*ಭಕ್ತರು ಆತಂಕ ಪಡಬೇಕಿಲ್ಲ : ಮಠದ ಸ್ಪಷ್ಟನೆ*
ಹುಬ್ಬಳ್ಳಿ : ಇಂದು ರವಿವಾರ ಬೆಳಗಿನ ಜಾವ ಸುಮಾರು 1-30 ಗಂಟೆಗೆ ಧಾರವಾಡದಿಂದ ಸವಣೂರು ಪಟ್ಟಣದ ಸತ್ಯಬೋಧ ಮಠಕ್ಕೆ ಹೊರಟ ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥ ಸ್ವಾಮೀಜಿಯವರು ಪ್ರಯಾಣಿಸುತ್ತಿದ್ದ ಫಾರ್ಚುನರ್ ಕಾರು ಪುಣಾ – ಬೆಂಗಳೂರು ಹೆದ್ದಾರಿಯ ತಿಮ್ಮಾಪುರ ಗ್ರಾಮದ ಹತ್ತಿರ ಡಿವೈಡರಿಗೆ ಡಿಕ್ಕಿಯಾದ ಪರಿಣಾಮ ಕಾರಿನ ಒಳಗೆ ಇದ್ದ ಸ್ವಾಮೀಜಿ ಸೇರಿ ಮೂರು ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಸ್ವಾಮೀಜಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು,ಶ್ರೀಗಳು ಆರೋಗ್ಯವಾಗಿದ್ದಾರೆ. ಭುಜಕ್ಕೆ ಸ್ವಲ್ಪ ಪೆಟ್ಟಾಗಿದೆ. ಆತಂಕಿತರಾಗಿ ಭಕ್ತರು ಆಸ್ಪತ್ರೆ ಕಡೆಗೆ ಬರಬಾರದು ಎಂದು ಶ್ರೀಮಠದ ಆಡಳಿತಾಧಿಕಾರಿ ಮನವಿ ಮಾಡಿದ್ದಾರೆ.

ಶ್ರೀಗಳ ಕಾರು ಅಪಘಾತವಾಗಿ ಶ್ರೀಗಳು ಗಾಯಗೊಂಡ ವಿಷಯ ತಿಳಿದು ನೂರಾರು ಭಕ್ತರು ಹುಬ್ಬಳ್ಳಿ ಆಸ್ಪತ್ರೆ ಬಳಿ ಬಂದಿದ್ದು, ಶ್ರೀಮಠದ ಆಡಳಿತಾಧಿಕಾರಿಗಳು, ಪ್ರಮುಖರು ಶ್ರೀಗಳು ಆರಾಮಾಗಿದ್ದಾರೆ. ಯಾವುದೇ ಅಪಾಯವಿಲ್ಲ. ಆತಂಕ ಪಡಬೇಕಿಲ್ಲ ಎಂದು ಹೇಳಿ ಭಕ್ತರನ್ನು ವಾಪಸ್ ಕಳಿಸುತ್ತಿದ್ದಾರೆ.
ರವಿವಾರ ಸಂಜೆ ಧಾರವಾಡದಲ್ಲಿ ಚಾತುರ್ಮಾಸ್ಯ ಮುಗಿಸಿ ಸಿಮೋಲ್ಲಂಘನ ಮಾಡಿದ ಬಳಿಕ ಎಂ.ಕೆ ಹುಬ್ಬಳ್ಳಿಗೆ ತೆರಳಿ ನರಸಿಂಹ ದೇವರಿಗೆ ಶ್ರೀಗಳು ಪೂಜೆ ಸಲ್ಲಿಸಿದ ತರುವಾಯ ಸವಣೂರಿಗೆ ತೆರಳುವಾಗ ತಡಸ ಸಮೀಪ ಹೆದ್ದಾರಿಯಲ್ಲಿ ಕಾರಿಗೆ ನಾಯಿಯೊಂದು ಅಡ್ಡ ಬಂದಿದೆ. ಆಗ ಚಾಲಕ ಕಾರು ತಿರುಗಿಸಿದಾಗ ನಿಯಂತ್ರಣ ತಪ್ಪಿ ರಸ್ತೆ ವಿಭಜಕ್ಕೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ ಎನ್ನಲಾಗಿದೆ.
ಘಟನೆಯಲ್ಲಿ ಶಶಿಧರಾಚಾರ್ಯ ಸೇರಿದಂತೆ ಹಲವರಿಗೆ ಗಾಯಗಳಾಗಿದ್ದು, ಎಲ್ಲರೂ ಆರೋಗ್ಯವಾಗಿದ್ದಾರೆ.
ಧಾರವಾಡ ಉತ್ತರಾಧಿಮಠದ ಸಿಇಒ ವಿದ್ಯಾಧೀಶಾಚಾರ್ಯ ಗುತ್ತಲ ಸ್ಪಷ್ಟನೆ ನೀಡಿದ್ದು, ಅಪಘಾತದ ಕುರಿತು ಹರಡುತ್ತಿರುವ ಊಹಾಪೋಹಗಳಿಗೆ ಭಕ್ತರು ಕಿವಿಗೊಡಬಾರದು ಎಂದು ಮನವಿ ಮಾಡಿದ್ದಾರೆ.

“ಶ್ರೀಪಾದಂಗಳಿಗೆ ಸಣ್ಣ ಒಳನೋವು ಆಗಿದೆ ಅಷ್ಟೇ. ಭಕ್ತರು ಆತಂಕಪಡಬೇಕಾದ ಅಗತ್ಯವಿಲ್ಲ. ಎಲ್ಲರೂ ಶ್ರೀಪಾದಂಗಳ ಆರೋಗ್ಯಕ್ಕಾಗಿ ಹಾಗೂ ಎಲ್ಲರ ಒಳಿತಿಗಾಗಿ ಪ್ರಾರ್ಥಿಸಬೇಕು,” ಎಂದು ಅವರು ತಿಳಿಸಿದ್ದಾರೆ



