*ನಿಷೇಧಾಜ್ಞೆ ಹಿನ್ನೆಲೆಯಲ್ಲಿ**ಶಾಸಕರ ಸಹಿತ ನೂರಾರು* *ಪ್ರತಿಭಟನಾಕಾರರ ಬಂಧನ*-ಖಾಕಿ ಸರ್ಪಗಾವಲು*
ಹುಬ್ಬಳ್ಳಿ: ಹಳೇ ಹುಬ್ಬಳ್ಳಿಯ ಪುರಾತನ ಶ್ರೀ ಭವಾನಿ ಶಂಕರ ನಾರಾಯಣ ದೇವಸ್ಥಾನ ಪುಷ್ಕರಣಿ ಸಂರಕ್ಷಣಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪುಷ್ಕರಣಿ ಚಲೋ ಪ್ರತಿಭಟನೆ ಕಿಚ್ಚು ತಾರಕಕ್ಕೆ ಏರಿದೆಯಾದರೂ ಕಾನೂನು ಸುವ್ಯವಸ್ಥೆ ಮುಂಜಾಗ್ರತೆಯ ಕ್ರಮವಾಗಿ ಪೊಲೀಸರು ಈ ಪ್ರದೇಶದಲ್ಲಿ ಕಲಂ 163ಬಿ ಎನ್ ಎಸ್ ಎಸ್ ಕಾಯ್ದೆ ಅಡಿಯಲ್ಲಿ ನಿಷೇಧಾಜ್ಞೆ ಹೇರಿದ ಪರಿಣಾಮ ದೋಬಿಘಾಟ ಉದ್ಯಾನ ಬಳಿ ಪ್ರತಿಭಟನೆ ನಡೆಸಿದ ಸಂಘ ಪರಿವಾರ , ಬಿಜೆಪಿ, ಶ್ರೀರಾಮ ಸೇನೆ ಕಾರ್ಯಕರ್ತರನ್ನು ವಶಕ್ಕೆ ಪಡೆದು ತದನಂತರ ಬಿಡುಗಡೆ ಮಾಡಿದರು.

ಆಸಾರ ಓಣಿಯಲ್ಲಿನ ಶ್ರೀ ಭವಾನಿ ಶಂಕರ ನಾರಾಯಣ ದೇವಸ್ಥಾನಕ್ಕೆ ಸೇರಿದ ಪುಷ್ಕರಣೆ ಮೇಲೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ರಸ್ತೆ ನಿರ್ಮಾಣ ಮಾಡಿದೆ ಎಂದು ಆರೋಪಿಸಿ ನಗರದ ದೋಬಿಘಾಟ್ ಉದ್ಯಾನ ಬಳಿ ಪುಷ್ಕರಣಿ ಚಲೋ ಹಮ್ಮಿಕೊಂಡಿದ್ದ ಹಿಂದೂಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು.
ಹಿಂದೂಪರ ಸಂಘಟನೆಗಳ ಮುಖಂಡರು ಪುಷ್ಕರಣಿ ಉಳಿಸಿ, ಭವಾನಿ ಶಂಕರ ಕೀರ್ತಿ ಬೆಳೆಸಿ ಅಂತ ಪ್ಲೇ ಕಾರ್ಡ್ ಹಿಡಿದಿದ್ದವಲ್ಲದೇ ಪುಷ್ಕರಣಿ ಉಳಿಸಿ, ದೇವಸ್ಥಾನ ಬೆಳೆಸಿ ಎಂಬ ಘೋಷಣೆ ಮುಗಿಲು ಮುಟ್ಟಿತು. ಈ ವೇಳೆ ಪ್ರತಿಭಟನಾನಿರತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು. ವಶಕ್ಕೆ ಪಡೆಯುವ ಹಂತದಲ್ಲಿ ಪೊಲೀಸರು ಮತ್ತ ಪ್ರತಿಭಟನಾಕಾರರ ನಡುವೆ ನೂಕಾಟ, ತಳ್ಳಾಟ ನಡೆಯಿತು.

ಶಾಸಕರಾದ ಅರವಿಂದ ಬೆಲ್ಲದ್, ಮಹೇಶ್ ಟೆಂಗಿನಕಾಯಿ, ಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ್, ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ಪುಷ್ಕರಣಿ ಹೋರಾಟ ಸಮಿತಿಯ ಸಂಯೋಜಕ ಸುಧಾಕರ ಶೆಟ್ಟಿ, ಸಹ ಸಹ ಸಂಯೋಜಕ ಜಯತೀರ್ಥ ಕಟ್ಟಿ, ಮಹಾನಗರ ಬಿಜೆಪಿ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಬಿಜೆಪಿ ಮುಖಂಡರುಗಳಾದ ಮಂಜುನಾಥ ಕಾಟಕರ, ದತ್ತಮೂರ್ತಿ ಕುಲಕರ್ಣಿ, ವೆಂಕಟೇಶ ಕಾಟವೆ, ಅನೂಪ ಬಿಜವಾಡ, ಪ್ರೀತಂ ಅರಕೇರಿ, ಶಿವು ಮೆಣಸಿನಕಾಯಿ, ರಾಜು ಕಾಳೆ, ಮಂಜು ಕಲಾಲ, ಸೀಮಾ ಲದ್ವಾ, ಬಸವರಾಜ ಕುಂದಗೋಳಮಠ, ಹುಲಿಗೆಮ್ಮಾ ಪೋಸಾ, ಕೃಷ್ಣಾ ಗಂಡಗಾಳೇಕರ ಸೇರಿದಂತೆ ಅನೇಕರನ್ನು ವಶಕ್ಕೆ ಪಡೆಯಲಾಯಿತು.
ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರದಂತೆ ಹೋರಾಟದ ಸ್ಥಳ ಅಸಾರ ಓಣಿ, ಶ್ರೀ ಭವಾನಿ ಶಂಕರ ನಾರಾಯಣ ದೇವಸ್ಥಾನ ಹಾಗೂ ಚನ್ನಪೇಟೆ ಸುತ್ತಮುತ್ತಲಿನ ಪ್ರದೇಶದಲ್ಲಿ ನಿನ್ನೆಯಿಂದಲ್ಲೂ ವ್ಯಾಪಕ ಬಂದೋಬಸ್ತ್ ವಹಿಸಲಾಗಿತ್ತು. ಹಿಂದೆ ಈದಗಾ ವಿವಾದ, ರಂಗಪಂಚಮಿ ಸಂದರ್ಭದಲ್ಲಿ ಏರ್ಪಡಿಸಿದ ಮಾದರಿಯಲ್ಲಿ ಅಭೂತ ಪೂರ್ವ ಭದ್ರತಾ ವ್ಯವಸ್ಥೆ ಮಾಡಲಾಗಿತ್ತು.

ಪೊಲೀಸ್ ಆಯುಕ್ತ ಎನ್.ಶಶಿಕುಮಾರ, ಡಿಸಿಪಿಗಳಾದ ಶೃತಿ ಎನ್.ಎಸ್., ಸಿ.ಆರ್.ರವೀಶ , ಎಸಿಪಿಗಳಾದ ಡಾ.ಶಿವಾನಂದ ಚಲವಾದಿ, ಉಮೇಶ ಚಿಕ್ಕಮಠ, ಶಿವಪ್ರಕಾಶ ನಾಯ್ಕ ಸಹಿತ ಹಿರಿಯ ಅಧಿಕಾರಿಗಳು ಬಂದೋಬಸ್ತ ನೇತೃತ್ವ ವಹಿಸಿದ್ದರು.
ಈದಗಾ ಮೈದಾನ, ರಾಮಮಂದಿರಕ್ಕಾಗಿ ಹೋರಾಟ ಮಾಡಿರುವ ರೀತಿಯಲ್ಲಿ ಈ ಹೋರಾಟವನ್ನು ಕೈಗೆತ್ತಿಕೊಂಡಿದ್ದೇವೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.
ಪ್ರತಿಭಟನಾಕಾರರನ್ನು ಬಂಧಿಸಿದ ವೇಳೆ ಮಾತನಾಡಿದ ಅವರು, ಕಾರ್ಪೊರೇಷನ್ ಕಮಿಷನರ್ ಹಾಗೂ ಪೊಲೀಸ್ ಕಮಿಷನರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಯಾವುದೇ ಕಾರಣಕ್ಕೂ ಹೋರಾಟವನ್ನು ಹಿಂಪಡೆಯುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಅದೇ ರೀತಿ ಅರವಿಂದ ಬೆಲ್ಲದ, ಪ್ರಮೋದ ಮುತಾಲಿಕ, ಜಯತೀರ್ಥ ಕಟ್ಟಿ, ಸುಧಾಕರ ಶೆಟ್ಟಿ ಮುಂತಾದವರು ಮುಂದಿನ ದಿನಗಳಲ್ಲಿ ಹೋರಾಟ ಮತ್ತಷ್ಟು ತೀವ್ರಗೊಳ್ಳಲಿದೆ ಎಂದರು ಮಹಿಳಾ ಪ್ರತಿಭಟನಾಕಾರರ ವಶಕ್ಕೆ ಪಡೆಯುವ ಸಂದರ್ಭದಲ್ಲೇ ಹೋಮಗಾರ್ಡ ಯಶೋಧ ಮಂಜಿ ಎಂಬುವರಿಗೆ ಬಳೆ ಚುಚ್ಚಿ ರಕ್ತಸ್ರಾವವಾಗಿದೆ.



