*ಕೃಷಿ ವಿಶ್ವವಿದ್ಯಾಲಯವು ಅಭಿವೃದ್ಧಿಪಡಿಸಿದ GPBD 4 ಶೇಂಗಾ ತಳಿ*
ಧಾರವಾಡ: ಇಲ್ಲಿನ ಕೃಷಿ ವಿಶ್ವವಿದ್ಯಾಲಯವು 2004ರಲ್ಲಿ ಅಭಿವೃದ್ಧಿಪಡಿಸಿ, ಬಿಡುಗಡೆ ಮಾಡಿದ GPBD 4 ಶೇಂಗಾ ತಳಿಗೆ ಪ್ರತಿಷ್ಠಿತ IDSCA Award 2026 ಲಭಿಸಿದೆ.
“GPBD 4: Groundnut Variety that transformed Agriculture and Advanced Science worldwide “ಎಂಬ ಶೀರ್ಷಿಕೆಯಡಿ, “Crop Improvement & Production Technology “(ಬೆಳೆ ಸುಧಾರಣೆ ಮತ್ತು ಉತ್ಪಾದನಾ ತಂತ್ರಜ್ಞಾನಗಳು) ವಿಭಾಗದಲ್ಲಿ ಈ ಪ್ರಶಸ್ತಿಗೆ GPBD 4 ಆಯ್ಕೆಯಾಗಿದೆ.

ISSCA award ಜಾಗತಿಕ ದಕ್ಷಿಣ ( Global South) ದೇಶಗಳ ಸಂಸ್ಥೆಗಳು ಅಭಿವೃದ್ಧಿಪಡಿಸಿರುವ ಸಾಬೀತಾದ, ವ್ಯಾಪಕವಾಗಿ ಅಳವಡಿಸಿಕೊಳ್ಳಬಹುದಾದ ಹಾಗೂ ಹೆಚ್ಚಿನ ಪರಿಣಾಮ ಬೀರುವ ಕೃಷಿ ತಂತ್ರಜ್ಞಾನಗಳು ಮತ್ತು ಆವಿಷ್ಕಾರಗಳನ್ನು ಗುರುತಿಸಿ ಗೌರವಿಸುವ ಪ್ರತಿಷ್ಠಿತ ಜಾಗತಿಕ ಪ್ರಶಸ್ತಿಯಾಗಿದೆ.
ಹೊಸದಿಲ್ಲಿಯಲ್ಲಿ ಸೆ.12 ರಂದು ICRISAT ಮತ್ತು
ISSCA ಜಂಟಿಯಾಗಿ ಆಯೋಜಿಸಲಿರುವ “Dryland Congress 2026- Transforming Agriculture with South- South Cooperation” ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುವುದು.
ರೈತರ ಬದುಕಿನಲ್ಲಿ GPBD 4 ಮಹತ್ವದ ಪರಿಣಾಮ: ಕೃಷಿ ವಿಶ್ವವಿದ್ಯಾಲಯದಿಂದ 2004 ರಲ್ಲಿ ಬಿಡುಗಡೆಯಾದ GPBD 4 ತಳಿ ಇಂದು ಶೇಂಗಾ ಬೆಳೆಯುವ ರೈತರಲ್ಲಿ ಚಿರಪರಿಚಿತವಾಗಿದ್ದು, ವಿಶೇಷವಾಗಿ ಎಲೆಚುಕ್ಕೆ ಮತ್ತು ತುಕ್ಕು ರೋಗಗಳಿಗೆ ಉತ್ತಮ ನಿರೋಧಕತೆ ಹಾಗೂ ಅಧಿಕ ಇಳುವರಿಗಾಗಿ ಮಹತ್ವ ಪಡೆದಿದೆ.
ವಿಶ್ವವಿದ್ಯಾಲಯದ ಬೀಜ ಘಟಕವು 2006 ರಿಂದ 2022 ರವರೆಗೆ ಉತ್ಪಾದಿಸಿದ ಒಟ್ಟು 16,540 ಕ್ವಿಂಟಲ್ ತಳಿ ವರ್ಧಕ ಬೀಜದ ಆಧಾರದ ಮೇಲೆ, ಅದರಿಂದ ಉತ್ಪಾದನೆಯಾದ ಮೂಲ ಮತ್ತು ಪ್ರಮಾಣೀಕೃತ ಬೀಜಗಳ ಮೂಲಕ GPBD 4 ತಳಿಯನ್ನು ಬೆಳೆಯಲಾದ ಕ್ಷೇತ್ರದ ಪ್ರಮಾಣವನ್ನು ಅಂದಾಜಿಸಲಾಯಿತು. ಈ ಕ್ಷೇತ್ರದಿಂದ ದೊರೆತ ಇಳುವರಿಯ ಮೌಲ್ಯವನ್ನು TMV 2 ತಳಿಯ ಇಳುವರಿಯೊಂದಿಗೆ ಹೋಲಿಸಿದಾಗ, GPBD 4 ರಿಂದ ಕನಿಷ್ಠ 1,760 ಕೋಟಿ ರೂಪಾಯಿ ಆರ್ಥಿಕ ಲಾಭ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.
ಕೃಷಿ ವಿಶ್ವವಿದ್ಯಾಲಯವು ವಿಜ್ಞಾನಾಧಾರಿತ ತಳಿ ಸುಧಾರಣೆಯ ಶ್ರೇಷ್ಠ ಸಾಧನೆಗಳಲ್ಲಿ ಒಂದಾಗಿದ್ದು, ರೈತರ ಬದುಕು, ಕೃಷಿ ಉತ್ಪಾದನೆ ಹಾಗೂ ಜಾಗತಿಕ ವೈಜ್ಞಾನಿಕ ಸಂಶೋಧನೆಗಳ ಮೇಲೆ ಗಮನಾರ್ಹ ಪರಿಣಾಮ ಬೀರಿದೆ. ಈ ತಳಿಯನ್ನು ಈವರೆಗೆ ಸುಮಾರು 11 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದ್ದು, ತಳಿಯು ರೈತರ ಮನ ಗೆದ್ದಿರುವುದನ್ನು ಸಾಬೀತು ಮಾಡಿದೆ.

*ವಿಜ್ಞಾನ ಮತ್ತು ತಳಿ ಸುಧಾರಣೆಯಲ್ಲಿ GPBD 4 ರ ಜಾಗತಿಕ ಕೊಡುಗೆ:*
GPBD 4 ತಳಿಯಲ್ಲಿರುವ ರೋಗ ನಿರೋಧಕತೆ ಮತ್ತು ಅಧಿಕ ಇಳುವರಿ ಗುಣಗಳನ್ನು ಬಳಸಿಕೊಂಡು ಕೃಷಿ ವಿಶ್ವವಿದ್ಯಾಲಯ, ಧಾರವಾಡದಿಂದ ಅಭಿವೃದ್ಧಿಪಡಿಸಿ ಬಿಡುಗಡೆ ಮಾಡಲಾದ
G2-52, DH-245, DH-262,GPBD-5,
ಮತ್ತು DBG4 ಸೇರಿದಂತೆ ಐದು ಸುಧಾರಿತ ಶೇಂಗಾ ತಳಿಗಳ ಅಭಿವೃದ್ಧಿಯಲ್ಲಿ GPBD 4 ಪ್ರಮುಖ ಮೂಲವಾಗಿ ಬಳಸಲ್ಪಟ್ಟಿದೆ. ಹೀಗಾಗಿ, GPBD 4 ತಳಿಯು ರೈತರ ಉತ್ಪಾದಕತೆ, ಆರ್ಥಿಕ ಲಾಭ, ವೈಜ್ಞಾನಿಕ ಸಂಶೋಧನೆ ಮತ್ತು ಮುಂದಿನ ತಲೆಮಾರಿನ ತಳಿ ಸುಧಾರಣೆಗೆ ಅಪಾರ ಕೊಡುಗೆ ನೀಡಿದ ಒಂದು ಮಹತ್ವದ ತಳಿಯಾಗಿದೆ.
*ರೈತರ ವಿಶ್ವವಿದ್ಯಾಲಯದ ಹೆಮ್ಮೆಯ ಸಾಧನೆ*:
ಜಾಗತಿಕ ಮಟ್ಟದಲ್ಲಿ ದೊರೆತಿರುವ ಈ ISSCA Award ಗೌರವವು ಕೃಷಿ ವಿಶ್ವವಿದ್ಯಾಲಯದ ವೈಜ್ಞಾನಿಕ ಸಾಮರ್ಥ್ಯ, ತಳಿ ಸುಧಾರಣಾ ಪರಂಪರೆ ಮತ್ತು ರೈತಪರ ಬದ್ಧತೆಗೆ ದೊರೆತ ಜಾಗತಿಕ ಮನ್ನಣೆಯಾಗಿದೆ. ರೈತರಿಗೆ ನೆರವಾಗುವ ತಳಿಗಳು ಮತ್ತು ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿ, ಅವುಗಳನ್ನು ರೈತರ ಹೊಲಗಳಿಗೆ ತಲುಪಿಸುವ ಧಾರವಾಡ ಕೃಷಿ ವಿಶ್ವವಿದ್ಯಾಲಯವು ನಿಜಕ್ಕೂ ರೈತರ ವಿಶ್ವವಿದ್ಯಾಲಯ ಎಂಬದನ್ನು ನಿರೂಪಿಸಿದೆ. ಇಂತಹ ಮಹತ್ವದ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ ಡಾ. ಎಂ. ವಿ. ಸಿ. ಗೌಡ ಅವರ ನೇತೃತ್ವದ ತಂಡವನ್ನು ಕುಲಪತಿ ಡಾ. ಎನ್. ಬಿ. ಪ್ರಕಾಶ ಅಭಿನಂದಿಸಿದ್ದಾರೆ.



