ಹುಬ್ಬಳ್ಳಿ : ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಪ್ತ , ಧಾರವಾಡದ ಹಿರಿಯ ಮುಖಂಡ ರಾಬರ್ಟ್ ದದ್ದಾಪುರಿ ನೇಮಕಗೊಂಡಿದ್ದಾರೆ.
ಇದುವರೆಗೆ ಅಧ್ಯಕ್ಷರಾಗಿದ್ದ ಶಾಕಿರ್ ಸನದಿ ಸ್ಥಾನದಲ್ಲಿ ಈ ನೇಮಕ ಮಾಡಲಾಗಿದ್ದು ಇಂದು ಅಧಿಕೃತವಾಗಿ ಆದೇಶ ಹೊರಬಿದ್ದಿದೆ.

ಯುವ ಕಾಂಗ್ರೆಸ್, ವಿವಿಧ ಮುಂಚೂಣಿ ಘಟಕದಲ್ಲಿ ಅಲ್ಲದೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ಮಾಡಿರುವ ರಾಬರ್ಟ್ ಪ್ರಸ್ತುತ ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿದ್ದಾರೆ.
2013ರ ಕೈ ಆಡಳಿತಾವಧಿಯಲ್ಲಿ ಸಿದ್ದರಾಮಯ್ಯ ಆಪ್ತರಾದ ದಾನಪ್ಪ ಕಬ್ಬೇರ ಅವರಿಗೆ ಹುಡಾ ಅಧ್ಯಕ್ಷ ಪಟ್ಟ ಒಲಿದಂತೆ ಈ ಅವಧಿಯ ಅಂತಿಮ ಹಂತದಲ್ಲಿ ಶಿವಕುಮಾರ್ ಕಟ್ಟಾ ಬೆಂಬಲಿಗ ರಾಬರ್ಟ್ ಅವರಿಗೆ ದೊರೆತಂತಾಗಿದೆ. ಕವಿ ಹೃದಯದ ಇವರು ಅನೇಕ ಕವನಗಳನ್ನು ರಚಿಸಿದ್ದಾರೆ.




