ಹುಬ್ಬಳ್ಳಿ : ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಕಾಂಗ್ರೆಸ್ ಶಾಸಕ ಹಾಗೂ ಮಾಜಿ ಸಚಿವ ವಿನಯ್ ಕುಲಕರ್ಣಿ ಮುಂದಿನ ವಾರ ಧಾರವಾಡಕ್ಕೆ ಬರುವುದು ನಿಶ್ಚಿತವಾಗಿದ್ದು ದಿನಗಣನೆ ಆರಂಭವಾಗಿದೆ.

ವಿನಯ ಅವರಿಗೆ ಕರ್ನಾಟಕ ಹೈಕೋರ್ಟ್ ಜಾಮೀನು ಮಂಜೂರು ಮಾಡಿದ ಹಿನ್ನೆಲೆಯಲ್ಲಿ ಅವರು ನಿನ್ನೆ ರಾತ್ರಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾಗಿದ್ದು ಇಂದು ಶನಿವಾರ ಬೆಳಗ್ಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ನಿವಾಸಕ್ಕೆ ಪತ್ನಿ ಶಿವಲೀಲಾ ಹಾಗೂ ಪುತ್ರಿಯರೊಂದಿಗೆ ತೆರಳಿ ಭೇಟಿ ಮಾಡಿದರು.
ಇನ್ನೂ ಕೆಲವು ಅಗತ್ಯ ಕಾನೂನು ಪ್ರಕ್ರಿಯೆಗಳು ಇರುವ ಹಿನ್ನೆಲೆಯಲ್ಲಿ ವಿನಯ್ ಕುಲಕರ್ಣಿ ದಿ.10ರೊಳಗೆ ತವರಿಗೆ ಬರಲಿದ್ದಾರೆ . ಹಿಂದೆ ಧಾರವಾಡ ಪ್ರವೇಶಿಸದಂತೆ ಸುಪ್ರೀಂ ಕೋರ್ಟ್ ಷರತ್ತು ವಿಧಿಸಿತ್ತು, ಈಗ ವಿಚಾರಣೆ ಪೂರ್ಣಗೊಂಡ ಹಿನ್ನೆಲೆಯಲ್ಲಿ ಷರತ್ತು ಅನ್ವಯವಾಗುವುದಿಲ್ಲ ಎಂದು ಹೇಳಿರುವುದರಿಂದ ಧಾರವಾಡ ದಾರಿ ಅವರಿಗೆ ಮುಕ್ತವಾಗಿದೆ.
ಇಂದು ಬೆಂಗಳೂರಿನ ವಿನಯ್ ನಿವಾಸಕ್ಕೆ ಹುಬ್ಬಳ್ಳಿ ಧಾರವಾಡ ಅಲ್ಲದೆ ಎಲ್ಲಾ ಕಡೆಯಿಂದ ಸಾವಿರಾರು ಬೆಂಬಲಿಗರ ದಂಡು ಹರಿದುಬಂದಿದೆ . ಅವರನ್ನು ಬೆಂಬಲಿಗರು ಹೂಮಾಲೆ ಹಾಕಿ ಶಾಲು ಹೊದಿಸಿ ಗೌರವಿಸಿದರು .
ವಿನಯ ನಿಕಟವರ್ತಿಗಳಾದ ಮನೋಜ್ ಕರ್ಜಗಿ, ಪರಮೇಶ್ ಕಾಳೆ, ಮಾಜಿ ಬ್ಲಾಕ್ ಅಧ್ಯಕ್ಷ ಬಸವರಾಜ ಮಲಕಾರಿ, ಹೇಮಂತ್ ಗುರಲಹೊಸೂರ ಸೇರಿದಂತೆ ಅನೇಕರು ಇದ್ದರು.
ಹೈಕೋರ್ಟ್ ತೀರ್ಪು ಉಪ ಚುನಾವಣೆ ಕನಸು ಕಾಣುತ್ತಿದ್ದ ಬಿಜೆಪಿ ಪಾಲಿಗೆ ಕಹಿಯಾದರೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಅಲ್ಲದೆ ಜಿಲ್ಲಾ ರಾಜಕೀಯಕ್ಕೆ ಹೊಸ ಖದರು ಬಂದಿದ್ದು, ಡಿಸಿಸಿ ಅಧ್ಯಕ್ಷರ ಆಯ್ಕೆಯಲ್ಲಿ ಸಹ ಪರಿಣಾಮ ಬೀರಬಹುದಾಗಿದೆ.




