*ಸರಳ, ಸಾಮೂಹಿಕ ಮತ್ತು ಅಂತರ್ಜಾತಿ ವಿವಾಹಗಳು ಸಮಾಜದಲ್ಲಿ ಸಮಾನತೆ ತರಲು ಸಹಾಯಕ; ಮುಖ್ಯಮಂತ್ರಿ ಸಿದ್ದರಾಮಯ್ಯ*
*ಕೋನರಡ್ಡಿ ಕಾರ್ಯ ಇತರರಿಗೆ ಮಾದರಿ : ಸಚಿವರ, ಮಠಾಧೀಶರ, ಗಣ್ಯರ ಮೆಚ್ಚುಗೆ*
ಹುಬ್ಬಳ್ಳಿ : ಬಂಡಾಯದ ನೆಲ ನವಲಗುಂದ ಪಟ್ಟಣದ ಮಾಡೆಲ್ ಹೈಸ್ಕೂಲ್ ಮೈದಾನದಲ್ಲಿ ಶಾಸಕ ಎನ್.ಎಚ್.ಕೋನರಡ್ಡಿ ಅವರು ಮಗ ನವೀನಕುಮಾರ ಅವರ ವಿವಾಹ ಆರತಕ್ಷತೆ ಅಂಗವಾಗಿ ಆಯೋಜಿಸಿದ್ದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 75 ಜೋಡಿಗಳು ಹೊಸ ಬಾಳಿಗೆ ಕಾಲಿಟ್ಟರು. ರಾಜ್ಯದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಕೇಂದ್ರ ಸಚಿವರು, ರಾಜ್ಯ ಸಂಪುಟದ ಹಲವು ಸಚಿವರು, ಶಾಸಕರು , ಮಠಾಧೀಶರು
ಭಾಗವಹಿಸಿ, ಶುಭಾಶಯ ಕೋರುವ ಮೂಲಕ ಐತಿಹಾಸಿಕ ಹಿರಿಮೆಗೆ ಪಾತ್ರವಾಯಿತು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ ಬಸವಣ್ಣನವರು ಕೆಳಜಾತಿಯವರೊಂದಿಗೆ ಮೆಲ್ಜಾತಿಯವರ ಮದುವೆ ಮಾಡಿ, ಅಂದೇ ಸಮಾಜದಲ್ಲಿ ಸಮಾನತೆ ತರಲು ಮುನ್ನುಡಿ ಬರೆದರು. ಸರ್ವ ಧರ್ಮಗಳ ವಧುವರರು ಸಾಮೂಹಿಕ ವಿವಾಹ ಆಗುವದರೊಂದಿಗೆ ಸಮಾಜದಲ್ಲಿ ಅಂತರ್ಜಾತಿ ಮದುವೆಗಳು ಆಗಬೇಕು. ಇದರಿಂದ ಸಮಾಜದ ಸರ್ವರಲ್ಲಿ ಸಮಾನತೆ ತರಲು ಸಹಾಯವಾಗುತ್ತದೆ ಎಂದರು.

ಶಾಸಕ ಕೋನರಡ್ಡಿ ಅವರು, 75 ಜೋಡಿಗಳ ಸಾಮೂಹಿಕ ಮದುವೆಗಳನ್ನು ಏರ್ಪಡು ಮಾಡಿದ್ದಾರೆ. ಮುಸ್ಲಿಂ ಮತ್ತು ಕ್ರಿಶ್ಚಿಯನ್ ರು ಈ ಸಂದರ್ಭದಲ್ಲಿ ಮದುವೆಯಾಗುತ್ತಿರುವುದು ಸಂತೋಷದ ಕ್ಷಣವಾಗಿದೆ ಎಂದು ಅವರು ಹೇಳಿದರು.
ನಮ್ಮ ಸಮಾಜದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ, ಬೌದ್ಧರ ನಡುವೆ ಎಲ್ಲರೂ ಮನುಷ್ಯರು ಮನುಷ್ಯರಾಗಿ ಬದುಕಬೇಕು ಮತ್ತು ನಮ್ಮ ಸಮಾಜದಲ್ಲಿ ಜಾತಿ ವ್ಯವಸ್ಥೆಯು ಹೋಗಲಾಡಬೇಕು ಎಂದು ಅವರು ತಿಳಿಸಿದರು.
ನವಲಗಂದದಲ್ಲಿ ಮದುವೆಯು ಜಾತ್ರೆಯಂತೆ ಕಾಣುತ್ತಿದೆ. ಕೋನರೆಡ್ಡಿ ಅವರು ಒಂದು ಲಕ್ಷಕ್ಕೂ ಹೆಚ್ಚು ಜನರನ್ನು ಈ ಸಂದರ್ಭದಲ್ಲಿ ಸೇರಿಸಿದ್ದಾರೆ ಮತ್ತು ವಧು-ವರರು ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ. ಅವರಲ್ಲಿ ನನ್ನ ಕಿವಿಮಾತು ಹೇಳುವುದೇನೆಂದರೆ ಆರ್ಥಿಗೊಬ್ಬ ಕೀರ್ತಿಗೊಬ್ಬ ಎಂಬ ನುಡಿ ಮುತ್ತಿನಂತೆ ಇಬ್ಬರೇ ಮಕ್ಕಳನ್ನು ಮಾಡಿಕೊಳ್ಳಬೇಕು. ಏಕೆಂದರೆ ಭಾರತದಲ್ಲಿ ಜನಸಂಖ್ಯೆ ಅತೀ ಹೆಚ್ಚಾಗುತ್ತಾ ಹೋಗುತ್ತಿದೆ ಎಂದು ಅವರು ತಿಳಿಸಿದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಮಾತನಾಡಿ, ನವಲಗುಂದದಲ್ಲಿ ಐತಿಹಾಸಿಕ ಕಾರ್ಯಕ್ರಮವನ್ನು ಶಾಸಕರಾದ ಎನ್. ಹೆಚ್ ಕೋನರೆಡ್ಡಿ ಮಾಡಿದ್ದಾರೆ. ಅವರು ಬಡವರು ಮತ್ತು ದಲಿತರ ಬಗ್ಗೆ ಹೋರಾಟವನ್ನು ಮಾಡುತ್ತಾ ಬಂದವರು. ಒಬ್ಬ ಒಳ್ಳೆಯ ನಾಯಕ ಎಂದು ಹೇಳಿದರು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಮಾತನಾಡಿ, ಶಾಸಕ ಎನ್. ಎಚ್ ಕೋನರಡ್ಡಿ ಅವರ ಸುಪುತ್ರನ ವಿವಾಹ ಸಂದರ್ಭದಲ್ಲಿ ರಿಸೆಪ್ಶನ್ ನಡೆಯುತ್ತಿರುವ ದಿವಸ 75 ಜೋಡಿಗಳ ಸಾಮೂಹಿಕ ವಿವಾಹವನ್ನು ಮಾಡಿದ್ದು, ಇತರರಿಗೆ ಮಾದರಿ ಎಂದು ಅವರು ಹೇಳಿದರು.
ಶಾಸಕ ಎನ್.ಹೆಚ್ ಕೋನರಡ್ಡಿ ಅವರು ಮಾತನಾಡಿ, ನವಲಗುಂದದಲ್ಲಿ ದೊಡ್ಡ ಇತಿಹಾಸ ಸೃಷ್ಟಿಯಾಗಿದೆ. 75 ಜೋಡಿಯ ಸರ್ವ ಧರ್ಮದ ಮದುವೆಯನ್ನು ನಮ್ಮ ಕ್ಷೇತ್ರದ ಜನ ಮಾಡಿದ್ದಾರೆ ಎಂದು ಹೇಳಿದರು.
ನನ್ನ ಮಗನ ಆರಕ್ಷತೆ ಕಾರ್ಯಕ್ರಮ ಜರಗಿತ್ತು. 10 ಎಕರೆಯ ಜಮೀನಿನಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ ಮತ್ತು 26 ಎಕರೆಯ ಜಮೀನಿನಲ್ಲಿ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಿದರೂ, ಎಲ್ಲ ಕಡೆ ಜಾಮ್ ಆಗಿದೆ ಅದು ನಿಮ್ಮೆಲ್ಲರ ಆಶೀರ್ವಾದ.
ಜಾತ್ಯಾತೀತವಾಗಿ ನವಲಗುಂದ ಜನ ನನಗೆ ಸಹಕಾರವನ್ನು ನೀಡಿದ್ದೀರಿ.ನಿಮ್ಮೆಲ್ಲರಿಗೂ ಹೃದಯಪೂರ್ವಕ ವಂದನೆಗಳು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಾಜ್ಯ ಸಚಿವ ಸಂಪುಟದ ಸಚಿವರಾದ
ಕೆ.ಜೆ.ಜಾರ್ಜ್, ಎಚ್.ಸಿ.ಮಹಾದೇವಪ್ಪ, ಕೃಷ್ಣ ಭೈರೆಗೌಡ, ರಾಮಲಿಂಗಾರಡ್ಡಿ, ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಶಾಸಕರಾದ ಬಸವರಾಜ ರಾಯರೆಡ್ಡಿ, ಪ್ರಸಾದ ಅಬ್ಬಯ್ಯ, ಬಸವರಾಜ ಶಿವಣ್ಣವರ, ಹೆಸ್ಕಾಂ ಅಧ್ಯಕ್ಷ ಸೈಯದ್ ಅಜ್ಜಂಪೀರ ಖಾದ್ರಿ, ವಿಪ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ ಸೇರಿದಂತೆ
ವಿವಿಧ ಸಚಿವರು, ಶಾಸಕರು, ವಿಧಾನ ಪರಿಷತ್ತ ಸದಸ್ಯರು, ಮಾಜಿ ಸಚಿವರು, ಶಾಸಕರು, ವಿವಿಧ ಜನ್ರತಿನಿಧಿಗಳು, ಗಣ್ಯರು ಭಾಗವಹಿಸಿ, ನವ ವಧುವರರಿಗೆ ಆಶಿರ್ವದಿಸಿ, ಶುಭಾಶಯ ಕೋರಿದರು. ನವಲಗುಂದ ತಾಲೂಕಿನ ನಾಗರಿಕರು ಸೇರಿದಂತೆ ನವಲಗುಂದ ತಾಲೂಕಿನ ಸುತ್ತಮುತ್ತಲಿನ ವಿವಿಧ ತಾಲೂಕಿನ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಾಕ್ಷೀಕರಿಸಿದರು.



