ಏಳೂ ಪೀಠಗಳಲ್ಲಿ ಮಹಿಳಾ ನ್ಯಾಯಾಧೀಶರುಗಳಿಂದ ವಿಚಾರಣೆ
ಧಾರವಾಡ : ಮುಂಬರುವ ಆಗಸ್ಟ್ 1ರಂದು ಎಲ್ಲ ಏಳು ಪೀಠಗಳಲ್ಲಿ ಮಹಿಳಾ ನ್ಯಾಯಾಧೀಶರು ಮಾತ್ರ ವಿಚಾರಣೆ ನಡೆಸುವ ಮೂಲಕ ನ್ಯಾಯಾಂಗ ವಲಯದಲ್ಲಿ ಐತಿಹಾಸಿಕ ಕ್ಷಣಗಳಿಗೆ ಧಾರವಾಡ ಹೈಕೋರ್ಟ್ ಪೀಠ ಸಾಕ್ಷಿಯಾಗಲಿದೆ.

ಧಾರವಾಡ ಹೈಕೋರ್ಟ್ ಪೀಠದ 7 ನ್ಯಾಯಾಲಯದ ಸಭಾಂಗಣಗಳಲ್ಲಿ(3 ವಿಭಾಗೀಯ ಪೀಠಗಳು ಮತ್ತು 4ಏಕ ಸದಸ್ಯ ಪೀಠಗಳು) ಕೇವಲಮಹಿಳಾ ನ್ಯಾಯಾಧೀಶರು ವಿವಿಧ ಪ್ರಕರಣಗಳ ವಿಚಾರಣೆ ನಡೆಲಿದ್ದಾರೆ.
ಈ ಐತಿಹಾಸಿಕ ರೋಸ್ಟರ್ ಆದೇಶವನ್ನು ಹೈಕೋರ್ಟ್ ಮುಖ್ಯ ನಾಯಮೂರ್ತಿ ಜಸ್ಟೀಸ್ ವಿಭು ಬಖ್ರು ಅವರು ಹೊರಡಿಸಿದ್ದಾರೆ. ಆದೇಶದಂತೆ ಎಲ್ಲರೂ ಮಹಿಳಾ ನ್ಯಾಯಾಧೀಶರೇ ಪೀಠಗಳ ಮೂಲಕ ಕಾರ್ಯ ನಿರ್ವಹಿಸಲಿದ್ದು, ಇದು ಭಾರತೀಯ ನ್ಯಾಯಾಂಗ ವ್ಯವಸ್ಥೆಯಲ್ಲಿ ಹೈಕೋರ್ಟ್ ಪೀಠವೊಂದು ಮಹಿಳಾ ನ್ಯಾಯಾಧೀಶರಿಂದಲೇ ಮುನ್ನಡೆಯುವ ಮೂಲಕ ಗಮನಸೆಳೆಯಲಿದೆ.
ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಧಾರವಾಡ ಹೈಕೋರ್ಟ್ ವಕೀಲರ ವಕೀಲರ ಸಂಘವು ಸಲ್ಲಿಸಿದ್ದ ಮನವಿಗೆ ಅತ್ಯಂತ ಉದಾರವಾಗಿ ಸ್ಪಂದಿಸಿದ ಮುಖ್ಯ ನ್ಯಾಯಮೂರ್ತಿ ಜಸ್ಟಿಸ್ ವಿಭು ಬಕ್ರು ಅವರು, ಈ ಐತಿಹಾಸಿಕ ನಿರ್ಧಾರವನ್ನು ಕೈಗೊಂಡಿದ್ದಾರೆ. ಅವರ ಈ ಪ್ರಗತಿಪರ ನಾಯಕತ್ವವು ಉತ್ತರ ಕರ್ನಾಟಕದ ಪ್ರಾದೇಶಿಕ ಪೀಠಕ್ಕೆ ಅಪಾರ ಗೌರವವನ್ನು ತಂದುಕೊಟ್ಟಿದೆ ಎಂದು ಧಾರವಾಡ ಹೈಕೋರ್ಟ್ ವಕೀಲರ ಸಂಘದ ಅಧ್ಯಕ್ಷ ಬಿ. ಡಿ. ಹಿರೇಮಠ ಅವರು ಶ್ಲಾಘಿಸಿ, ಈ ಮೈಲಿಗಲ್ಲಿಗೆ ಕಾರಣರಾದ ಮುಖ್ಯ ನ್ಯಾಯಮೂರ್ತಿಗಳನ್ನು ಅಭಿನಂದಿಸಿದ್ದಾರೆ.
*ಗೌರವದ ಸ್ವಾಗತ*
ಅಂದು ನ್ಯಾಯಾಲಯದ ಸಭಾಂಗಣಗಳನ್ನು ಮುನ್ನಡೆಸಲಿರುವ ಗೌರವಾನ್ವಿತ ಮಹಿಳಾ ನ್ಯಾಯಾಧೀಶರಿಗೆ ಉತ್ತರ ಕರ್ನಾಟಕದ ಇಡೀ ಕಾನೂನು ವಲಯವು ಅತ್ಯಂತ ಗೌರವದ ಸ್ವಾಗತವನ್ನು ಕೋರಲಿದೆ. ಉನ್ನತ ನ್ಯಾಯಾಂಗದ ಚುಕ್ಕಾಣಿ ಹಿಡಿದಿರುವ ಮಹಿಳಾ ನಾಯಕತ್ವವನ್ನು ಕಣ್ಣಾರೆ ವೀಕ್ಷಿಸುವುದು ಉತ್ತರ ಕರ್ನಾಟಕದ ಹಾಗೂ ದೇಶದ ಯುವ ಮಹಿಳಾ ವಕೀಲರಿಗೆ, ಕಾನೂನು ವಿದ್ಯಾರ್ಥಿನಿಯರಿಗೆ ಮತ್ತು ವೃತ್ತಿಪರರಿಗೆ ಅಪಾರ ಸ್ಪೂರ್ತಿ ಮತ್ತು ಧೈರ್ಯವನ್ನು ಈ ಸಂದರ್ಭ ಒದಗಿಸಿ ಕೊಡಲಿಲಿದೆ ಎಂದು ಸಂಘವು ಅಭಿಪ್ರಾಯಪಟ್ಟಿದೆ.




