*ಕನ್ನಡ ಧ್ವನಿ ಟ್ರಸ್ಟ್ ನ ನಾಡು -ನುಡಿಯ ಕಾಯಕಕ್ಕೆ ಗಣ್ಯರ ಮೆಚ್ಚುಗೆ*
*ಪುಸ್ತಕ ಖರೀದಿಸಿ ಓದುವ ಹವ್ಯಾಸ ಬೆಳೆಸಿಕೊಳ್ಳಿ : ಹೊರಟ್ಟಿ*
*ಸಾಹಿತಿಗಳ, ಸಾಧಕರು ಸನ್ಮಾನ ಕನ್ನಡ ಧ್ವನಿ ಕಾರ್ಯ ಶ್ಲಾಘನೀಯ : ಸತೀಶ ಕುಲಕರ್ಣಿ*
*12 ಕತೆ, ಕವನ ವಿಜೇತರಿಗೆ ಬಹುಮಾನ ವಿತರಣೆ – ಸಾಧಕರು ಮುಡಿಗೆ ಪ್ರಶಸ್ತಿಯ ಗರಿ*
ಹುಬ್ಬಳ್ಳಿ : ಕನ್ನಡ ಧ್ವನಿ ಟ್ರಸ್ಟ್ ವತಿಯಿಂದ ರಾಜ್ಯಮಟ್ಟದ ಕಥೆ, ಕವನ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ ಮತ್ತು ಸಾಧಕರ ಸನ್ಮಾನಿಸುವ ಕನ್ನಡ ಧ್ವನಿ ಸಂಭ್ರಮ ರವಿವಾರ ಅದ್ಧೂರಿಯಾಗಿ ನೆರವೇರಿತು.

ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಸಭಾಂಗಣದಲ್ಲಿ ನಡೆದ ಅರ್ಥ ಪೂರ್ಣ ಕಾರ್ಯಕ್ರಮವನ್ನು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಉದ್ಘಾಟಿಸಿ ಮಾತನಾಡಿ,
ಬರಹಗಾರರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಟ್ರಸ್ಟ್ ಕಾರ್ಯ ಶ್ಲಾಘನೀಯ. ಪ್ರತಿಯೊಬ್ಬರು ಪುಸ್ತಕ ಖರೀದಿಸಿ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು.

ಬರಹಗಾರರನ್ನು ಪ್ರೋತ್ಸಾಹಿಸುವ ಕಾರ್ಯವಾಗಬೇಕು. ಪುಸ್ತಕ ಖರೀದಿಸಿ ಓದುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದರು.
ಹಾವೇರಿಯ ಹಿರಿಯ ಸಾಹಿತಿ ಡಾ. ಸತೀಶ್ ಕುಲಕರ್ಣಿ ಮಾತನಾಡಿ, ಕುವೆಂಪು ಮತ್ತು ಬೇಂದ್ರೆ ಕನ್ನಡದ ಎರಡು ಕಣ್ಣುಗಳು. ಅವರನ್ನು ಬಿಟ್ಟು ಕನ್ನಡ ಸಾಹಿತ್ಯವಿಲ್ಲ. ಹೊಸ ಸಾಹಿತಿಗಳಿಗೆ ಮಾರ್ಗದರ್ಶನದ ಕೊರತೆ ಇದೆ. ಪುಸ್ತಕದ ಮುನ್ನಡಿ, ಬೆನ್ನುಡಿ, ಬೆಲೆ, ಕವರ್ ಪೇಜ್ ಕುರಿತು ಮಾರ್ಗದರ್ಶನ ಬೇಕಾಗಿದೆ. ಸಾಹಿತಿಗಳನ್ನು, ಸಾಧಕರನ್ನು ಸನ್ಮಾನಿಸುವ ಮೂಲಕ ಕನ್ನಡ ಧ್ವನಿ ಟ್ರಸ್ಟ್ ಹೊಸ ಸಂಚಲನ ಸೃಷ್ಟಿ ಮಾಡಿದೆ ಎಂದರು.
ಪತಂಜಲಿ ಯೋಗ ಸಮಿತಿ ದಕ್ಷಿಣ ಭಾರತ ಪ್ರಭಾರಿ ಭವರಲಾಲ್ ಆರ್ಯ ಟ್ರಸ್ಟ್ ಕಾರ್ಯ ಶ್ಲಾಘಿಸಿದರಲ್ಲದೇ ಕರ್ನಾಟಕ ರಾಜ್ಯ ಅಲ್ಲದೇ ಹೊರದೇಶದಲ್ಲೂ ಕನ್ನಡದಲ್ಲೇ ಯೋಗ ತರಬೇತಿ ನೀಡುತ್ತಿರುವುದಾಗಿ ಹೇಳಿದರು.
ಟ್ರಸ್ಟಿನ ಅಧ್ಯಕ್ಷ ಗಣಪತಿ ಗಂಗೊಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿ, ಇಂದು ಓದುಗರು ಹಾಗೂ ಓದುವ ಪ್ರವೃತ್ತಿ ಕಡಿಮೆಯಾಗಿದೆ. ಯುವಕರಲ್ಲಿ ಓದುವ ಅಭಿರುಚಿ ಬೆಳೆಸಬೇಕು ಎಂಬ ನಿಟ್ಟಿನಲ್ಲಿ ಕಥಾ, ಕವನ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು ಎಂದರು .
ಮಜೇಥಿಯಾ ಫೌಂಡೇಶನ್ ಚೇರಮನ್ ಜಿತೇಂದ್ರ ಮಜೇಥಿಯಾ ಅಧ್ಯಕ್ಷತೆ ವಹಿಸಿ ಮಾತನಾಡಿ ಕನ್ನಡ ಚಟುವಟಿಕೆಗಳಿಗೆ ಸದಾ ಬೆಂಬಲ ನೀಡುವುದಾಗಿ ಹೇಳಿದರು.
ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಜಿ.ಕೆ. ಆದಪ್ಪಗೌಡರ ಉಪಸ್ಥಿತರಿದ್ದರು.
ಸನ್ಮಾನ : ಐಪಿಎಲ್ ಅಂಪೈರ್ ಅಬಿಜಿತ್ ಬೆಂಗೇರಿಯವರಿಗೆ ಕ್ರಿಕೆಟ್ ಸಿರಿ , ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿವಿ ಸಿಂಡಿಕೇಟ್ ಸದಸ್ಯ ಡಾ.ಎಂ.ಜೆ.ಜೀವಣ್ಣವರಗೆ ವೈದ್ಯ ಸಿರಿ, ಕನಕದಾಸರ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಶಾಂತಣ್ಣ ಕಡಿವಾಳರಿಗೆ ಶಿಕ್ಷಣ ಸಿರಿ, ಅಚೀವರ್ ಜಿಮ್ ಉತ್ಪನ್ನಗಳ ತಯಾರಿಕೆ ಸಂಸ್ಥೆ ಮುಖ್ಯಸ್ಥ ಜಯರಾಮ ಕೆ.ಶೆಟ್ಟಿಯವರಿಗೆ ಕ್ರೀಡಾ ಸಿರಿ, ಸಿಲ್ಕ್ ಅಸೋಸಿಯೇಷನ್ ಇಂಡಿಯಾ ಸವಿತಾ ಅಮರಶೆಟ್ಟಿಯವರಿಗೆ ಶಿಕ್ಷಣ ಸಿರಿ, ಐರನ್ ಮ್ಯಾನ್ ಖ್ಯಾತಿಯ ಇನ್ಸಪೆಕ್ಟರ್ ಮುರಗೇಶ ಚನ್ನಣ್ಣವರ ಅವರಿಗೆ ಪೊಲೀಸ್ ಸಿರಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಇದೇ ವೇಳೆ ಪ್ರೊ.ರಾಜೇಶ ಹೊಂಗಲ ಅವರ ಹಸನಾಗಲಿ ಬದುಕು ಕೃತಿ ಬಿಡುಗಡೆ ಮಾಡಲಾಯಿತು.
*ಸ್ಪರ್ಧೆ ವಿಜೇತರಿಗೆ ಸನ್ಮಾನ*
ಕಥಾ ಸ್ಪರ್ಧೆಯಲ್ಲಿ ಜಮೀರ ರಿತ್ತಿ ಪ್ರಥಮ, ಲತಾ ಹೆಗಡೆ ದ್ವಿತೀಯ, ಎನ್.ಆರ್. ರೂಪಶ್ರೀ ತೃತೀಯ ಬಹುಮಾನ ಹಾಗೂ ವಿವೇಕ ಹೆಗಡೆ, ಸುಷ್ಮಾ ಸವಸುದ್ದಿ, ಮಲ್ಲಿಕಾರ್ಜುನ ಶೆಲ್ಲಿಕೇರಿ ಸಮಾಧಾನಕರ ಬಹುಮಾನ ನೀಡಿ ಸನ್ಮಾನಿಸಲಾಯಿತು. ಕವನ ಸ್ಪರ್ಧೆಯಲ್ಲಿ ವಿದ್ಯಾಸಾಗರ ದಿಕ್ಷಿತ್, ಮಂಜುನಾಥ ಹೊಸ್ಮನೆ, ಎಸ್.ಎಲ್, ವರಲಕ್ಷ್ಮಿ ಕ್ರಮವಾಗಿ ಮೂರು ಪ್ರಶಸ್ತಿ ಪಡೆದರು. ಡಾ.ದಿವ್ಯಾ ಹೆಗಡೆ, ಎನ್.ಶಂಕರರಾವ್, ಸಂದ್ಯಾ ಬದಾಮಿ ಇವರಿಗೆ ಸಮಾಧಾನಕರ ಬಹುಮಾನ ನೀಡಿ ಗೌರವಿಸಲಾಯಿತು.
ನಿವೃತ್ತ ಎಸ್ ಪಿ ಎ. ಆರ್.ಬಡೀಗೇರ ಸ್ವಾಗತಿಸಿದರು.ಶಾಹಿನ್ ಮೊಕಾಶಿ ಪ್ರೊ. ರಾಜೇಶ್ ಹೊಂಗಲ ಹಾಗೂ ಶ್ವೇತಾ ಕರ್ಕಿ ನಿರೂಪಿಸಿದರು.ಪುಂಡಲೀಕ ಹಡಪದ ವಂದಿಸಿದರು.



