ಧಾರವಾಡ: ಸತತ ಆರು ವರ್ಷಗಳಿಂದ ಹಾಲು ಕೊಡುವ ಮೂಲಕ ತಾಲೂಕಿನ ಕರಡಿಗುಡ್ಡ ಗ್ರಾಮದ ಆಕಳು ಅಚ್ಚರಿ ಮೂಡಿಸಿದೆ.
ಗ್ರಾಮದ ರೈತ ಸೋಮಲಿಂಗಪ್ಪ ಗುತ್ತೆಪ್ಪನವರ ಎಂಬುವರ ಈ ಆಕಳು, ಇದೀಗ ಜನರಲ್ಲಿ ಅಚ್ಚರಿ ತಂದಿದೆ.
ಮನೆಗೆ ಹೈನುಗಾರಿಕೆ ಸಲುವಾಗಿ ಸೋಮಲಿಂಗಪ್ಪ ಅವರು
ಆರು ವರ್ಷಗಳ ಹಿಂದೆ ಕರು ಸಮೇತ ಜರ್ಸಿ ತಳಿಯ ಆಕಳನ್ನು ಖರೀದಿಸಿದ್ದರು.

ಮನೆಗೆ ಬಂದ ದಿನದಿಂದ ಪ್ರತಿದಿನ ಮುಂಜಾನೆ ಮತ್ತು ಸಂಜೆ ಹೊತ್ತಿಗೆ 4-5 ಲೀಟರ್ ಹಾಲು ಕೊಡುತ್ತಿತ್ತು. ಒಂದು ವರ್ಷದ ನಂತರ ಬೆಳಗ್ಗೆ ಎರಡು ಲೀಟರ್ ಮತ್ತು ಸಂಜೆ ಎರಡು ಲೀಟರ್ ಹಾಲು ಕೊಡಲಾರಂಭಿಸಿತು.
ನಂತರದ ದಿನಗಳಲ್ಲಿ ಆಕಳು ಗರ್ಭಧರಿಸಬಹುದು, ಅಲ್ಲದೆ ಹಾಲು ಕೊಡುವುದನ್ನು ಸ್ಥಗಿತಗೊಳಿಸಬಹುದು ಎಂಬುದು ಆಕಳು ಮಾಲಿಕರ ಲೆಕ್ಕಾಚಾರ ಆಗಿತ್ತು. ಆದರೆ, ಆಕಳು ಎಂದಿನಂತೆ ಬೆಳಗ್ಗೆ ಮತ್ತು ಸಂಜೆ ಎರಡು ಲೀಟರ್ ಹಾಲು ಕೊಡುತ್ತ ಬಂದಿದೆ.
ಮನೆಯವರು ಆಕಳಿಗೆ ನಿಯಮಿತವಾಗಿ ಮೇವು, ಹಿಂಡಿ ಇನ್ನಿತರ ಆಹಾರ ಒದಗಿಸುತ್ತ ಕಾಳಜಿಯಿಂದ ಪಾಲನೆ ಮಾಡುತ್ತ ಬಂದಿದ್ದಾರೆ.
ಅವರ ಕಾಳಜಿಯಿಂದ ಆಕಳು ಸತತ ಆರು ವರ್ಷಗಳಿಂದ ಹಾಲು ನೀಡುತ್ತ ಬಂದಿದೆ. ಈ ಮಧ್ಯೆ ಯಾವುದೇ ಕಾರಣದಿಂದ ಹಾಲು ಕೊಡುವುದನ್ನು ಬಿಟ್ಟಿಲ್ಲ. ಹೀಗಾಗಿ ಗುತ್ತೆಪ್ಪನವರ ಕುಟುಂಬದ ಹಾಲಿನ ಬೇಡಿಕೆ ಈಡೇರಿಸುತ್ತ ಪ್ರೀತಿಯನ್ನು ಗಳಿಸಿದೆ.
ಕೃಷಿ ಕುಟುಂಬದ ಗುತ್ತೆಪ್ಪನವರ ಅವರ ಮನೆಗೆ ಹಾಲು ಮಾರಾಟದಿಂದ ಅಲ್ಪ ಸ್ವಲ್ಪ ಆದಾಯವನ್ನೂ ಆಕಳು ಒದಗಿಸುತ್ತಿದೆ.
ಕಪ್ಪು ಬಣ್ಣದ ಜರ್ಸಿ ಆಕಳು ನಿರಂತರ ಹಾಲು ನೀಡುತ್ತಿರುವುದು ಜನಸಾಮಾನ್ಯರಲ್ಲಿ ಆಶ್ಚರ್ಯ ಮೂಡಿಸಿದೆ.
ಜೊತೆಗೆ ವಿಜ್ಞಾನ ವಲಯದಲ್ಲಿಯೂ ಹೆಚ್ಚಿನ ಕುತೂಹಲ ಮೂಡಿಸುವಂತಿದೆ.
*ವಿರಳ ಪ್ರಕರಣ*
ಪ್ರಾಣಿಗಳಲ್ಲಿನ ಹಾರ್ಮೋನುಗಳಲ್ಲಿನ ವ್ಯತ್ಯಾಸ ಸೇರಿದಂತೆ ಅನೇಕ ಕಾರಣಗಳಿಂದ ಈ ರೀತಿಯ ಪ್ರಕರಣಗಳು ಕಂಡು ಬರುತ್ತವೆ. ಗರ್ಭ ಧರಿಸದೇ ಹಾಲು ಕೊಡುವ ಹಸುಗಳ
ವಿಷಯ ನಿಸರ್ಗದಲ್ಲಿನ
ಅಚ್ಚರಿಯೇ ಸರಿ. ಆದರೆ, ಹಸು ಪಾಲಕರಿಗೆ ನಿರಂತರ ಹಾಲು ಕೊಡುತ್ತಿರುವುದು ಸಂತೋಷದ ಸಂಗತಿ.
ಈ ಕುರಿತು ಪರಿಶೀಲನೆ ನಡೆಸಲಾಗುವುದು.
*ಡಾ.ಎಸ್.ವಿ.ಸಂತಿ*
ಉಪ ನಿರ್ದೇಶಕರು,
ಪಶು ವೈದ್ಯಕೀಯ ಇಲಾಖೆ.




