕಾಯಿನ್ ನೀಡಿ ಜೂಜಾಟ ನಡೆಸುತ್ತಿದ್ದ ಅರವಿಂದನಗರದ ಅಮಿತ್ ಪ್ರಕಾಶ್ ಲದವಾ ಸಹಿತ 15ಮಂದಿಯನ್ನು ಶನಿವಾರ ರಾತ್ರಿ ಬಂಧಿಸಿದ್ದು 40,400ರೂ.ನಗದು, ಇಸ್ಪೀಟ್ ಎಲೆಗಳು, ಮ್ಯಾಟ್ ಮುಂತಾದವುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಅಮಿತ್ ನ ಪಾಲುದಾರರಾದ ತುಳಜಪ್ಪ, ರಾಹುಲ್ ಎಂಬಿಬ್ಬರು ಪರಾರಿಯಾಗಿದ್ದಾರೆ. ವಿನಯ ಕಬಾಡೆ, ಸಾಯಿ ದಾನಿ, ಹನೀಫ್ ಬಿಜಾಪುರ, ಕೃಷ್ಣ ಪೋಳ, ಅಕ್ಷಯ ಕಾಮುಕರ, ನಿತಿನ್ ನಾಕೋಡ, ಸುರೇಶ್ ತಲಪಾಠಿ, ಸುಮಿತ್ ಮಿಸ್ಕಿನ್, ಗುರುಸಿದ್ಧಪ್ಪ ಶೆಲ್ಲಿ ಕೇರಿ, ಆದಿತ್ಯ ಹಬೀಬ್, ಅಸ್ಲಾಂ ಕಾಜಾಪಲ್ಲಿ, ಕಿಶನ್ ಲದವಾ, ರಾಜೇಶ್ ಮೋಟಕುರಿ, ಲೆನ್ನಿ ದಮ್ಮು, ರವಿ ಹಬೀಬ್ ಬಂಧಿಸಲ್ಪಟ್ಟವರು.
ಅಮಿತ್ ತಂಡ ಹುಬ್ಬಳ್ಳಿಯಲ್ಲಿ ಮೂರ್ನಾಲ್ಕು ಮನೆಗಳನ್ನು ಹಿಡಿದು ಗೋವಾ ಮಾದರಿ ಮ್ಯಾಟ್ ಸಿಸ್ಟಂ ಎಲೆ ತಟ್ಟುವ ಕಾಯಕ ನಡೆಸಿದ್ದು, ರಾತ್ರಿ ಗಸ್ತು ವೇಳೆ ಎಎಸ್ಐ ಎಸ್. ಟಿ. ಗೊಡಚಪ್ಪನವರ ತಂಡಕ್ಕೆ ಖಚಿತ ಮಾಹಿತಿ ಬಂದ ಹಿನ್ನೆಲೆ ಪ್ರತಿಷ್ಠಿತ ಗಾಂಧಿನಗರದ ಮನೆ ಮೇಲೆ ದಾಳಿ ನಡೆಸಿ ಹದಿನೈದು ಜನರನ್ನು ವಶಕ್ಕೆ ಪಡೆದರು. ಗೋಕುಲ ಪಿಎಸ್ಐ ಸಚಿನ್ ದಾಸರಡ್ಡಿ ತನಿಖೆ ನಡೆಸಿದ್ದಾರೆ.




