*ಮೂರು ದಿನಗಳ ವೈಭವದ ಗಣೇಶೋತ್ಸವ – 16ಕ್ಕೆ ವಿಸರ್ಜನೆ*
ಹುಬ್ಬಳ್ಳಿ: ಕಳೆದ 2022ರಲ್ಲಿ ನಗರದ ಚನ್ನಮ್ಮ ವರ್ತುಳ ಬಳಿಯ ಈದಗಾ ಮೈದಾನದಲ್ಲಿ ಗಣೇಶನ ಪ್ರತಿಷ್ಠಾಪನೆ ಆರಂಭಗೊಂಡಿದ್ದು ಈ ಬಾರಿ ಐದರ ಸಂಭ್ರಮವಾಗಿದ್ದು, ಹಿಂದಿನಂತೆಯೂ ಈ ಬಾರಿ ಸಹ ರಾಣಿ ಚೆನ್ನಮ್ಮ ಮೈದಾನ ಗಣೇಶೋತ್ಸವ ಮಂಡಳಿಯ ವತಿಯಿಂದಲೇ 14ರಿಂದ 16ರವರೆಗೆ ಮೂರು ದಿನಗಳ ಕಾಲ ಭಕ್ತಿ, ಸಂಭ್ರಮ ಹಾಗೂ ಸಾಂಸ್ಕೃತಿಕ ವೈಭವದೊಂದಿಗೆ ಗಣೇಶೋತ್ಸವ ಆಚರಿಸಲಾಗುತ್ತಿದೆ.

ಚನ್ನಮ್ಮ ಮೈದಾನ ಗಣೇಶೋತ್ಸವ ಮಂಡಳಿಯ ಅಧ್ಯಕ್ಷ, ನ್ಯಾಯವಾದಿ ಸಂಜಯ ಬಡಸ್ಕರ ಇಂದು ವಿವರ ನೀಡಿ, ಗಣೇಶೋತ್ಸವವನ್ನು ಕೇವಲ ಧಾರ್ಮಿಕ ಆಚರಣೆಗೆ ಸೀಮಿತಗೊಳಿಸದೆ, ನಮ್ಮ ಸಂಸ್ಕೃತಿ, ಪರಂಪರೆ ಮತ್ತು ಸಾಮಾಜಿಕ ಸಾಮರಸ್ಯವನ್ನು ಪ್ರತಿಬಿಂಬಿಸುವ ಮಾದರಿ ಉತ್ಸವವನ್ನಾಗಿ ಆಚರಿಸಲಿದ್ದು, ವಿಸರ್ಜನಾ ಮೆರವಣಿಗೆಯಲ್ಲಿ ನಾಡಿನ ಸಾಂಸ್ಕೃತಿಕ ಪರಂಪರೆ ಮತ್ತು ನೆಲದ ವೈವಿಧ್ಯತೆಯನ್ನು ಪ್ರತಿಬಿಂಬಿಸುವ ವಿವಿಧ ಕಲಾ ಪ್ರದರ್ಶನಗಳು ಹಾಗೂ ಸಾಂಸ್ಕೃತಿಕ ಮೇಳಗಳು ಪಾಲ್ಗೊಳ್ಳಲಿದ್ದು, ಡಿಜೆ ಅಬ್ಬರವಿಲ್ಲ ಎಂದರು.
ಗಣೇಶೋತ್ಸವಕ್ಕಾಗಿ ಸಿದ್ಧತೆಗಳು ಭರದಿಂದ ಸಾಗಿದ್ದು ನಾಳೆ ಮಂಟಪ ಮಹೂರ್ತ ನಡೆಯಲಿದೆ ಎಂದರು .
14ರಿಂದ ಮೂರು ದಿನ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಮಹಾನಗರ ಪಾಲಿಕೆಯಿಂದ ಉತ್ಸವ ನಡೆಸಲು ಈಗಾಗಲೇ ಅನುಮತಿ ದೊರೆತಿದ್ದು ಉತ್ಸವದ ಯಶಸ್ವಿ ಆಯೋಜನೆಗಾಗಿ ಸ್ವಾಗತ ಸಮಿತಿ ಮತ್ತು ಉತ್ಸವ ಸಮಿತಿಯನ್ನು ರಚಿಸಲಾಗಿದ್ದು, ಮಹಾದೇವ ಕರಮರಿ, ನಂದಕುಮಾರ ಹಾಗೂ ಡಾ.ಚಿಗರುಪಾಟಿ ವಿ.ಎಸ್.ವಿ. ಪ್ರಸಾದ್ ಅವರು ಉತ್ಸವದ ಮಹಾಪೋಷಕರಾಗಿದ್ದಾರೆ. ಸುಮಾರು 41ಸದಸ್ಯರನ್ನು ಒಳಗೊಂಡ ಉತ್ಸವ ಸಮಿತಿಗೆ ಉದ್ಯಮಿ ಗೌತಮ ಬಾಫ್ನಾ ಅವರು ನೂತನ ಅಧ್ಯಕ್ಷರಾಗಿದ್ದಾರೆಂದರು.
14 ರಂದು ಬೆಳಿಗ್ಗೆ 9 ಗಂಟೆಗೆ ಮೂರು ಸಾವಿರ ಮಠದ ಪ್ರಾಂಗಣದಿಂದ ಭವ್ಯ ಮೆರವಣಿಗೆಯ ಮೂಲಕ ಗಣಪತಿ ಮೂರ್ತಿಯನ್ನು ರಾಣಿ ಚೆನ್ನಮ್ಮ ಮೈದಾನಕ್ಕೆ ಕರೆತಂದು ವಿಧಿವಿಧಾನಗಳೊಂದಿಗೆ 12 ಗಂಟೆಗೆ ಪ್ರತಿಷ್ಠಾಪಿಸಲಾಗುವುದು. ನಂತರ ಎರಡು ದಿನಗಳ ಕಾಲ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಭಕ್ತಿಪೂರ್ವಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿವೆ. ಇದರೊಂದಿಗೆ ದರ್ಶನಕ್ಕೆ ಆಗಮಿಸುವ ಎಲ್ಲ ಭಕ್ತರಿಗೆ ನಿರಂತರ ಅನ್ನಸಂತರ್ಪಣೆಯನ್ನು ಸಮಿತಿಯ ವತಿಯಿಂದ ಆಯೋಜಿಸಲಾಗಿದೆ.

16ರಂದು ಮಧ್ಯಾಹ್ನ 12 ಕ್ಕೆ ಗಣೇಶ ಮೂರ್ತಿಯ ವಿಸರ್ಜನಾ ಮೆರವಣಿಗೆಗೆ ಚಾಲನೆ ದೊರೆಯಲಿದ್ದು, ಸಾರ್ವಜನಿಕ ಸಮಾರಂಭದ ಮುಖ್ಯ ಭಾಷಣಕಾರರಾಗಿ ವಿಶ್ವ ಹಿಂದೂ ಪರಿಷತ್ತಿನ ಕೇಂದ್ರೀಯ ಕಾರ್ಯದರ್ಶಿ ಗೋಪಾಲ್ ಅವರು ಆಗಮಿಸಲಿದ್ದಾರೆ. ಸಂಜೆ 5ಗಂಟೆಯ ಒಳಗೆ ಹೊಸೂರಿನ ಬಾವಿಯಲ್ಲಿ ಗಣೇಶನ ಮೂರ್ತಿಯನ್ನು ವಿಸರ್ಜಿಸಲಾಗುವುದು ಎಂದು ತಿಳಿಸಿದರು.
ಈಗಾಗಲೇ ಎಪಿಎಂಸಿಯಲ್ಲಿ ಹಿಂದೂ ಸಂಸ್ಕೃತಿ ಬಿಂಬಿಸುವ ಗಣೇಶನ ವಿಗ್ರಹ ತಯಾರಾಗಿದೆ.
ಉತ್ಸವ ಸಮಿತಿ ಅಧ್ಯಕ್ಷ ಗೌತಮ ಬಾಫ್ನಾ, ಮಹಾದೇವ ಕರಮರಿ, ರವಿ ದಂಡಿನ, ರಮೇಶ ಕದಂ ಇತರರು ಗೋಷ್ಠಿಯಲ್ಲಿದ್ದರು.



