ಯಲ್ಲಾಪುರ : ತೂಫಾನ್ ಕ್ರೂಸರ್ ಮತ್ತು ಲಾರಿಯ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಏಳು ಮಂದಿ ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ತಾಲೂಕಿನ ಅರಬೈಲ್ ಘಟ್ಟದ ಬಳಗಾರ್ ಸಮೀಪ ಅಂಕೋಲಾ–ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ 52ರಲ್ಲಿ ಗುರುವಾರ ಬೆಳಗಿನ ಜಾವ ನಡೆದಿದೆ.

ಮೃತರನ್ನು ಧಾರವಾಡದವರಾದ ಬಸವರಾಜ್ (48), ಅಭಿಷೇಕ್ ಈಶ್ವರ್ (28), ಅಕ್ಷಯ್ (26), ಅಭಿಷೇಕ್ (26), ಸಂಜೀವ ಅಂಗಡಿ (33) ಹಾಗೂ ಮಂಜುನಾಥ ಚುಲಕಿ ಎಂದು ಗುರುತಿಸಲಾಗಿದೆ.
ಚಾಲಕ ಸೇರಿ ಒಟ್ಟು ಒಂಬತ್ತು ಮಂದಿ ವಾಹನದಲ್ಲಿ ಪ್ರಯಾಣಿಸುತ್ತಿದ್ದು, ಅಪಘಾತದ ತೀವ್ರತೆಗೆ ತೂಫಾನ್ ವಾಹನ ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ. ರಕ್ಷಣಾ ಕಾರ್ಯಾಚರಣೆ ನಡೆಸಿ ವಾಹನದೊಳಗೆ ಸಿಲುಕಿದ್ದವರನ್ನು ಹೊರತೆಗೆಯಲಾಯಿತು. ಗಾಯಗೊಂಡ ಶಿವರಾಜ್ ದುರ್ಗಪ್ಪ ಮಡಿವಾಳ್, ಚೆನ್ನಬಸಯ್ಯ ಬಸಲಿಂಗಯ್ಯ ಸಂಪಗಾವ ಹಾಗೂ ಸಚಿನ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗಾಯಗೊಂಡವರ ಸ್ಥಿತಿಯೂ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಮೃತರೆಲ್ಲರೂ ಧಾರವಾಡ ಮೂಲದವರಾಗಿದ್ದು, ಸ್ವಿಗ್ಗಿ ಸಂಸ್ಥೆಯಲ್ಲಿ ಅರೆಕಾಲಿಕ ಕೆಲಸ ಮಾಡುತ್ತಿದ್ದವರು ಎನ್ನಲಾಗಿದೆ. ಗೆಳೆಯರ ಗುಂಪು ಧರ್ಮಸ್ಥಳ ಹಾಗೂ ಮಂಗಳೂರು ಕಡೆ ಪ್ರವಾಸಕ್ಕೆ ಹೊರಟಿದ್ದ ವೇಳೆ ಅರಬೈಲ್ ಘಟ್ಟದ ತಿರುವಿನಲ್ಲಿ ಎದುರಿನಿಂದ ಬಂದ ಲಾರಿ ಅವರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ.
ಘಟನಾ ಸ್ಥಳಕ್ಕೆ ಯಲ್ಲಾಪುರ ಠಾಣೆ ಪೊಲೀಸರು ಹಾಗೂ ಹೆದ್ದಾರಿ ಗಸ್ತು ಸಿಬ್ಬಂನುಜ್ಜುಗುಜ್ಜಾಗಿದ್ದ ವಾಹನದಿಂದ ಮೃತದೇಹಗಳನ್ನು ಹೊರತೆಗೆದಿದ್ದು ಇದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲ ಗಂಟೆ ಸಂಚಾರ ಅಸ್ತವ್ಯಸ್ತಗೊಂಡಿತ್ತು.



