*ಸಂಕನೂರ ಹ್ಯಾಟ್ರಿಕ್ ಬಹುತೇಕ ಖಚಿತ* : *ಸಿಎಂ ಶಿಷ್ಯ ಲಿಂಬಿಕಾಯಿ ತವರಿಗೆ ಹಿನ್ನಡೆ*
ಹುಬ್ಬಳ್ಳಿ : ತೀವ್ರ ಕುತೂಹಲ ಕೆರಳಿಸಿದ್ದ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಮುಂದುವರಿದಿದ್ದು,
ಮೂರನೇ ಸುತ್ತಿನ ಮುಕ್ತಾಯದ ನಂತರವೂ ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರ ಸುಮಾರು ಐದು ಸಾವಿರ ಮತಗಳ ಮುನ್ನಡೆ ಕಾಯ್ದುಕೊಂಡಿದ್ದು ಹ್ಯಾಟ್ರಿಕ್ ಬಹುತೇಕ ಖಚಿತವಾಗಿದೆ.
ಬದಲಾವಣೆಯ ‘ಪಂಚಮನಾದ’ವಾಗಿದೆ ಎಂಬ ಗುಸುಗುಸು ಮಧ್ಯೆಯೇ ಕೇಂದ್ರ ಸಚಿವರ ಕುದುರೆ ಸಂಕನೂರ ಗೆಲುವಿನ ನಾಗಾಲೋಟ ನಡೆಸಿದ್ದು, ಮುಖ್ಯಮಂತ್ರಿ ಶಿವಕುಮಾರ್ ಶಿಷ್ಯರಾದ ಲಿಂಬಿಕಾಯಿಯವರಿಗೆ ಹಿನ್ನಡೆ ಆಗಿದೆ.ಇನ್ನೂ ಮೂರು ಸುತ್ತಿನ ಎಣಿಕೆ ಇದ್ದರೂ ಫಲಿತಾಂಶ ಏರುಪೇರು ಆಗುವ ಸಾಧ್ಯತೆ ಕಡಿಮೆ.
ಮೂರನೇ ಸುತ್ತಿನ ಮತ ಎಣಿಕೆಯ ಒಟ್ಟು 14000 ಮತಗಳಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಸಂಕನೂರ 6191 ಮತಗಳು ಹಾಗೂ ಕಾಂಗ್ರೆಸ್ ಅಭ್ಯರ್ಥಿ ಮೋಹನ್ ಲಿಂಬಿಕಾಯಿ ಅವರು 4795 ಮತಗಳನ್ನು ಪಡೆದುಕೊಂಡಿರುತ್ತಾರೆ.

ಮೂರು ಸುತ್ತುಗಳಲ್ಲಿ ಎಣಿಕೆಯಾದ ಒಟ್ಟು 42001 ಮತಗಳಲ್ಲಿ ಸಂಕನೂರ ಎಸ್.ವಿ ಅವರು 18,811 ಮತಗಳನ್ನು ಮತ್ತು ಮೋಹನ್ ಲಿಂಬಿಕಾಯಿ ಅವರು 13886 ಮತಗಳನ್ನು ಪಡೆದುಕೊಂಡಿದ್ದು, ಎಸ್. ವಿ. ಸಂಕನೂರ ಅವರು 4925 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.
ಇದುವರೆಗೆ ಒಟ್ಟು ತಿರಸ್ಕೃತ ಮತಗಳು 5961 ಆಗಿವೆ. ಈ ಸಂಖ್ಯೆ ಕಳೆದ ಬಾರಿಗಿಂತ ಹೆಚ್ಚಾಗುವ ಸಾಧ್ಯತೆ ಇದೆ.

ಮೂರನೇ ಸುತ್ತಿನಲ್ಲಿ ಬಿಜೆಪಿ ಅಭ್ಯರ್ಥಿ 1,553 ಮತಗಳ ಮುನ್ನಡೆ ಸಾಧಿಸಿದ್ದಾರೆ.ಎರಡನೇ ಸುತ್ತಿನಲ್ಲಿ ಸಂಕನೂರ 6,161 ಮತಗಳನ್ನು ಹಾಗೂ ಲಿಂಬಿಕಾಯಿ ಅವರು 4,697 ಮತಗಳನ್ನು ಪಡೆದುಕೊಂಡಿರುತ್ತಾರೆ.

ಚುನಾವಣೆ ನಡೆದ ಇತರ ಮೂರು ಪರಿಷತ್ ಕ್ಷೇತ್ರಗಳಲ್ಲಿ ಸಹ ಬಿಜೆಪಿ, ಜೆಡಿಎಸ್ ಮೈತ್ರಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.ಆಡಳಿತಾರೂಢ ಕಾಂಗ್ರೆಸ್ಸಿಗೆ ಮುಖಭಂಗ ಆಗಿದೆ.



