ರಂಗೇರುತ್ತಿರುವ ಪ್ರಬುದ್ಧರ ಪಶ್ಚಿಮ – ಸುಧೀಂದ್ರ ದೇಶಪಾಂಡೆ ಮನವೊಲಿಕೆ ಯತ್ನ*/
*ಕಾಂಗ್ರೆಸ್ನಲ್ಲೂ ಲಿಂಬಿಕಾಯಿ ಪರ ಹರಿಪ್ರಸಾದ ಮಹತ್ವದ ಸಭೆ*
ಹುಬ್ಬಳ್ಳಿ : ಧಾರವಾಡ, ಗದಗ, ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳನ್ನೊಳಗೊಂಡ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣಾ ಅಖಾಡಾ ಬಹುತೇಕ ಅಂತಿಮಗೊಂಡಿದ್ದು, ಈ ಬಾರಿಯೂ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ಜಿದ್ದಾಜಿದ್ದಿ ನಿಶ್ಚಿತವಾಗಿದೆ. ನಾಮಪತ್ರ ಸಲ್ಲಿಕೆಗೆ ದಿ. 6ರಂದು ಅಂತಿಮ ದಿನವಾಗಿದ್ದು, ತದನಂತರ ಕಣ , ಪ್ರಚಾರ ರಂಗೇರಲಿದೆ.
ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ 2014, 2020ರಲ್ಲಿ ಎರಡು ಗೆಲುವು ಸಾಧಿಸಿರುವ ಗದಗ ಮೂಲದ ಎಸ್.ವಿ. ಸಂಕನೂರ ಮೂರನೇ ಬಾರಿಗೆ ಮತ್ತೆ ಬಿಜೆಪಿ ಹುರಿಯಾಳಾಗಿದ್ದು, ಹಲವು ಆಕಾಂಕ್ಷಿಗಳಿದ್ದರೂ ಅಂತಿಮವಾಗಿ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಹಿಂದಿನ ಎರಡು ಅವಧಿ ಸಂಕನೂರ ಅವರಿಗೆ ಟಿಕೆಟ್ ಕೊಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದವರು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಆಗಿದ್ದರು.
1994ರಿಂದ 2023ರ ವಿಧಾನಸಭೆ ಘೋಷಣೆವರೆಗೂ ಅವಿಭಾಜ್ಯ ಧಾರವಾಡ ಜಿಲ್ಲೆಯಲ್ಲಿ ಪ್ರಬಲ ಹಿಡಿತ ಹೊಂದಿದ್ದ ಶೆಟ್ಟರ್ ಸಂಕನೂರ ಟಿಕೆಟ್ ಕೊಡಿಸಿ ಗೆಲುವಿನಲ್ಲಿ ಬಹುಮುಖ್ಯ ಪಾತ್ರವಹಿಸಿದ್ದರು. 2020ರಲ್ಲಿ ಸಂಕನೂರ ಹುರಿಯಾಳತ್ವಕ್ಕೆ ವ್ಯಾಪಕ ವಿರೋಧ ವ್ಯಕ್ತವಾದಾಗಲೂ ಅವರ ಬೆನ್ನಿಗೆ ನಿಂತವರು ಇವರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ.
ಆದರೆ ಪ್ರಸಕ್ತ ಪಶ್ಚಿಮ ಪದವೀಧರ ಕ್ಷೇತ್ರದ ಮತದಾನ ಮುಂದಿನ 23ಕ್ಕೆ ನಡೆಯಲಿದ್ದು ಈಗಾಗಲೇ ವಿವಿಧ ಜಿಲ್ಲೆಗಳಲ್ಲಿ ಪ್ರಚಾರ ನಡೆದಿದ್ದರೂ ಇದುವರೆಗೆ ಸುಮಾರು ಮೂರು ದಶಕಗಳಿಗೂ ಹೆಚ್ಚು ಕಾಲ ಉತ್ತರ ಕರ್ನಾಟಕದ ‘ಶಕ್ತಿ ಕೇಂದ್ರ’ವೇ ಆಗಿದ್ದ ಅಲ್ಲದೇ ನೆರೆಯ ಗದಗ, ಹಾವೇರಿ ಜಿಲ್ಲೆಗಳಲ್ಲಿ ತಮ್ಮದೆ ವರ್ಚಸ್ಸು ಹೊಂದಿರುವ ಶೆಟ್ಟರ್ ಮಾತ್ರ ಎಲ್ಲಿಯೂ ಸಂಕನೂರ ಪರ ಬಹಿರಂಗವಾಗಿ ಕಾಣಿಸಿಕೊಂಡಿಲ್ಲವಾಗಿದೆ.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ನೇತ್ರತ್ವದಲ್ಲಿ ಶಾಸಕ ಮಹೇಶ ಟೆಂಗಿನಕಾಯಿ ಉಸ್ತುವಾರಿಯಲ್ಲಿ ಚುನಾವಣೆ ತಂತ್ರಗಾರಿಕೆ ಸಭೆಗಳು ನಡೆಯುತ್ತಿವೆ.

ಸಂಕನೂರ ಅವರಿಗೆ ಮತ್ತೆ ಟಿಕೆಟ್ ಕೊಟ್ಟ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿರುವ ಕವಿವಿ ಮಾಜಿ ಸಿಂಡಿಕೇಟ್ ಸದಸ್ಯ, ಬಿಜೆಪಿ ಶಿಕ್ಷಣ ಪ್ರಕೋಷ್ಠದ ಸದಸ್ಯ, ಸಂಘ ಪರಿವಾರದ ಹಿನ್ನೆಲೆಯ ಸುಧೀಂದ್ರ ದೇಶಪಾಂಡೆ ಹಾಗೂ ಅವರ ಬೆಂಬಲಿಗ ಪ್ರಮುಖರ ಮನವೊಲಿಸುವ ಯತ್ನ ಸ್ವತಃ ಸಚಿವ ಪ್ರಹ್ಲಾದ ಜೋಶಿ, ಪರಿಷತ್ ಸದಸ್ಯ ಲಿಂಗರಾಜ ಪಾಟೀಲ ಮಾಡುತ್ತಿದ್ದಾರೆನ್ನಲಾಗಿದೆ.
ಯಾವ ರೀತಿ ಲಿಂಗರಾಜ ಪಾಟೀಲರಿಗೆ ಪರಿಷತ್ ಸ್ಥಾನ ಒಲಿದು ಬಂದಿದೆಯೋ ಅದೇ ರೀತಿ ಸೂಕ್ತ ಸ್ಥಾನಮಾನ ಇಷ್ಟರಲ್ಲೇ ನೀಡುವ ಭರವಸೆ ನೀಡಲಾಗಿದೆ ದೇಶಪಾಂಡೆ ಈಗಾಗಲೇ ನಾಲ್ಕೂ ಜಿಲ್ಲೆಗಳಲ್ಲಿ ಪ್ರಚಾರ ಕೈಗೊಂಡು ಸಭೆ ಸಹ ನಡೆಸಿದ್ದು, ಸಾವಿರ ಸಾವಿರ ಪದವೀಧರರ ನೋಂದಣಿಯನ್ನೂ ಮಾಡಿಸಿದ್ದಾರೆ.

ಇನ್ನೊಂದೆಡೆ ಕಾಂಗ್ರೆಸ್ನ ಹುರಿಯಾಳು ಮಾಜಿ ಪರಿಷತ್ ಸದಸ್ಯ ಮೋಹನ ಲಿಂಬಿಕಾಯಿ ಆಗಿದ್ದು ಪ್ರಚಾರವು ಭರದಿಂದ ನಡೆಸಿದ್ದು ಇಂದು ರಾಜ್ಯಾಧ್ಯಕ್ಷ ಬಿ.ಕೆ.ಹರಿಪ್ರಸಾದ ಅವರು ಬಂದು ಮಹತ್ವದ ಸಭೆ ನಡೆಸಿದ್ದು ಅಲ್ಲದೇ ನಾಳೆ ನಾಮಪತ್ರ ಸಲ್ಲಿಕೆಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಆಗಮಿಸುವರೆನ್ನಲಾಗಿದೆ. ಕಳೆದ ಹುರಿಯಾಳಾಗಿದ್ದ ಕುಬೇರಪ್ಪ ಸಹ ಅಹಿಂದ ಅಭ್ಯರ್ಥಿಯಾಗಿ ಸೆಡ್ಡು ಹೊಡೆಯುತ್ತಾರೆಂಬ ಗುಸು ಗುಸು ಸಹ ಇದೆ.



