ಧಾರವಾಡ : ಆಕಸ್ಮಿಕ ಬೆಂಕಿ ಅವಘಡದಿಂದ 12 ಜಾನುವಾರುಗಳು ಸಾವನ್ನಪ್ಪಿದ ಪ್ರಕರಣ ತಾಲೂಕಿನ ಮುಮ್ಮಿಗಟ್ಟಿ ಗ್ರಾಮದಲ್ಲಿ ಸಂಭವಿಸಿದೆ.
ಗ್ರಾಮದ ಸಾಗರ ಅಸುಂಡಿ, ಧರಣೇಂದ್ರ ಅಸುಂಡಿ ಎಂಬುವವರ ಜಾನುವಾರುಗಳು ಸಾವನ್ನಪ್ಪಿವೆ.ಧರಣೇಂದ್ರ ಅಸುಂಡಿಯ ಎರಡು ಆಕಳು, ಮೂರು ಎಮ್ಮೆ, ಎರಡು ಆಕಳ ಕರು, ಸಾಗರ ಅಸುಂಡಿಯ ಮೂರು ಎಮ್ಮೆ, ಎರಡು ಎಮ್ಮೆ ಕರು ಸಾವನ್ನಪ್ಪಿದ್ದರೆ, ನಾಲ್ಕು ಟ್ರ್ಯಾಕ್ಟರ ಮೇವು, ಎರಡು ದನದ ಕೊಟ್ಟಿಗೆ ಸಂಪೂರ್ಣ ಬೆಂಕಿಗಾಹುತಿಯಾಗಿವೆ.

ಗ್ರಾಮದ ಹೊರವಲಯದಲ್ಲಿರುವ ದನದ ಕೊಟ್ಟಿಗೆಗೆ ಬೆಳಗಿನ ಜಾವ ಮೂರು ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಆಗ ಮನೆಯವರಿಗೆ ಗೊತ್ತಾಗಿದೆ. ಅಕ್ಕಪಕ್ಕದವರು ಸೇರಿ ಬೆಂಕಿ ನಂದಿಸಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಇದರಿಂದ ಸಾಗರ ಮತ್ತು ಧರಣೇಂದ್ರ ಅವರಿಗೆ ಲಕ್ಷಾಂತರ ರೂಪಾಯಿಗಳಷ್ಟು ಹಾನಿಯಾಗಿದೆ.
ಸ್ಥಳಕ್ಕೆ ತಹಶಿಲ್ದಾರ ಸಂತೋಷ ಕುಚನೂರ, ಕಂದಾಯ ನಿರೀಕ್ಷಕ ಗುರು ಸುಣಗಾರ, ಪಿಎಸ್ಐ ಪ್ರವೀಣ ಗಂಗೋಳ, ಪಂಚಾಯತ ಆಡಳಿತಾಧಿಕಾರಿ ಡಾ.ಆನಂದ ಪಡೆಪ್ಪನವರ, ಪಿಡಿಓ ಪರಶುರಾಮ ಕವಲೂರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




