ಹುಬ್ಬಳ್ಳಿ : ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿದ್ದ ಯುವಕನೋರ್ವ ಪ್ರಯಾಣದ ವೇಳೆ ಕಿಟಕಿಯಿಂದ ತಲೆ ಹೊರಹಾಕಿದ ವೇಳೆ ಹಿಂದಿನಿಂದ ಬಂದ ಟಿಪ್ಪರ್ ಢಿಕ್ಕಿ ಹೊಡೆದ ಪರಿಣಾಮ ಯುವಕನ ರುಂಡ ತುಂಡಾಗಿ ಬಿದ್ದು ಸಾವನ್ನಪ್ಪಿದ ಘಟನೆ ಕುಂದಗೋಳದಿಂದ ಎರಡು ಕಿಲೋಮೀಟರ್ ದೂರದಲ್ಲಿ ಇಂದು ಸಂಜೆ ನಡೆದಿದೆ.

ಮೃತ ಯುವಕನನ್ನು ಶಿರೂರು ಗ್ರಾಮದ ಫಕ್ಕಿರಯ್ಯ ಚನ್ನಯ್ಯ ಮುತ್ತಳ್ಳಿಮಠ (18) ಆಗಿದ್ದಾನೆ. ಈತ ಹುಬ್ಬಳ್ಳಿಯಲ್ಲಿ ಸರ್ಕಾರಿ ಐಟಿಐ ವ್ಯಾಸಂಗ ಮಾಡುತ್ತಿದ್ದು, ಲಕ್ಷ್ಮೇಶ್ವರ ಕಡೆಗೆ ತೆರಳುತ್ತಿದ್ದ ಬಸ್ನಲ್ಲಿ ಪ್ರಯಾಣಿಸುತ್ತಿದ್ದ. ಬಸ್ನ ಹಿಂಬದಿ ಆಸನದಲ್ಲಿ ಕುಳಿತಿದ್ದು ಕಿಟಕಿಯಿಂದ ತಲೆ ಹೊರಹಾಕಿದ ವೇಳೆ ಎನ್ನಲಾಗಿದೆ. ಇದೇ ವೇಳೆ ಹಿಂದಿನಿಂದ ವೇಗವಾಗಿ ಬಂದ ಟಿಪ್ಪರ್, ಬಸ್ ಪಕ್ಕದಲ್ಲಿ ಹಾದುಹೋಗುವಾಗ ಯುವಕನ ತಲೆಗೆ ತಗುಲಿ ಯುವಕನ ರುಂಡ ತುಂಡಾಗಿ ಕೆಳಗಡೆ ಬಿದ್ದಿದ್ದು ಅಲ್ಲಿಯೇ ಮೃತಪಟ್ಟಿದ್ದಾನೆ.
ಅಪಘಾತದ ಬಳಿಕ ಬಸ್ ಚಾಲಕ ವಾಹನವನ್ನು ನಿಲ್ಲಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಕುಂದಗೋಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.



