ಅಭಿಮಾನಿಗಳು, ಕೈ ಕಾರ್ಯಕರ್ತರ ಪಾಳೆಯದಲ್ಲಿ ಸಂತಸದ ಹೊನಲು: *28ರಂದು ಪೇಡೆನಗರಿಗೆ*
ಬೆಂಗಳೂರು : ಸಾಕ್ಷ್ಯನಾಶ ಯತ್ನ ಪ್ರಕರಣದಲ್ಲಿ ವಿಧಿಸಲಾಗಿದ್ದ ಧಾರವಾಡ ಪ್ರವೇಶದ ನಿರ್ಬಂಧದ ಷರತ್ತುಗಳನ್ನು ಇಂದು ಬೆಂಗಳೂರಿನ XLII ACJM ನ್ಯಾಯಾಲಯವು
ರದ್ದುಗೊಳಿಸಿ ಆದೇಶ ಹೊರಡಿಸಿದ್ದು ಇದರೊಂದಿಗೆ ಐದು ವರ್ಷಗಳಿಂದ ಸ್ವಕ್ಷೇತ್ರಕ್ಕೆ ಕಾಲಿಡಲಾಗದೆ ದೂರ ಉಳಿದಿದ್ದ ಧಾರವಾಡ ಗ್ರಾಮೀಣ ಶಾಸಕ , ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಎಲ್ಲಾ ಅಡೆತಡೆಗಳು ನಿವಾರಣೆ ಆಗಿದೆ.

ವಿನಯ್ ಕುಲಕರ್ಣಿ ಅವರಿಗೆ ನ್ಯಾಯಾಲಯದಿಂದ ದೊಡ್ಡ ಮಟ್ಟದ ರಿಲೀಫ್ ಸಿಕ್ಕಿದ್ದು, ಅವರ, ಅಭಿಮಾನಿಗಳು, ಬೆಂಬಲಿಗರ ವಲಯದಲ್ಲಿ ಸಂತಸಕ್ಕೆ ಹರ್ಷಕ್ಕೆ ಕಾರಣವಾಗಿದೆ.
ಪರಿಸ್ಥಿತಿಗಳಲ್ಲಿ ವಿಧಿಸಲಾಗಿದ್ದ ಧಾರವಾಡ ಜಿಲ್ಲಾ ಪ್ರವೇಶ ನಿರ್ಬಂಧವನ್ನು ಮುಂದುವರಿಸುವ ಅಗತ್ಯವಿಲ್ಲವೆಂದು ಪರಿಗಣಿಸಿ,
ಹಳೆಯ ಷರತ್ತನ್ನು ರದ್ದುಪಡಿಸಿದೆ. ಇದರ ಪರಿಣಾಮವಾಗಿ ಧಾರವಾಡ ಜಿಲ್ಲೆಗೆ ಪ್ರವೇಶಿಸಿ, ಕಾನೂನುಬದ್ಧ ವೈಯಕ್ತಿಕ, ವೃತ್ತಿಪರ, ಸಾರ್ವಜನಿಕ ಹಾಗೂ ಕ್ಷೇತ್ರಕ್ಕೆ ಸಂಬಂಧಿಸಿದ ಕರ್ತವ್ಯಗಳನ್ನು ನಿರ್ವಹಿಸಲು ಅವಕಾಶ ನೀಡಲಾಗಿದೆ.
ಆದಾಗ್ಯೂ, ನ್ಯಾಯಾಲಯವು ಹಲವು ಕಟ್ಟುನಿಟ್ಟಿನ ಷರತ್ತುಗಳನ್ನು ವಿಧಿಸಿದ್ದು ಜಿಲ್ಲೆಗೆ ಪ್ರವೇಶಿಸುವ ಸಂದರ್ಭದಲ್ಲಿ ಯಾವುದೇ ಸ್ವಾಗತ, ಮೆರವಣಿಗೆ, ರ್ಯಾಲಿ, ಸಂಭ್ರಮಾಚರಣೆ ಅಥವಾ ಸಾರ್ವಜನಿಕ ಸಭೆಯನ್ನು ಆಯೋಜಿಸುವಂತಿಲ್ಲ. ಪ್ರವೇಶದ ವೇಳೆ ಸಾರ್ವಜನಿಕ ಶಾಂತಿ, ಸಂಚಾರ ಅಥವಾ ಸಾಮಾನ್ಯ ಜನಜೀವನಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ನ್ಯಾಯಾಲಯ ಹೇಳಿದೆ.

ಪ್ರಕರಣದ ಯಾವುದೇ ಸಾಕ್ಷಿಯನ್ನು ನೇರವಾಗಿ ಅಥವಾ ಪರೋಕ್ಷವಾಗಿ ಸಂಪರ್ಕಿಸುವುದು, ಬೆದರಿಸುವುದು, ಪ್ರಭಾವ ಬೀರುವುದು, ಸಾಕ್ಷ್ಯವನ್ನು ಬದಲಾಯಿಸುವುದು ಅಥವಾ ನ್ಯಾಯಾಂಗ ಪ್ರಕ್ರಿಯೆಗೆ ಅಡ್ಡಿಪಡಿಸುವುದು ಸೇರಿದಂತೆ ಯಾವುದೇ ರೀತಿಯ ಹಸ್ತಕ್ಷೇಪ ಮಾಡಬಾರದು ಎಂಬ ಷರತ್ತುಗಳನ್ನೂ ನ್ಯಾಯಾಲಯ ವಿಧಿಸಿದೆ.
ದಿ.28ರಂದು ಧಾರವಾಡಕ್ಕೆ ಆಗಮಿಸುವ ಅವರು, 29ರಂದು ಅಮ್ಮಿನಬಾವಿಯಲ್ಲಿ ಜನ ಸ್ಪಂದನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.ಕಳೆದ 2021ರ ಸೆಪ್ಟೆಂಬರ್ ನಿಂದ ವಿನಯ ಕುಲಕರ್ಣಿ ಕ್ಷೇತ್ರದಲ್ಲಿ ಕಾಲಿಟ್ಟಿರಲಿಲ್ಲ. ಚುನಾವಣೆ ವೇಳೆ ಕ್ಷೇತ್ರಕ್ಕೆ ಬಾರದೇ ಗೆಲುವು ಸಾಧಿಸಿದ್ದರು.



