*ಉಭಯ ಶ್ರೀಗಳ ಆಶೀರ್ವಾದ ಪಡೆದ ಸೋನು ನಿಗಮ್*
ಹುಬ್ಬಳ್ಳಿ: ನಿನ್ನೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನೀಡಲು ಆಗಮಿಸಿದ್ದ ಮೆಲೋಡಿ ಕಿಂಗ್ ಸೋನು ನಿಗಮ ಇಂದು ನಡೆದಾಡುವ ಮಹಾದೇವನ ಸನ್ನಿಧಾನ ಎಂದೇ ಖ್ಯಾತಿ ಪಡೆದಿರುವ ಶ್ರೀ ಸಿದ್ಧಾರೂಢ ಸ್ವಾಮಿ ಮಠಕ್ಕೆ ಭೇಟಿ ನೀಡಿ ಉಭಯ ಶ್ರೀಗಳ ದರ್ಶನ ಪಡೆದ ಅವರು, ಕೆಲಕಾಲ ಮಠದ ಆವರಣದಲ್ಲಿ ಭಕ್ತಿ ಪರವಶರಾದರು.

ಮಠದಲ್ಲಿ ಜಾತ್ರೆಯು ಸನ್ನಿಹಿತವಿರುವದರಿಂದ ಹಾಗೂ ಸೋಮವಾರವಾಗಿದ್ದರಿಂದ ಮಠದಲ್ಲಿ ಭಕ್ತರ ಸಂಖ್ಯೆ ದೊಡ್ಡ ಪ್ರಮಾಣದಲ್ಲಿ ಇತ್ತು. ನೆಚ್ಚಿನ ಗಾಯಕ ಹಠಾತ್ತನೆ ಮಠದಲ್ಲಿ ಕಾಣಿಸಿಕೊಂಡಿದ್ದನ್ನು ಕಂಡು ಭಕ್ತರು ಪುಳಕಿತರಾದರು. ಸೋನು ನಿಗಮ್ ಅವರನ್ನು ಹತ್ತಿರದಿಂದ ನೋಡಲು ಮತ್ತು ಅವರೊಂದಿಗೆ ಸೆಲ್ಪಿ ತೆಗೆದುಕೊಳ್ಳಲು ಅಭಿಮಾನಿಗಳು ಮುಗಿಬಿದ್ದ ಪ್ರಸಂಗವೂ ನಡೆಯಿತು.

ಭಕ್ತರ ಪ್ರೀತಿಗೆ ಸ್ಪಂದಿಸಿ, ಮಠದ ದೈವಿಕ ಪರಿಸರಕ್ಕೆ ನಿಗಮ್ ಮನಸೋತರು.ಭೇಟಿಯ ಸಂದರ್ಭದಲ್ಲಿ ಮಠದ ಟ್ರಸ್ಟ್ ಕಮಿಟಿಯ ಅಧ್ಯಕ್ಷರಾದ ಚನ್ನವೀರ ಮುಂಗರವಾಡಿ ಅವರು ಹಾಗೂ ಮಠದ ಪದಾಧಿಕಾರಿಗಳು ಕನ್ನಡ ಸೇರಿದಂತೆ ಹಲವಾರು ಭಾಷೆಗಳಲ್ಲಿ ಮಾಧುರ್ಯಭರಿತ ಹಾಡುಗಳನ್ನು ಹಾಡಿರುವ ಸೋನು ಅವರನ್ನು ಮಠದ ಸಂಪ್ರದಾಯದಂತೆ ಸನ್ಮಾನಿಸಿ ಗೌರವಿಸಿದರು.ಎಸಿಪಿ ಶಿವಪ್ರಸಾದ ನಾಯ್ಕ ಇತರರು ಬಿಗಿಬಂದೋಬಸ್ತ ಏರ್ಪಡಿಸಿದ್ದರು.



